

ಬೀಜಿಂಗ್: ಚೀನಾದಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ನಿಂದಾಗಿ ಈವರೆಗೆ ಸುಮಾರು 2,239 ಜನರು ಮೃತರಾಗಿದ್ದಾರೆ. 75,500 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪತ್ತೆಯಾಗಿದೆ. ಆದರೆ ಇತ್ತೀಚೆಗೆ ಕೊರೊನಾ ವೈರಸ್ ಚೀನಾದಲ್ಲಿರುವ ಜೈಲುಗಳಿಗೂ ತಲುಪಿದ್ದು, ಅಲ್ಲಿ ಕೊರೊನಾ ಪತ್ತೆಯಾದವರ ಸಂಖ್ಯೆಯನ್ನು ಅಧಿಕೃತ ಸಂಖ್ಯೆಯಲ್ಲಿ ಸೇರಿಸಿಕೊಳ್ಳಲಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಾಂಡೊಂಗ್ ಪ್ರಾಂತ್ಯದ ನ್ಯಾಯಾಂಗ ಇಲಾಖೆಯ ಉನ್ನತ ಅಧಿಕಾರಿ ಮತ್ತು ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಉನ್ನತ ಹುದ್ದೆಯಲ್ಲಿದ್ದ ರಾಜಕಾರಣಿ ಜೀ ವೀಜುನ್ ಅವರಲ್ಲಿ ವೈರಸ್ ಪತ್ತೆಯಾದ ಕಾರಣ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.
ಚೀನಾದ ಬೀಜಿಂಗ್ನಲ್ಲಿರುವ ಜೈಲಿನಲ್ಲಿ ಕನಿಷ್ಠ 27 ಕೈದಿ ಮತ್ತು ಸಿಬ್ಬಂದಿಗಳಲ್ಲಿ ಕೊರೊನ ವೈರಸ್ ಇರುವುದು ಪತ್ತೆಯಾಗಿದೆ. ಜಿನಿಂಗ್ನಲ್ಲಿರುವ ರೆನ್ಜೆಂಗ್ ಜೈಲಿನಲ್ಲಿ 2,077 ಜನರನ್ನು ತಪಾಸಣೆ ನಡೆಸಲಾಗಿದ್ದು ಅದರಲ್ಲಿ 200 ಕೈದಿಗಳು ಮತ್ತು ಏಳು ಸಿಬ್ಬಂದಿಗಳಲ್ಲಿ ಕೊರೊನ ಇರುವುದು ಧೃಡವಾಗಿದೆ.
ಫೆ.13ರಂದು ಚೀನಾದ ಜೈಲಿನ ಪೊಲೀಸ್ ಅಧಿಕಾರಿಯೊಬ್ಬರಲ್ಲಿ ಮೊದಲ ಕೊರೊನಾ ಇರುವುದು ಪತ್ತೆಯಾಗಿತ್ತು. ಅದಾದ ನಂತರ ಅವರನ್ನು ಪ್ರತ್ಯೇಕ ಚಿಕಿತ್ಸಾಲಯದಲ್ಲಿ ಇಟ್ಟು ಚಿಕಿತ್ಸೆ ನೀಡಲಾಯಿತು. ಫೆ.14ಕ್ಕೆ ಮತ್ತೊಬ್ಬ ಅಧಿಕಾರಿಯಲ್ಲಿ ಕೊರೊನಾ ಪತ್ತೆಯಾಗಿದ್ದು ಅದಾದ ನಂತರ ಅವರ ಸ್ನೇಹ ವರ್ಗಕ್ಕೆಲ್ಲ ಕೊರೊನಾ ಹರಡಿದೆ. ಫೆ.15ರಂದು ಕೈದಿಗಳನ್ನೆಲ್ಲ ಪ್ರತ್ಯೇಕವಾಗಿ ಬಂಧಿಸಿಡಲಾಗಿದೆ. ಹಾಗಿದ್ದರೂ ಕೊರೊನಾ ಹರಡಿದ್ದು ಇದುವರೆಗೆ ಒಟ್ಟು 450 ಕೈದಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಪತ್ತೆಯಾಗಿರುವುದು ವರದಿಯಾಗಿದೆ.(ಏಜೆನ್ಸೀಸ್)