

ಮೈಸೂರು: ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಶನಿವಾರ ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಶತಮಾನ ಕಂಡ ಮೈಸೂರು ವೈದ್ಯಕೀಯ ಕಾಲೇಜು 9 ಸಾವಿರ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಪಂಚದಾದ್ಯಂತ ಈ ಕಾಲೇಜಿನಲ್ಲಿ ಕಲಿತ ವೈದ್ಯರು ವಿಸ್ತರಿಸಿಕೊಂಡಿದ್ದಾರೆ ಎಂದರು.
ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಹೆಚ್ಚು ಪರಿಣತಿ ಮತ್ತು ಅನುಭವ ಇರುತ್ತದೆ ಎನ್ನುವುದು ನನ್ನ ಭಾವನೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಹೆಚ್ಚಿನವರು ಬಡವರು. ಇವರು ವೈದ್ಯರನ್ನು ದೇವರಂತೆ ಕಾಣುತ್ತಾರೆ ಎಂದರು.
ವೈದ್ಯಕೀಯ ಕ್ಷೇತ್ರದ್ದು ಎರಡು ರೀತಿಯ ಜವಾಬ್ದಾರಿ ಇದೆ. ರೋಗ ಬಂದ ನಂತರ ಚಿಕಿತ್ಸೆ ಕೊಡುವುದು ಮತ್ತು ರೋಗ ಬರದಂತೆ ತಡೆಯುವುದೂ ಕೂಡ ವೈದ್ಯಕೀಯ ಕ್ಷೇತ್ರದ ಜವಾಬ್ದಾರಿ ಆಗಿದೆ ಎಂದರು.
ವೈದ್ಯರು ಸಮಾಜದ ಆಸ್ತಿ. ಇನ್ನೂ ಹೆಚ್ಚಿನ ವೈದ್ಯರು ಈ ಕಾಲೇಜಿನಿಂದ ಹೊರಗೆ ಬಂದು ಜನರ ಆಸ್ತಿ ಆಗಲಿ. ಸೇವೆ, ಶುಚಿತ್ವ ಮತ್ತು ಗುಣಮಟ್ಟದಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಮೈಸೂರು ವೈದ್ಯಕೀಯ ಕಾಲೇಜು ಪ್ರಗತಿ ಕಾಣಲಿ ಎಂದು ಹಾರೈಸಿದರು.
ಸಂತೋಷದ ಶತಮಾನೋತ್ಸವ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸಿದ್ದೇವೆ. ನಾನು ಮೈಸೂರಿನ ಜಿಲ್ಲೆಯವನಾಗಿ ಇನ್ನೂ ಸಂತೋಷವಾಗಿದೆ. ಪಕ್ಕದಲ್ಲೇ ವಿದ್ಯಾವರ್ಧಕ ಸ್ಕೂಲ್‌ನಲ್ಲಿ ಓದುತ್ತಿದ್ದೆ. ನಮ್ಮ ಊರಿನವನು ಮೆಡಿಕಲ್ ಕಾಲೇಜು ಸೇರಿದ್ದ. ನಾನೂ ಸೇರಬೇಕು ಎಂದು ಆಸೆಯಿತ್ತು. ಇಲ್ಲಿನ ಕ್ಯಾಟೀಂನ್‌ನಲ್ಲಿ 19 ಪೈಸೆಗೆ 1961ರಲ್ಲಿ ಮಸಾಲೆ ದೋಸೆ ಕೊಡೋರು. 1924 ರಲ್ಲಿ ಪ್ರಾರಂಭವಾದ ಬ್ಯಾಚ್‌ನವರು ಯಾರೂ ಇದ್ದಂಗಿಲ್ಲ ಎಂದರು.