

ನವದೆಹಲಿ : ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನು ಮೂರು ದಿನಗಳಲ್ಲಿ, ಸುಮಾರು 51 ಲಕ್ಷ ಕರೊನಾ ಲಸಿಕೆಯ ಡೋಸ್ಗಳನ್ನು ಹೊಸದಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈಗಾಗಲೇ ನೀಡಿರುವ 20 ಕೋಟಿ ಲಸಿಕೆ ಡೋಸ್ಗಳಲ್ಲಿ, ಇನ್ನೂ 1.84 ಕೋಟಿ ಡೋಸ್ಗಳನ್ನು ಅವು ಜನರಿಗೆ ನೀಡುವುದು ಬಾಕಿ ಇದೆ ಎಂದೂ ಹೇಳಿದೆ.
ಈವರೆಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 20 ಕೋಟಿ (20,28,09,250) ಡೋಸ್ಗಳಷ್ಟು ಕರೊನಾ ಲಸಿಕೆಯನ್ನು ಉಚಿತವಾಗಿ ಒದಗಿಸಿದೆ. ಅದರಲ್ಲಿ, ಮೇ 14 ರಂದು ಲೆಕ್ಕ ಹಾಕಲಾದ ಸರಾಸರಿಯ ಪ್ರಕಾರ 18,43,67,772 ಗಳನ್ನು ಬಳಸಿಕೊಳ್ಳಲಾಗಿದೆ. ಇನ್ನೂ 1,84,41,478 ಡೋಸ್ಗಳನ್ನು ಫಲಾನುಭವಿಗಳಿಗೆ ನೀಡಬೇಕಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮುಂದಿನ 3 ದಿನಗಳಲ್ಲಿ ಸುಮಾರು 51 ಲಕ್ಷ (50,95,640) ಹೊಸ ಡೋಸ್ಗಳನ್ನು ರಾಜ್ಯಗಳು ಕೇಂದ್ರದ ವತಿಯಿಂದ ಪಡೆಯಲಿವೆ ಎಂದಿರುವ ಸಚಿವಾಲಯ, ಕೇಂದ್ರ ಸರ್ಕಾರವು ಈ ಮುಂದೆಯೂ ರಾಜ್ಯಗಳಿಗೆ ತನ್ನ ಪಾಲಿನಿಂದ ಉಚಿತವಾಗಿ ಲಸಿಕೆ ಒದಗಿಸಲಿದೆ ಎಂದಿದೆ. ಪ್ರತಿ ತಿಂಗಳೂ ಸೆಂಟ್ರಲ್ ಡ್ರಗ್ಸ್ ಲ್ಯಾಬರೋಟರಿ ಅನುಮೋದಿಸುವ ಉತ್ಪಾದನೆಯ ಶೇ. 50 ರಷ್ಟನ್ನು ಕೇಂದ್ರ ಇದಕ್ಕಾಗಿ ಖರೀದಿಸುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)