

ಶಿವಮೊಗ್ಗ: ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬೆಳೆಸಲು ಮಾತೃಭಾಷೆಯೊಂದಿಗೆ ಭಾವನಾತ್ಮಕ ಬೆಸುಗೆ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಸಿ.ಭೀಮಸೇನ ರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯೋತ್ಸವ ಆಚರಣೆಗಷ್ಟೇ ಸೀಮಿತವಾಗದೆ ನಮ್ಮೊಳಗಿನ ಕನ್ನಡ ಪರ ಬದಲಾವಣೆಗಳಿಗೆ ಪೂರಕವಾಗಬೇಕು ಎಂದರು.
ಸಾಧನೆಗೆ ಎಂದಿಗೂ ಭಾಷೆ ಅಡ್ಡಿಯಾಗುವುದಿಲ್ಲ. ಎಲ್ಲ ಭಾಷೆಯನ್ನು ಗೌರವಿಸುವ ಜತೆಗೆ ನಮ್ಮ ಮಾತೃಭಾಷೆಯೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿಧಾನ ಮಂಡಲದ ಕಲಾಪದ ನೇರ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಪ್ರತ್ಯಕ್ಷವಾಗಿ ಕಲಾಪ ವೀಕ್ಷಿಸುವ ಮೂಲಕ ಕಾನೂನು ವಿದ್ಯಾರ್ಥಿಗಳು ಜ್ಞಾನ ಪಡೆದುಕೊಳ್ಳಬಹುದು ಎಂದು ಹೇಳಿದರು.
ರಂಗ ಕಲಾವಿದ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನೂ ಮೊದಲು ಚಿಂತಿಸಿ, ಕಲಿತು, ಅರ್ಥೈಸುವುದು ಕನ್ನಡದಲ್ಲಿಯೇ. ನಂತರ ಅದನ್ನು ಬೇರೆ ಭಾಷೆಗೆ ಅನುವಾದಿಸಲು ಸಾಧ್ಯವಾಗುತ್ತದೆ. ರಂಗಭೂಮಿ ಎಂಬುದು ಮನೋಸ್ಥೈರ್ಯ, ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಜೀವನಾಸಕ್ತಿ ಬೆಳೆಸುತ್ತದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣುಮೂರ್ತಿ ಮಾತನಾಡಿ, ಅಮ್ಮ ಎಂಬ ಪದವೇ ಸ್ವರ ವ್ಯಂಜನಗಳ ಮಿಶ್ರಣ. ಕನ್ನಡದ ಪ್ರತಿಯೊಂದು ಪದವೂ ವೈಜ್ಞಾನಿಕ ಹಿನ್ನೆಲೆ ಹೊಂದಿದೆ. ಭಾಷೆಯ ಬಳಕೆಯಿಂದ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಪ್ರಾಚಾರ್ಯೆ ಡಾ. ಎ.ಅನಲಾ ಇತರರಿದ್ದರು. ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.