ಗೊರಕೆ ಹೊಡೆಯದ ಶ್ರೀಮಂತ ವರ ಬೇಕು! ವೈರಲ್ ಆಯ್ತು ಜಾಹೀರಾತು!

add
Published on

ನವದೆಹಲಿ: ದಿನಪತ್ರಿಕೆಗಳಲ್ಲಿ ವರ ಬೇಕು/ವಧು ಬೇಕು ಎನ್ನುವ ಜಾಹೀರಾತುಗಳನ್ನು ನೋಡಿರುತ್ತೀರಿ. ತೀರಾ ವಿಚಿತ್ರ ಎನಿಸುವ ಜಾಹೀರಾತುಗಳು ಅದರಲ್ಲಿ ಬರುವುದಂತೂ ಸುಳ್ಳಲ್ಲ. ಆದರೆ ಈ ಜಾಹೀರಾತು ತೀರಾ ವಿಶೇಷ. ಇಲ್ಲಿ ವಧುವಿಗೆ ಹೂಸು ಬಿಡದ ಹಾಗೂ ಗೊರಕೆ ಹೊಡೆಯದ ವರ ಬೇಕಂತೆ!


ಹೌದು! ಇಂತದ್ದೊಂದು ವಿಚಿತ್ರ ಜಾಹೀರಾತು ಇತ್ತೀಚೆಗೆ ಪತ್ರಿಕೆಯಲ್ಲಿ ಬಂದಿತ್ತು. 30 ವರ್ಷ ದಾಟಿರುವ ಫೆಮಿನಿಸ್ಟ್, ಸೋಶಿಯಲ್ ವರ್ಕರ್ ಹೆಣ್ಣು ಮಗಳಿಗೆ 25ರಿಂದ 28 ವಯಸ್ಸಿನ ಹ್ಯಾಂಡ್​ಸಮ್ ಗಂಡು ಬೇಕು. ಆತ ಬಿಜೆನೆಸ್ ಫ್ಯಾಮಿಲಿಯ ಒಬ್ಬನೇ ಮಗನಾಗಿರಬೇಕು. ಬಂಗಲೆ ಇರಬೇಕು ಅಥವಾ 20 ಎಕರೆ ಫಾರ್ಮ್​ ಹೌಸ್ ಇರಬೇಕು. ಅತಿ ಮುಖ್ಯವಾಗಿ ಗೊರಕೆ ಹೊಡೆಯಬಾರದು ಹಾಗೂ ಹೂಸು ಬಿಡಬಾರದು ಎಂದು ಹೇಳಲಾಗಿತ್ತು. ಈ ಎಲ್ಲ ಅರ್ಹತೆ ಇರುವವರು ಮೇಲ್​ ಮಾಡಬಹುದು ಎಂದು ಮೇಲ್​ ಐಡಿ ಒಂದನ್ನು ಕೊಡಲಾಗಿತ್ತು.


ಅಷ್ಟಕ್ಕೂ ಈ ಜಾಹೀರಾತು ನಿಜವಾದ ವ್ಯಕ್ತಿಯಿಂದ ಬಂದಿದೆಯೇ ಅಥವಾ ಯಾರಾದರೂ ತಮಾಷೆ ಮಾಡಿದ್ದಾರೆಯೇ ಎಂದು ಬಿಬಿಸಿ ನ್ಯೂಸ್ ಪತ್ತೆ ಹಚ್ಚಿದೆ. ತಂಗಿಯ 30ನೇ ವರ್ಷದ ಬರ್ತ್​ಡೇ ಪ್ರಯುಕ್ತ ಅಣ್ಣನೊಬ್ಬ ಆಕೆಯ ಸ್ನೇಹಿತೆಯೊಂದಿಗೆ ಸೇರಿಕೊಂಡು ಮಾಡಿರುವ ತಮಾಷೆ ಇದು. ಬರ್ತ್​ ಡೇ ದಿನ ನನಗೆ ಅಣ್ಣ ಒಂದು ಮೇಲ್​ ಐಡಿ ಮತ್ತು ಅದರ ಪಾಸ್​ವರ್ಡ್ ಕೊಟ್ಟ. ಅದಾದ ನಂತರ ಪೇಪರ್​ನಲ್ಲಿ ಬಂದ ಜಾಹೀರಾತನ್ನು ಕಳುಹಿಸಿದ. ಇಮೇಲ್ ತೆರೆದು ನೋಡಿದಾಗ ಜನರು ಸಿಕ್ಕಾಪಟ್ಟೆ ಬೈದಿರುವುದು ನನ್ನ ಕಣ್ಣಿಗೆ ಬಿದ್ದಿದೆ. ಸಾವಿರಾರು ಮೇಲ್​ಗಳಲ್ಲಿ ಜನರು ಬೈದಿದ್ದಾರೆ ಎಂದಿದ್ದಾಳೆ ಬರ್ತ್​ಡೇ ಆಚರಿಸಿಕೊಂಡಿರುವ ಯುವತಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net