

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕ್ಷಯರೋಗ (ಟಿ.ಬಿ), ಇಂದಿನ ಆಧುನಿಕ ಮಾನವ ಕುಲಕ್ಕೂ ಕಂಟಕವಾಗಿ ಉಳಿದುಕೊಂಡಿದೆ. ಪ್ರಮುಖವಾಗಿ ಭಾರತ ಕ್ಷಯರೋಗದಿಂದ ಬಾಧಿತವಾದ ರಾಷ್ಟ್ರಗಳಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ ಇತ್ತೀಚೆಗೆ ಕರೊನಾ ವೈರಸ್ ಕಲಿಸಿಕೊಟ್ಟ ಪಾಠದಿಂದ ದೇಶದಲ್ಲಿರುವ ಕ್ಷಯರೋಗದ ಹಾಗೂ ಅನೇಕ ಸಾಂಕ್ರಾಮಿಕ ರೋಗಗಳ ಹೊರೆಯನ್ನು ಸಮರ್ಪಕವಾಗಿ ಕಡಿಮೆಗೊಳಿಸಲು ಸಹಾಯವಾಗುತ್ತದೆ.
ಕ್ಷಯರೋಗದ ಲಕ್ಷಣಗಳೇನು?
ಎರಡು ವಾರಕ್ಕಿಂತ ಹೆಚ್ಚು ಕಾಣಿಸಿಕೊಳ್ಳುವ ಕೆಮ್ಮು ಹಾಗೂ ಜ್ವರ, ಕೆಮ್ಮಿನಲ್ಲಿ ರಕ್ತ ಬೀಳುವುದು, ಊಟ ಸೇರದೆ ಇರುವುದು, ನಿಶ್ಯಕ್ತಿ ಹಾಗೂ ದೇಹದ ತೂಕ ಕಡಿಮೆಯಾಗುವುದು. ಕ್ಷಯ ರೋಗ ಯಾವುದೇ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು. ಅದರಲ್ಲೂ ಮಕ್ಕಳಲ್ಲಿ, ವೃದ್ಧರಲ್ಲಿ, ಸಕ್ಕರೆ ಕಾಯಿಲೆ, ಕಿಡ್ನಿ ತೊಂದರೆ, ಏಡ್ಸ್, ಕ್ಯಾನ್ಸರ್ಗಳಂಥ ರೋಗಗಳಿಂದ ಬಳಲುತ್ತಿರುವವರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕ್ಷಯ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಗಾಳಿಯ ಮೂಲಕ ಹರಡುವ ಕಾಯಿಲೆ.
ಶ್ವಾಸಕೋಶದ ಕ್ಷಯರೋಗ ಪತ್ತೆ ಹಚ್ಚುವುದು ಹೇಗೆ?
ಕಫ ಪರೀಕ್ಷೆ, ಕಫದ ಸಿ.ಬಿ-ನಾಟ್ (CB-NAAT) ಪರೀಕ್ಷೆ, ಎದೆಯ ಕ್ಷ- ಕಿರಣ (ಚಢ), ಅವಶ್ಯವಿದ್ದರೆ ಎದೆಯ ಸಿ.ಟಿ ಸ್ಕಾ್ಯನ್, ಬ್ರಾಂಕೊಸ್ಕೋಪಿ ಮಾಡಲಾ ಗುತ್ತದೆ. ಸಿ.ಬಿ-ನಾಟ್ ಪರೀಕ್ಷೆಯ ವಿಶೇಷ ಏನೆಂದರೆ ಈ ಪರೀಕ್ಷೆಯಲ್ಲಿ ಕ್ಷಯ ರೋಗ ಆರಂಭಿಕ ಹಂತದಲ್ಲಿದ್ದರೂ ಪತ್ತೆಹಚ್ಚಬಹುದು (ಎಂಡಿಆರ್-ಟಿಬಿ ಕೂಡ). ಇದನ್ನು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಸರ್ಕಾರದಿಂದ ಉಚಿತವಾಗಿ ಮಾಡಲಾಗುತ್ತದೆ.
