

ಕರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಪರಿಸ್ಥಿತಿ ಕೈಮೀರುತ್ತಿದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಈ ಪೈಕಿ ಬೆಂಗಳೂರಿನಲ್ಲೇ 7,584 ಪ್ರಕರಣಗಳು ದಾಖಲಾಗಿವೆ. ಈ ನಡುವೆ, ಮುಂದಿನ 2 ತಿಂಗಳು ನಿರ್ಣಾಯಕವಾಗಲಿದ್ದು, ಮೇ ತಿಂಗಳಲ್ಲಿ ಕರೊನಾ ಅಬ್ಬರ ಮತ್ತಷ್ಟು ಹೆಚ್ಚಲಿದೆ ಎಂದು ತಜ್ಞರ ವರದಿ ಎಚ್ಚರಿಸಿದೆ. ಈವರೆಗೆ ಕೈಗೊಳ್ಳಲಾಗಿರುವ ಸುರಕ್ಷಾ ಕ್ರಮಗಳ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮುಖೇನ ರ್ಚಚಿಸಿ, ವಿವರಣೆ ನೀಡಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಾಂತ್ರಿಕ ಸಲಹಾ ಸಮಿತಿಯ ತುರ್ತು ಸಭೆ ನಡೆಸಿದ್ದಾರೆ. ಔಷಧ, ಚುಚ್ಚುಮದ್ದು, ಮಾತ್ರೆ, ಐಸಿಯು, ಅಂಬುಲೆನ್ಸ್ ವ್ಯವಸ್ಥೆ ಹೆಚ್ಚಳ ಮಾಡಲು, ಜಾತ್ರೆ, ಉತ್ಸವ ಇನ್ನಿತರ ಸಭೆ-ಸಮಾರಂಭಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲು ಮತ್ತು 144ನೇ ಕಲಂ ಅನ್ವಯ ನಿಷೇಧಾಜ್ಞೆ ಏಕರೂಪವಾಗಿ, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಿದೆ. ಚಿಕಿತ್ಸೆ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಸ್ಪಷ್ಟ ಸೂಚನೆ ನೀಡಿದ್ದರೂ, ಎಷ್ಟೋ ಕಡೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಖಾತ್ರಿಪಡಿಸಬೇಕು. ಇವು ಸರ್ಕಾರ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು. ಆದರೆ, ಸೋಂಕು ಪ್ರಸರಣದ ವೇಗವನ್ನು ತಗ್ಗಿಸುವಲ್ಲಿ ಜನಸಾಮಾನ್ಯರ ಪಾತ್ರವೂ ತುಂಬ ಮಹತ್ವದ್ದು. ಈಗಾಗಲೇ ರಾಜ್ಯದಲ್ಲಿ ಎಂಟು ಕಡೆ ರಾತ್ರಿ ಕರ್ಫ್ಯೂ ಜಾರಿಯಾಗಿದೆ. ಇದು ವೈಜ್ಞಾನಿಕವೋ, ಅವೈಜ್ಞಾನಿಕ ಕ್ರಮವೋ ಎಂಬ ಚರ್ಚೆ ನಡೆಯುತ್ತಿದೆಯಾದರೂ, ಜನರ ಅನಗತ್ಯ ಸಂಚಾರವನ್ನು ನಿಯಂತ್ರಿಸುವಲ್ಲಿ ಇಂಥ ಹೆಜ್ಜೆ ಕೊಂಚ ಸಹಾಯಕವಾಗಬಹುದೇನೋ.
ಲಸಿಕೆ ಬಂದಾಗಿದೆ, ಈಗೇನು ಭಯ ಎಂದು ಜನರು ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಜನಸಂದಣಿ ಸಾಮಾನ್ಯವಾಗಿದೆ. ಸುರಕ್ಷತಾ ಕ್ರಮಗಳನ್ನು, ಸರ್ಕಾರದ ನಿಯಮಗಳನ್ನು ಕಡೆಗಣಿಸಿ ಸಂಚರಿಸಿದರೆ ನಾವೇ ಅಪಾಯವನ್ನು ಆಹ್ವಾನಿಸಿಕೊಂಡಂತೆ ಎಂಬುದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಿದೆ. ಈಗಷ್ಟೇ ಚೇತರಿಕೆ ಕಾಣುತ್ತಿರುವ ಉದ್ಯಮವಲಯ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯ ಹಿತವನ್ನು ಗಮನದಲ್ಲಿ ಇರಿಸಿಕೊಂಡೇ ಲಾಕ್ಡೌನ್ನಂಥ ಕಠಿಣ ನಿರ್ಧಾರವನ್ನು ಸರ್ಕಾರ ಕೈಗೊಂಡಿಲ್ಲ. ಮತ್ತೆ ಲಾಕ್ಡೌನ್ ವಿಧಿಸುವ ಪರಿಸ್ಥಿತಿ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ರಾಜಕೀಯ ಪಕ್ಷಗಳು ಕರೊನಾದಂಥ ಸೂಕ್ಷ್ಮ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಹವಣಿಸಬಾರದು. ಸರ್ಕಾರ ಏನೇ ಕ್ರಮ ಕೈಗೊಂಡರೂ, ಅದನ್ನು ಟೀಕಿಸುತ್ತ ಗೊಂದಲ ಸೃಷ್ಟಿಸುವ ಬದಲು ರಚನಾತ್ಮಕ ಸಲಹೆಗಳನ್ನು ನೀಡಬೇಕು. ಸಮನ್ವಯದಿಂದ ಮುಂದಡಿ ಇಟ್ಟು, ಕರೊನಾ ಮಹಾಮಾರಿಯನ್ನು ನಿಯಂತ್ರಿಸುವ ಸಂಕಲ್ಪಕ್ಕೆ ಬದ್ಧರಾಗಬೆಕು. ತಜ್ಞರ ವರದಿಯನ್ನು ಕಡೆಗಣಿಸದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಸಾಗಬೇಕು.