ಗಮನ ಸೆಳೆದ ನೀರಾ ಮಾರಾಟ ಕೇಂದ್ರ

nee raw feb
Published on

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಮಲೆನಾಡು ನಟ್ಸ್ ಅಂಡ್ ಸ್ಪೈಸಸ್ ಪೊ›ಡ್ಯೂಸರ್ಸ್ ಕಂಪನಿ ತೆರೆದಿರುವ ಪರಿಶುದ್ಧ ನೀರಾ ಮಾರಾಟ ಕೇಂದ್ರ ಪಾನ ಪ್ರಿಯರನ್ನು ಸೆಳೆಯುತ್ತಿದೆ.

ಮೇಳದಲ್ಲಿನ ವಿವಿಧ ಸ್ಟಾಲ್​ಗಳಿಗೆ ಭೇಟಿ ನೀಡುವ ಸಾರ್ವಜನಿಕರು ನೀರಾ ಮಾರಾಟ ಕೇಂದ್ರದ ಎದುರು ಬರುತ್ತಿದ್ದಂತೆ ಧುತ್ತನೆ ನಿಂತು ಅದರೆಡೆಗೆ ಹೆಜ್ಜೆ ಹಾಕಿ, ಇದು ಪ್ಯೂರ್ ನೀರಾನಾ? ಅಂತ ಕೇಳಿ ಒಂದೊಂದು ಕಪ್ ಸವಿಯುತ್ತಿದ್ದಾರೆ.

ನೀರಾ ಎಂದರೆ ಆಲ್ಕೋಹಾಲ್ ಅಂಶ ಒಳಗೊಂಡಿರುತ್ತದೆ ಎನ್ನುವ ಪೂರ್ವಾಗ್ರಹ ಹೊಂದಿದವರು ಮಳಿಗೆಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಯನ್ನು ಹಲವಾರು ರೀತಿಯಲ್ಲಿ ವಿಚಾರಣೆ ಮಾಡಿ ತಮ್ಮ ಅನುಮಾನ ಪರಿಹಾರವಾದ ನಂತರವಷ್ಟೆ ನೀರಾ ಗುಟುಕರಿಸುತ್ತಾರೆ. ಕುಡಿದ ನಂತರ ‘ಒಳ್ಳೆ ಟೇಸ್ಟ್ ’ ಎಂದು ಶ್ಲಾಘಿಸುತ್ತಾರೆ.

ಎರಡು ದಿನಗಳ ಅವಧಿಯಲ್ಲಿ 230 ಲೀಟರ್ ನೀರಾ ಮಾರಾಟವಾಗಿದೆ. ಹಲವರು ತಾವು ನೀರಾ ಸೇವಿಸಿದ ನಂತರ ತಮ್ಮ ಸ್ನೇಹಿತರು, ಕುಟುಂಬ ಸದಸ್ಯರನ್ನು ಕರೆತಂದು ಅವರಿಗೂ ರುಚಿ ತೋರಿಸಿದ್ದಾರೆ.

ಭದ್ರಾವತಿ ಮೂಲದ ಮಲೆನಾಡು ನಟ್ಸ್ ಅಂಡ್ ಸ್ಪೈಸಸ್ ಪ್ರೊಡ್ಯೂಸರ್ಸ್ ಕಂಪನಿ ನೀರಾ ಇಳಿಸಲು 2,500 ಮರಗಳನ್ನು ಗುರುತಿಸಿ ಅದಕ್ಕೆ ಅಗತ್ಯವಾದ ಪರವಾನಗಿ ಪಡೆದುಕೊಂಡಿದೆ.

ಅತ್ಯಂತ ವೈಜ್ಞಾನಿಕವಾಗಿ ನಿತ್ಯವೂ ನೀರಾ ಇಳಿಸಿ ಅದನ್ನು ಮೂರರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಅದೇ ಉಷ್ಣತೆಯಲ್ಲಿ ಸ್ಲಷ್ ಮಷಿನ್​ನಲ್ಲಿ ಇರಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ ಎಂದು ಸಂಸ್ಥೆಯ ನೌಕರ ವಜೀರ್ ಹೇಳುತ್ತಾರೆ.

ವಿವಿಧ ನೀರಾ ಮಳಿಗೆಗೆ ಭೇಟಿ ನೀಡಿದ ತೆಂಗು ಬೆಳೆಗಾರರು ನೀರಾ ಇಳಿಸುವ ವ್ಯವಹಾರದಲ್ಲಿನ ಲಾಭ-ನಷ್ಟ, ಕಾನೂನು ಸಮಸ್ಯೆಗಳ ಬಗ್ಗೆ ಅಲ್ಲಿನ ಸಿಬ್ಬಂದಿ ಯಿಂದ ಮಾಹಿತಿ ಪಡೆಯುತ್ತಿದ್ದಾರೆ. ತಾವೂ ನೀರಾ ವ್ಯವಹಾರ ಆರಂಭಿಸಲು ಏನು ಮಾಡಬೇಕು ಎಂದೂ ಮಾರ್ಗದರ್ಶನವನ್ನೂ ಬಯಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ನೀರಾ ಮಾರಾಟ ಮಾಡುವ ಫ್ರಾಂಚೈಸಿ ಪಡೆದಿರುವ ಹೊಸದುರ್ಗ ಮೂಲದ ಕೃಷಿಕ ಶ್ರೀನಿವಾಸಲು ಬನಶಂಕರಿ ಮೊದಲ ಹಂತದಲ್ಲಿ ನೀರಾ ಕೇಂದ್ರ ತೆರೆದು ಯಶಸ್ವಿಯಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಅಲ್ಲಲ್ಲಿ ಕೇಂದ್ರಗಳ ವಿಸ್ತರಣೆ ಕಾರ್ಯವೂ ಚಾಲ್ತಿಯಲ್ಲಿದೆ.