ಚಿಕಿತ್ಸೆ ಹೇಗಿರುತ್ತದೆ?
ಒಳ್ಳೆಯ ವಿಚಾರವೆಂದರೆ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಮುಖ ಮಾಡಬಹುದು. ಸರಿಯಾದ ಸಮಯಕ್ಕೆ ರೋಗವನ್ನು ಪತ್ತೆ ಹಚ್ಚಿ, ಚಿಕಿತ್ಸೆ ಆರಂಭಿಸಿದರೆ ವ್ಯಕ್ತಿ ಸಂಪೂರ್ಣವಾಗಿ ಗುಣಮುಖನಾಗುತ್ತಾನೆ. ಕ್ಷಯರೋಗದಿಂದ ಬಳಲುತ್ತಿರುವ ವ್ಯಕ್ತಿ ವೈದ್ಯರ ಸೂಚನೆಯ ಅಡಿ, ಕನಿಷ್ಠ 6 ತಿಂಗಳು ಟಿ.ಬಿ. ಮಾತ್ರೆಗಳನ್ನು ಚಾಚೂತಪ್ಪದೆ ತೆಗೆದುಕೊಳ್ಳಬೇಕು. ಚಿಕಿತ್ಸೆ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತದೆ. ರೋಗಿ 6 ತಿಂಗಳ ಚಿಕಿತ್ಸೆ ಸರಿಯಾಗಿ ತೆಗೆದುಕೊಳ್ಳದಿದ್ದರೆ ಕ್ಷಯ ರೋಗ ಮತ್ತೆ ಮರುಕಳಿಸಬಹುದು ಹಾಗೂ ಔಷಧ ನಿರೋಧಕ ಟಿ.ಬಿ (ಎಂಡಿಆರ್-ಟಿಬಿ)ಯಾಗಿ ಪರಿವರ್ತನೆಗೊಳ್ಳಬಹುದು. ಈ ಕಾರಣದಿಂದ ಭಾರತದಲ್ಲಿ ಕ್ಷಯರೋಗ ನಿಯಂತ್ರಣ ಕಠಿಣವಾಗಿದೆ.
ಔಷಧ ನಿರೋಧಕ ಟಿ.ಬಿ (MDR-TB)) ಎಂದರೇನು?
ಎಂಡಿಆರ್-ಟಿಬಿ ಸಾಮಾನ್ಯ 6 ತಿಂಗಳ ಟಿ.ಬಿ. ಚಿಕಿತ್ಸೆಗೆ ಸ್ಪಂದಿಸುವುದಿಲ್ಲ. ಈ ತರಹದ ಕ್ಷಯರೋಗಕ್ಕೆ ಒಂದೂವರೆ-ಎರಡು ವರ್ಷಗಳ ಕಾಲ ಚಿಕಿತ್ಸೆ ನೀಡಬೇಕಾಗುತ್ತದೆ ಹಾಗೂ ಚಿಕಿತ್ಸೆ ಪಡೆದರೂ ಕೇವಲ 40-50% ರಷ್ಟು ರೋಗಿಗಳಷ್ಟೇ ಗುಣಮುಖರಾಗುತ್ತಾರೆ. ಎಂಡಿಆರ್-ಟಿಬಿ ರೋಗಿಗಳ ಸಂಖ್ಯೆ ಭಾರತದಲ್ಲಿ ದಿನೇದಿನೇ ಏರಿಕೆಯಾಗುತ್ತಿದ್ದು, 2018ರಲ್ಲಿ 1.3 ಲಕ್ಷ ಜನರಲ್ಲಿ ಎಂಡಿಆರ್-ಟಿಬಿ ಕಾಣಿಸಿಕೊಂಡಿದೆ. ಈ ಕಾಯಿಲೆ ಕಾಣಿಸಿಕೊಳ್ಳಲು ಮುಖ್ಯ ಕಾರಣವೇನೆಂದರೆ ರೋಗಿ ಆರು ತಿಂಗಳ ನಿರ್ದಿಷ್ಟಾವಧಿಯ ಚಿಕಿತ್ಸೆಯನ್ನು ಪೂರ್ಣಗೊಳಿಸದೆ ಇರುವುದು.
