

ಹನಗೋಡು: ಹನಗೋಡು ಭಾಗದಲ್ಲಿ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿರುವ ಹುಲಿ ಸೆರೆ ಹಿಡಿಯಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ಹನಗೋಡು ಭಾಗದಲ್ಲಿ ಗ್ರಾಮಸ್ಥರ ಒತ್ತಾಯದಂತೆ ಮುಖ್ಯ ವೈಲ್ಡ್‌ಲೈಫ್ ವಾರ್ಡನ್ ಅವರಿಗೆ ಮಾಡಿದ್ದ ಕೋರಿಕೆ ಮೇರೆಗೆ ಹುಲಿ ಸೆರೆ ಹಿಡಿಯಲು ಅನುಮತಿ ದೊರೆತಿದೆ. ಶೀಘ್ರದಲ್ಲೇ ಶೆಟ್ಟಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಹುಲಿಯನ್ನು ಸೆರೆಹಿಡಿಯಲಾಗುವುದು ಎಂದಿದ್ದಾರೆ.
ಡಿ.5ರ ಸಂಜೆ ನೇಗತ್ತೂರಿನ ಲಕ್ಷ್ಮಮ್ಮ ಚಂದ್ರೇಗೌಡರಿಗೆ ಸೇರಿದ ಎರಡು ಹಸುಗಳನ್ನು ಹುಲಿ ಬಲಿ ಪಡೆದ ನಂತರ ಹುಲಿ ಪತ್ತೆಗಾಗಿ ಎಸಿಎಫ್ ದಯಾನಂದ್, ಆರ್‌ಎಫ್‌ಒ ಸುಬ್ರಹ್ಮಣ್ಯ ಅವರ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಗಳಾದ ಸಿದ್ದರಾಜು, ವೀರಭದ್ರಯ್ಯ, ಅರಣ್ಯ ಹಾಗೂ ಆರ್‌ಆರ್‌ಟಿ ಸಿಬ್ಬಂದಿ ನಾಲ್ಕು ದಿನ ಕಾರ್ಯಾಚರಣೆ ನಡೆಸಿದರೂ ಹುಲಿ ಪತ್ತೆಯಾಗಲಿಲ್ಲ. ಆದರೆ, ಹುಲಿ ಹೆಜ್ಜೆ ಕಂಡುಬಂದಿತ್ತು. ಜತೆಗೆ ಕ್ಯಾಮರಾದಲ್ಲಿ ಮೂರನೇ ಬಾರಿಗೆ (ಮೂರು ದಿನಗಳು) ಹುಲಿ ಸೆರೆಯಾಗಿದೆ. ಆರಣ್ಯದಂಚಿನ ಜಮೀನುಗಳಲ್ಲಿ ಕೆಲಸ ಮಾಡುತ್ತಿರುವ ರೈತರಿಗೆ ಹುಲಿ ಇರುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಆರ್‌ಎಫ್‌ಒ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಕಳೆದ ಐದು ದಿನಗಳಿಂದ ನಾಗರಹೊಳೆ ಉದ್ಯಾನವನದಂಚಿನ ನೇಗತ್ತೂರು ಬಳಿಯ ಶೆಟ್ಟಳ್ಳಿ-ಲಕ್ಕಪಟ್ಟಣ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಅಳವಡಿಸಿರುವ ಕ್ಯಾಮರಾದಲ್ಲಿ ಹುಲಿ ಸೆರೆಯಾಗಿದೆ. ಕೂಂಬಿಂಗ್ ವೇಳೆ ಹುಲಿ ಹೆಜ್ಜೆ ಜಾಡು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ ಎಂದರು.