ನೀಟ್​ಒಂದು ದೇಶ ಒಂದು ಚುನಾವಣೆ ಬೇಕಿಲ್ಲ: ವಿಧಾನಮಂಡಲದಲ್ಲಿ ಇಂದು 3 ನಿರ್ಣಯ ಮಂಡನೆಗೆ ಸರ್ಕಾರ ತೀರ್ಮಾನ

vd
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಜಿಎಸ್​ಟಿ ಬಾಕಿ, ಅನುದಾನದ ಜಿದ್ದಾಜಿದ್ದಿ ಬಳಿಕ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಮತ್ತೊಂದು ಸುತ್ತಿನ ಸಮರ ಸಾರಿದೆ. ಮೆಡಿಕಲ್ ಸೀಟು ಆಯ್ಕೆಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್), ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಒಂದು ರಾಷ್ಟ್ರ ಒಂದು ಚುನಾವಣೆ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಾರ್ಗಸೂಚಿಗಳನ್ನು ವಿರೋಧಿಸುವ ನಿರ್ಣಯವನ್ನು ಮಂಗಳವಾರ ವಿಧಾನಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ತೀರ್ವನಿಸಿದೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರು ನಿರ್ಣಯಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ತಮಿಳುನಾಡು ಮಾದರಿಯಲ್ಲಿ ನೀಟ್ ವಿರುದ್ಧ ವಿಧಾನಮಂಡಲದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿ ನೀಟ್ ವ್ಯವಸ್ಥೆಯಿಂದ ಹೊರ ಬರುವ ನಿರ್ಧಾರಕ್ಕೆ ಬರಲಾಯಿತು.

ನೀಟ್​ನಿಂದಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಪರೀಕ್ಷಾ ಅಕ್ರಮಗಳು ನಡೆದಿವೆ. ನ್ಯಾಯಾಲಯ ಕೂಡ ನೀಟ್ ಪಾವಿತ್ರ್ಯತೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹೀಗಿರುವಾಗ ನಮ್ಮ ರಾಜ್ಯಕ್ಕೆ ನೀಟ್ ಅವಶ್ಯಕತೆ ಏನಿದೆ ಎಂಬ ಪ್ರಶ್ನೆ ಎದ್ದಿದೆ. ತಮಿಳುನಾಡು, ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳಲ್ಲಿನ ಎಂಬಿಬಿಎಸ್ ಸೀಟುಗಳಲ್ಲಿ ಹೆಚ್ಚು ಪಾಲನ್ನು ಉತ್ತರ ಭಾರತೀಯರೇ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ವೃತ್ತಿ ಶಿಕ್ಷಣ ಸೀಟು ಹಂಚಿಕೆಗೆ ಮಾದರಿ ವ್ಯವಸ್ಥೆ ಕೂಡ ಇದೆ. ಕರ್ನಾಟಕದಲ್ಲೇ ಸೀಟು ಹಂಚಿಕೆ ಮಾಡಿದರೂ ಅನ್ಯರಾಜ್ಯದವರಿಗೆ ಮೀಸಲು ಇರಲಿದೆ. ಕರ್ನಾಟಕದವರಿಗೂ ಹೆಚ್ಚಿನ ಪಾಲು ಸಿಗಲಿದೆ. ಆದ್ದರಿಂದ ನೀಟ್ ವ್ಯವಸ್ಥೆಯಿಂದ ಹೊರಬರುವ ನಿರ್ಧಾರಕ್ಕೆ ಬರಲಾಯಿತು.

ಪುನರ್ವಿಂಗಡಣೆಗೆ ಆಕ್ಷೇಪ: ಕೇಂದ್ರ ಸರ್ಕಾರ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಗೆ ಮುಂದಾಗಿದೆ. ಈ ವಿಧೇಯಕಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ವಿಧಾನಸಭೆ, ಪರಿಷತ್​ನಲ್ಲಿ ವಿರೋಧಿಸುವ ನಿರ್ಣಯ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಪುನರ್ವಿಂಗಡಣೆ ಸಂದರ್ಭದಲ್ಲಿ ದಕ್ಷಿಣ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಕಡಿಮೆ ಮಾಡುತ್ತದೆ, ಉತ್ತರದ ರಾಜ್ಯಗಳಲ್ಲಿ ಕ್ಷೇತ್ರ ಹೆಚ್ಚಾಗುತ್ತವೆ ಎಂಬ ವದಂತಿಗಳಿವೆ. ಆ ರೀತಿಯಾದರೆ ರಾಜ್ಯಕ್ಕೆ ಅನ್ಯಾಯವಾಗುತ್ತದೆ. ಆದ್ದರಿಂದ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕು ಎಂಬ ಅಭಿಪ್ರಾಯ ಸಂಪುಟದಲ್ಲಿ ವ್ಯಕ್ತವಾಗಿದೆ. ಪುನರ್ವಿಂಗಡಣೆಯನ್ನು 2011ರ ಜನಗಣತಿ ಆಧರಿಸಿ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲಾಗುತ್ತದೆ.

ಏಕ ಚುನಾವಣೆಗೆ ವಿರೋಧ: ಕೇಂದ್ರ ಸರ್ಕಾರ ಇಡೀ ರಾಷ್ಟ್ರದಲ್ಲಿ ತರಲು ಉದ್ದೇಶಿಸಿರುವ ಒಂದು ರಾಷ್ಟ್ರ ಒಂದು ಚುನಾವಣೆ ವಿರೋಧಿಸುವ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ಸಂಪುಟ ನಿರ್ಧರಿಸಿತು. ಒಂದು ರಾಷ್ಟ್ರ ಒಂದು ಚುನಾವಣೆ ನಡೆಸಲು ಮಾಜಿ ರಾಷ್ಟ್ರಪತಿ ಕೋವಿಂದ್ ಅಧ್ಯಕ್ಷತೆಯ ಸಮಿತಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಪದ್ಧತಿ ಜಾರಿಗೆ ತಂದರೆ ರಾಜ್ಯಗಳ ಮೇಲೆ ಕೇಂದ್ರದ ಹಿಡಿತ ಹೆಚ್ಚಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ತರಲು ಅವಕಾಶ ನೀಡಬಾರದು. ವಿರೋಧಿಸಿ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಲು ತೀರ್ವನಿಸಲಾಗಿದೆ.

=

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net