ಕ್ಷಯ ರೋಗ ನಿಮೂಲನೆಯಲ್ಲಿ ನಮ್ಮ-ನಿಮ್ಮೆಲ್ಲರ ಪಾತ್ರವೇನು?
ಸರ್ಕಾರವು 2025ರ ಒಳಗೆ ಭಾರತವನ್ನು ‘ಕ್ಷಯ ಮುಕ್ತ ದೇಶ’ವನ್ನಾಗಿ ಮಾಡುವ ಪ್ರಯತ್ನಕ್ಕೆ ಕೈ ಹಾಕಿದೆ. ಈ ಗುರಿಯನ್ನು ಮುಟ್ಟಬೇಕಾದರೆ, ಸರ್ಕಾರ ಹಾಗೂ ವೈದ್ಯರು ಹರಸಾಹಸ ಪಟ್ಟರೆ ಸಾಲದು, ದೇಶದ ಪ್ರಜೆಗಳಾಗಿರುವ ನಾವು ಕೂಡ ಕೆಲ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ.
ಹೀಗೆ ಮಾಡೋಣ:
ಚಿಕಿತ್ಸೆಗೆ ಸ್ಪಂದಿಸದ ಕೆಮ್ಮು ಅಥವಾ ಎರಡು ವಾರಕ್ಕಿಂತ ಹೆಚ್ಚಾಗಿ ಕೆಮ್ಮು/ಜ್ವರ ಕಾಣಿಸಿಕೊಂಡರೆ ಶ್ವಾಸಕೋಶ ತಜ್ಞರನ್ನು ಕಂಡು ಎದೆಯ ಎಕ್ಸರೇ ಹಾಗೂ ಕಫ ಪರೀಕ್ಷೆಯನ್ನು ಮಾಡಿಸಬೇಕು.
ಬಂಧುಬಳಗದವರು ಕ್ಷಯರೋಗದಿಂದ ಬಳಲುತ್ತಿದ್ದರೆ ಅವರಿಗೆ ಪೂರ್ಣಾವಧಿಯ 6 ತಿಂಗಳ ಕಾಲ ಚಿಕಿತ್ಸೆ ತೆಗೆದುಕೊಳ್ಳಲು ಪ್ರೇರೇಪಿಸಬೇಕು. ಏಕೆಂದರೆ ಕ್ಷಯರೋಗಿಗಳು ಮೊದಲ ಕೆಲವು ವಾರಗಳ ಕಾಲ ಟಿ.ಬಿ. ಮಾತ್ರೆಗಳನ್ನು ತೆಗೆದುಕೊಂಡ ಬಳಿಕ, ಅವರ ರೋಗಲಕ್ಷಣಗಳು ಮಾಯವಾಗುತ್ತವೆ. ಇದು ಅವರಿಗೆ ಚಿಕಿತ್ಸೆ 6 ತಿಂಗಳ ಕಾಲ ಮುಂದುವರಿಸಲು ಅಡ್ಡಿಯಾಗಬಹುದು.
ಎಲ್ಲ ಕ್ಷಯರೋಗಿಗಳು ಪೂರ್ಣಾವಧಿಯ ಚಿಕಿತ್ಸೆ ಪಡೆದರಷ್ಟೇ ಅದನ್ನು ಒಬ್ಬರಿಂದೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು ಹಾಗೂ ಎಂಡಿಆರ್-ಟಿಬಿ ನಿರ್ವಣವಾಗದಂತೆ ನೋಡಿಕೊಳ್ಳಬಹುದು. ಇದರಿಂದ ಕ್ಷಯ ರೋಗ ನಿಮೂಲನೆ ಖಂಡಿತ ಸಾಧ್ಯ.
ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ಮೊದಲ ಕೆಲವು ವಾರಗಳ ಕಾಲ ಪ್ರತ್ಯೇಕಿಸಿ ಇನ್ನೊಬ್ಬರ ಜೊತೆ ನಿಕಟ ಸಂಪರ್ಕವಾಗದಂತೆ ಎಚ್ಚರವಹಿಸಬೇಕು. ಚಿಕಿತ್ಸೆ 2 ವಾರ ಮುಗಿದಮೇಲೆ, ಅವರು ಚಿಕಿತ್ಸೆ ಮುಂದುವರಿಸುತ್ತ ಎಂದಿನಂತೆ ಜೀವನ ನಡೆಸಬಹುದು.
