1,563 ವಿದ್ಯಾರ್ಥಿಗಳಿಗೆ ನೀಡಿದ್ದ ಗ್ರೇಸ್ ಮಾರ್ಕ್ಸ್​​​​ ರದ್ದು; ಜೂ.23ರ ಮರುಪರೀಕ್ಷೆ ಶಿಫಾರಸಿಗೆ ಸುಪ್ರೀಂ ಅಸ್ತು

Untitled-design-79-1
Published on

ನವದೆಹಲಿ: ವೈದ್ಯಕೀಯ ಪ್ರವೇಶಕ್ಕೆ ಸಂಬಂಧಿಸಿದ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಎಕ್ಸಾಮ್)2024ರ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ 1563 ವಿದ್ಯಾರ್ಥಿಗಳ ಗ್ರೇಸ್‌ ಮಾರ್ಕ್‌ಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆಗೆ ಹಾಜರಾಗುವ ಆಯ್ಕೆಯನ್ನು ನೀಡಲಾಗುವುದು ಎಂಬ ಕೇಂದ್ರದ ಶಿಫಾರಸನ್ನು ಸುಪ್ರೀಂಕೋರ್ಟ್​​ ಅಂಗೀಕರಿಸಿದೆ. NEET ಫಲಿತಾಂಶದ ನಂತರ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠವು ವಿಚಾರಣೆ ನಡೆಸುತ್ತಿದೆ. ಪ್ರವೇಶಕ್ಕಾಗಿ ನಡೆಯುವ ಕೌನ್ಸೆಲಿಂಗ್ ಪ್ರಕ್ರಿಯೆ ನಿಗದಿತ ರೀತಿಯಲ್ಲಿ ಮುಂದುವರಿಯುತ್ತದೆ ಮತ್ತು ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಪೀಠವು ತಿಳಿಸಿದೆ. .

ಕೇಂದ್ರ ಮತ್ತು ಎನ್‌ಟಿಎ ಪರ ವಕೀಲರು ಗ್ರೇಸ್ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಆಯ್ಕೆಯನ್ನು ನೀಡಲಾಗುವುದು.ಜುಲೈ 6ರಿಂದ ಪ್ರಾರಂಭವಾಗುವ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅನುಕೂಲವಾಗುವಂತೆ ಮರುಪರೀಕ್ಷೆಯ ಫಲಿತಾಂಶಗಳನ್ನು ಜೂನ್ 30ರ ಮೊದಲು ಪ್ರಕಟಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ಈ ಮರುಪರೀಕ್ಷೆಗೆ ಹಾಜರಾಗಲು ಇಚ್ಛಿಸದವರಿಗೆ ಗ್ರೇಸ್ ಮಾರ್ಕ್ ಇಲ್ಲದ ಅವರು ಪಡೆದಿರುವ ಮೂಲ ಸ್ಕೋರ್‌ಕಾರ್ಡ್‌ಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. NEET-UG ಪರೀಕ್ಷೆಯನ್ನು ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net