

ಶಿವಮೊಗ್ಗ: ನೀಟ್ ಪರೀಕ್ಷಾ ಫಲಿತಾಂಶದ ಬಗ್ಗೆ ಹಲವು ಸಂದೇಹಗಳಿವೆ. ವ್ಯಾಪಕ ಅಕ್ರಮ ನಡೆದಿರುವ ಶಂಕೆಯಿದೆ. ಹೀಗಾಗಿ ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೀಟ್ ಪರೀಕ್ಷಾ ಪ್ರಕ್ರಿಯೆ ಮತ್ತು ಫಲಿತಾಂಶಗಳ ಕುರಿತು ತಕ್ಷಣವೇ ಸಿಬಿಐ ತನಿಖೆ ನಡೆಸಬೇಕು. ಪರೀಕ್ಷೆ ನಡೆಸುವಲ್ಲಿ ಮತ್ತು ಮೌಲ್ಯಮಾಪನ ಮಾಡುವಲ್ಲಿ ಎನ್‌ಟಿಎ ಸಂಪೂರ್ಣ ಅಸಮರ್ಥವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ದೂರಿದರು.
ಲೋಕಸಭೆ ಚುನಾವಣೆ ಫಲಿತಾಂಶದ ದಿನವೇ ನೀಟ್ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಎನ್‌ಟಿಎ ವಿದ್ಯಾರ್ಥಿಗಳು ಹಾಗೂ ಪಾಲಕರ ಗಮನವನ್ನು ಬೇರೆಡೆ ಸೆಳೆದು ಏನನ್ನೋ ಮರೆಮಾಚುವ ಪ್ರಯತ್ನ ಮಾಡಿದೆ. ದೇಶದ ವಿವಿಧೆಡೆ ಪರೀಕ್ಷೆ ವೇಳೆ ಅಕ್ರಮಗಳು ನಡೆದಿವೆ. ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ನಡೆಸುವ ಈ ಪರೀಕ್ಷೆ ಬಗ್ಗೆ ಅಪನಂಬಿಕೆ ಮೂಡಿದೆ. ಮುಖ್ಯವಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಪರೀಕ್ಷೆಯ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಸಿಬಿಐ ತನಿಖೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದರು.
ನೀಟ್‌ನ ಅನೇಕ ಟಾಪರ್‌ಗಳು ಒಂದೇ ತರಬೇತಿ ಕೇಂದ್ರದವರು ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ನಡೆದಿವೆ. ಹೀಗಾಗಿ ಸಮರ್ಪಕ ತನಿಖೆ ಅಗತ್ಯ ಎಂದು ಒತ್ತಾಯಿಸಿದರು.
ಎಬಿವಿಪಿ ನಗರ ಸಹ ಕಾರ್ಯದರ್ಶಿ ಅಭಿಷೇಕ್, ಪ್ರಮುಖರಾದ ರಘುನಂದನ್, ರವಿ, ಯಶವಂತ್, ಆಕಾಶ್, ಯಶಸ್ವಿನಿ, ಅಭಿಲಾಷಾ, ದರ್ಶನ್, ಆದರ್ಶ, ಅಕ್ಷಯ್ ಇತರರಿದ್ದರು.