ಕ್ಷಯ ರೋಗದ ಬಗ್ಗೆ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಬೇಕು (ಉದಾ: ಕ್ಷಯ ರೋಗ ವಾಸಿಯಾಗುವುದಿಲ್ಲ, ಯಾರೋ ಮಾಟ-ಮಂತ್ರ ಮಾಡಿದ್ದಾರೆ, ಉತ್ತಮ ವರ್ಗದವರಿಗೆ ಕ್ಷಯರೋಗ ಬರುವುದಿಲ್ಲ, ನಮ್ಮ ವಂಶದಲ್ಲಿ ಯಾರಿಗೂ ಟಿ.ಬಿ. ಇಲ್ಲ ನಮಗೆ ಏಕೆ ಬರುತ್ತದೆ, ಗರ್ಭಿಣಿಯರು ಟಿ.ಬಿ. ಮಾತ್ರೆ ತೆಗೆದುಕೊಳ್ಳಬಾರದು, ಕ್ಷಯರೋಗ ಬಂದವರನ್ನು ಮದುವೆ ಆಗಬಾರದು, ಅವರಿಗೆ ಮಕ್ಕಳಾಗುವುದಿಲ್ಲ, ಸಾಮಾಜಿಕ ಕಳಂಕ, ಗುಣವಾದ ಮೇಲೂ 6 ತಿಂಗಳ ಕಾಲ ಚಿಕಿತ್ಸೆ ಏಕೆ ಮುಂದುವರಿಸಬೇಕು). ಇವು ಜನಸಾಮಾನ್ಯರಲ್ಲಿ ಇರುವ ಹಲವು ತಪ್ಪು ಕಲ್ಪನೆಗಳು.
ಕರೊನಾದ ಪಾಠ ಕ್ಷಯ ನಿಮೂಲನೆಗೆ ವರದಾನ
ಸದ್ಯದ ಪರಿಸ್ಥಿತಿಯಲ್ಲಿ ನಾವು ಕರೊನಾ ವೈರಸ್ (ಮರಣ ಪ್ರಮಾಣ-3%) ಬಗ್ಗೆ ಎಚ್ಚೆತ್ತುಕೊಂಡಿದ್ದೇವೆ, ಹಿಂದೆಂದೂ ಇಲ್ಲದ- ನಮ್ಮ ವೈಯಕ್ತಿಕ/ಕೆಮ್ಮು ನೈರ್ಮಲ್ಯದ ((personal/cough hygeine) ಬಗ್ಗೆ ಹಾಗೂ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕತೆಯನ್ನು ತಡೆಯಲು ಅವಶ್ಯಕ ಕ್ರಮಗಳನ್ನು ಪಾಲಿಸುತ್ತಿದ್ದೇವೆ. ಭಾರತದವರಿಗೆ ಕ್ಷಯರೋಗ ಕಲಿಸಿ ಕೊಡಲಾಗದ ಪಾಠವನ್ನು ಈ ವೈರಸ್ ಕಲಿಸಿಕೊಟ್ಟಿದೆ. ಇದೇ ರೀತಿ ವರ್ಷದಲ್ಲಿ ಲಕ್ಷಾಂತರ ಭಾರತೀಯರನ್ನು ಕೊಲ್ಲುತ್ತಿರುವ ಕ್ಷಯರೋಗದ (ಎಂಡಿಆರ್-ಟಿಬಿ ಮರಣ ಪ್ರಮಾಣ-40%) ಬಗ್ಗೆಯೂ ಎಚ್ಚರ ವಹಿಸೋಣ. ಭಾರತವನ್ನು ಕ್ಷಯಮುಕ್ತವನ್ನಾಗಿ ಮಾಡಲು ಕೈಜೋಡಿಸೋಣ.