ನೀರಾ ಇಳಿಸುವುದು ಹಾಗೂ ಸಂಗ್ರಹಿಸುವ ಕಾರ್ಯದಲ್ಲಿ ಹೆಚ್ಚು ಮುತುವರ್ಜಿ ವಹಿಸಬೇಕು. ವೈಜ್ಞಾನಿಕ ವಿಧಾನದಲ್ಲಿ ನೀರಾ ಇಳಿಸದಿದ್ದರೆ ಇಲ್ಲವೇ ಕಡಿಮೆ ಉಷ್ಣತೆಯಲ್ಲಿ ಅದನ್ನು ಸಂಗ್ರಹಿಸದಿದ್ದರೆ ಪರಿಶುದ್ಧ ಪೇಯ ಹೆಂಡವಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ನೀರಾ ಮಾರಾಟದ ಮೇಲೆ ಅಬಕಾರಿ ಇಲಾಖೆ ಕಣ್ಣಿಟ್ಟಿರುತ್ತದೆ. ಆಗಾಗ್ಗೆ ದಿಢೀರ್ ತಪಾಸಣೆ ಕೈಗೊಳ್ಳುತ್ತದೆ. ಮಾರಾಟಕ್ಕೆ ಅನುಮತಿ ನೀಡಲು ಇಲಾಖೆ ಹಲವು ಕಠಿಣ ನಿಬಂಧನೆಗಳನ್ನು ವಿಧಿಸುತ್ತದೆ. ಅದನ್ನೆಲ್ಲ ದಾಟಿ ಪರವಾನಗಿ ಗಿಟ್ಟಿಸಬೇಕು. ಅಲ್ಲದೆ, ವೈಯಕ್ತಿಕ ಪರವಾನಗಿ ನೀಡುವ ಬದಲು ಸಹಕಾರ ಸಂಸ್ಥೆಗಳ ಮೂಲಕ ಮಾತ್ರ ನೀರಾ ಮಾರಾಟ ಸಾಧ್ಯವಾಗಲು ಅಬಕಾರಿ ಇಲಾಖೆ ನಿಯಮಗಳು ಕಾರಣವಾಗಿವೆ.

ರಾಜ್ಯದಲ್ಲಿ ನೀರಾ ಮಾರಾಟಕ್ಕೆ ನಮ್ಮ ಸಂಸ್ಥೆ ಅಧಿಕೃತ ಪರವಾನಗಿ ಪಡೆದಿದೆ. ಇದೊಂದು ಆರೋಗ್ಯಕರವಾದ ಪೇಯವಾಗಿದ್ದು, ಎಲ್ಲ ಹಂತದಲ್ಲಿಯೂ ಸ್ವಚ್ಛತೆಗೆ ಒತ್ತು ನೀಡಲಾಗುತ್ತದೆ. ನಿಗದಿತ ಉಷ್ಣತೆ ಕಾಪಾಡುವುದರಿಂದ ಆಲ್ಕೋಹಾಲ್ ಅಂಶ ಇರುವುದಿಲ್ಲ. ಕೃಷಿ ಮೇಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎರಡು ದಿನಗಳಲ್ಲಿ 230 ಲೀ. ನೀರಾ ಮಾರಾಟವಾಗಿದೆ. | ಶ್ರೀನಿವಾಸಲು ಮಲೆನಾಡು ನಟ್ಸ್ ಅಂಡ್ ಸ್ಪೈಸಸ್ ಪ್ರೊಡ್ಯೂಸರ್ಸ್ ಕಂಪನಿ ಲಿ. ರೈತರಿಗೆ ಉಪಯುಕ್ತವಾದ ಯಂತ್ರೋಪಕರಣಗಳ ಮಾಹಿತಿ, ಬಿತ್ತನೆ ಬೀಜ, ಸಾವಯವ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಈ ಕೃಷಿ ಮೇಳದಲ್ಲಿ ರೈತರು ಎಲ್ಲ ಮಳಿಗೆಗಳಿಗೂ ತೆರಳಿ ಕರಪತ್ರ ಸಂಗ್ರಹಿಸುತ್ತಿದ್ದಾರೆ. ಸಮಗ್ರ ವಿಷಯಾಧಾರಿತ ಕೃಷಿ ಬಗ್ಗೆ ರೈತರಿಗೆ ಆಸಕ್ತಿ ಮೂಡಿಸಲು ಕೃಷಿಮೇಳ ಸಹಕಾರಿಯಾಗಿದೆ. ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಇದಕ್ಕಾಗಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್​ಗೆ ಅಭಾರಿಯಾಗಿದ್ದೇನೆ. | ಮನು ಸೋಮಯ್ಯ ಕೊಡಗು ರೈತಸಂಘದ ಜಿಲ್ಲಾಧ್ಯಕ್ಷ

ಮಂಜು ಬನವಾಸೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net