

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಗಾಡಿ ಧೂಳಿಪಟಗೊಂಡಿರುವ ಮಧ್ಯೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಎರಡೂ ಬಣಗಳ ನಾಯಕರು ವಿಲೀನಕ್ಕೆ ಆಶಯ ವ್ಯಕ್ತಪಡಿಸಿರುವ ಚರ್ಚೆಗಳು ನಡೆಯುತ್ತಿವೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಾಯಿ ಆಶಾತಾಯಿ ಪವಾರ್ ಬುಧವಾರ ಪಂಢರಪುರ ದಲ್ಲಿರುವ ವಿಠ್ಠಲ ದೇವರ ದರ್ಶನ ಮಾಡಿ, ಪವಾರ್ ಕುಟುಂಬ ಮತ್ತೆ ಒಂದಾಗಲಿ ಎಂದು ಪ್ರಾರ್ಥಿಸಿದ್ದಾರೆ. ಭಗವಾನ್ ವಿಠ್ಠಲ ನನ್ನ ಪ್ರಾರ್ಥನೆ ಆಲಿಸುತ್ತಾನೆ ಮತ್ತು ಶರದ್ ಪವಾರ್-ಅಜಿತ್ ಪವಾರ್ ಒಟ್ಟಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಆಶಾತಾಯಿ ಹೇಳಿದ್ದಾರೆ.
ಕೆಲ ಶಾಸಕರು ಮತ್ತು ಎನ್ಸಿಪಿಯ ಎರಡೂ ಬಣಗಳ ನಾಯಕರು ಎನ್ಸಿಪಿಗಳ ವಿಲೀನಕ್ಕೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಎನ್ಸಿಪಿ ನಾಯಕ ಮತ್ತು ಸಚಿವ ನರಹರಿ ಜೀರ್ವಾಲ್, ಶರದ್ ಪವಾರ್-ಅಜಿತ್ ಪವಾರ್ ಒಟ್ಟಾಗಬೇಕೆಂದು ಅಜಿತ್ ಪವಾರ್ ತಾಯಿ ದೇವರನ್ನು ಪ್ರಾರ್ಥಿಸಿದ್ದಾರೆ. ನಾವೂ ಸಹ ಅದೇ ರೀತಿ ಪ್ರಾರ್ಥಿಸುತ್ತೇವೆ. ಎರಡು ಮೂರು ದಿನಗಳಲ್ಲಿ ಶರದ್ ಪವಾರ್ರನ್ನು ಭೇಟಿಯಾಗುತ್ತೇನೆ. ಪಕ್ಷವನ್ನು ವಿಲೀನಗೊಳಿಸಬೇಕು ಎಂದು ವಿನಂತಿಸುತ್ತೇನೆ ಎಂದಿದ್ದಾರೆ. ಇದೇವೇಳೆ ಶರದ್ ಪವಾರ್ ಅವರನ್ನು ನಾವು ದೇವರಂತೆ ಪರಿಗಣಿಸುತ್ತೇವೆ. ಹನುಮಂತನಂತೆ ನನ್ನ ಎದೆಯನ್ನು ಸೀಳಿದರೆ, ನನ್ನ ಎದೆಯಲ್ಲಿ ಶರದ್ ಪವಾರ್ರನ್ನು ನೋಡುತ್ತೀರಿ. ಶರದ್ ಪವಾರ್ ನಮ್ಮ ಮಾತು ಕೇಳುತ್ತಾರೆ ಮತ್ತು ಇಬ್ಬರೂ ಒಟ್ಟಾಗಲಿದ್ದಾರೆ. ನಮ್ಮ ರಾಜಕೀಯ ಮಾರ್ಗಗಳು ವಿಭಿನ್ನವಾಗಿದ್ದರೂ, ಅವರ ಬಗ್ಗೆ ನಮಗೆ ಗೌರವವಿದೆ ಮತ್ತು ಅದು ಮುಂದುವರಿಯಲಿದೆ ಎಂದು ಎನ್ಸಿಪಿ ಹಿರಿಯ ನಾಯಕ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ನಿತೀಶ್ಗೆ ಲಾಲು ಪ್ರಸಾದ್ ಆಹ್ವಾನ: ಬಿಹಾರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಆರ್ಜೆಡಿ ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್, ಮಹಾಘಟಬಂಧನಕ್ಕೆ ಸೇರಲು ಸಿಎಂ ನಿತೀಶ್ ಕುಮಾರ್ಗೆ ಬಾಗಿಲು ಸದಾ ತೆರೆದಿರುತ್ತದೆ ಎಂದು ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಿತೀಶ್ ನಮ್ಮನ್ನು ಸೇರಿಕೊಳ್ಳಬಹುದು, ಒಟ್ಟಿಗೆ ಕೆಲಸ ಮಾಡಬಹುದು. ಅವರು ಹಿಂತಿರುಗಲು ನಿರ್ಧರಿಸಿದರೆ, ಅವರನ್ನು ಸ್ವಾಗತಿಸಲಾಗುವುದು ಎಂದು ಲಾಲು ಸಂದರ್ಶನವೊಂದರಲ್ಲಿ ಒತ್ತಿ ಹೇಳಿದ್ದಾರೆ. ಲಾಲು ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಲಲ್ಲನ್ ಸಿಂಗ್, ನಾವು ಎನ್ಡಿಎ ಜೊತೆಗಿದ್ದೇವೆ ಮತ್ತು ಸಂಪೂರ್ಣವಾಗಿದ್ದೇವೆ. ಜನರು ಮಾತನಾಡಲು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಏನು ಬೇಕಾದರೂ ಹೇಳಬಹುದು ಎಂದು ತಿರುಗೇಟು ನೀಡಿದ್ದಾರೆ. ಲಾಲು ಹೇಳಿಕೆಗೆ ಮುನ್ನ ವ್ಯತಿರಿಕ್ತ ಅಭಿಪ್ರಾಯ ಹೊರಹಾಕಿದ್ದ ತೇಜಸ್ವಿ ಯಾದವ್, ಒಂದು ವೇಳೆ ನಿತೀಶ್ ಹಿಂತಿರುಗಲು ಬಯಸಿದರೂ ಅವರನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ಅವರನ್ನು ಮರಳಿ ಕರೆತರುವುದು ನಮ್ಮನ್ನು ನಾವು ನೋಯಿಸಿಕೊಂಡಂತೆ ಎಂದಿದ್ದರು.
ಒಗ್ಗೂಡಿಸುವ ಉದ್ದೇಶವೇನು?: ಎನ್ಸಿಪಿ ವಕ್ತಾರ ಅಮೋಲ್ ಮಿಟ್ಕರಿ ಮಾತನಾಡಿ, ಚಿಕ್ಕಪ್ಪ-ಸೋದರಳಿಯ ಇಬ್ಬರೂ ಪ್ರಯತ್ನ ನಡೆಸಿದರೆ ರಾಜಿ ಮಾಡಿಕೊಳ್ಳಬಹುದು. ಆದರೆ ಜಿತೇಂದ್ರ ಅವ್ಹಾದ್ (ಶರದ್ ಪವಾರ್ ಮಿತ್ರ) ಮತ್ತು ರೋಹಿತ್ ಪವಾರ್ (ಶರದ್ ಪವಾರ್ ಮೊಮ್ಮಗ) ಇದನ್ನು ವಿರೋಧಿಸಬಹುದು. ಅವರು ಪುನರ್ವಿುಲನವನ್ನು ಬೆಂಬಲಿಸುವುದಿಲ್ಲ. ಆದರೆ ಆಶಾ ತಾಯಿಯ ಪ್ರಾರ್ಥನೆಗಳನ್ನು ಎನ್ಸಿಪಿ ಎರಡೂ ಬಣಗಳಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರು ಹಂಚಿಕೊಂಡಿದ್ದಾರೆ. ನಾವೆಲ್ಲರೂ ಏಕತೆಯನ್ನು ಆಶಿಸುತ್ತೇವೆ ಎಂದು ಹೇಳಿದ್ದಾರೆ. ಪವಾರ್ ದ್ವಯರು ಒಗ್ಗೂಡಿದರೆ ರಾಜ್ಯ ಮಹಾ ವಿಕಾಸ್ ಅಗಾಡಿ ಮತ್ತಷ್ಟು ದುರ್ಬಲಗೊಳ್ಳಲಿದೆ. ಅತಿಹೆಚ್ಚು ಸೀಟುಗಳಲ್ಲಿ ಸ್ಪರ್ಧಿಸಿದರೂ, ದೊಡ್ಡ ಸಂಖ್ಯೆಯ ಸೀಟುಗಳಲ್ಲಿ ಕಾಂಗ್ರೆಸ್ ಸೋತದ್ದರಿಂದ ಉದ್ಧವ್ ನೇತೃತ್ವದ ಶಿವಸೇನೆ ಮತ್ತು ಶರದ್ ಪವಾರ್ ಎನ್ಸಿಪಿ ಕಾಂಗ್ರೆಸ್ ಬಗ್ಗೆ ಮುನಿಸಿಕೊಂಡಿದೆ. ಈ ನಡುವೆ ಶರದ್ ಪವಾರ್ ಮತ್ತು ಬೆಂಬಲಿಗರನ್ನು ಸೇರಿಸಿಕೊಂಡರೆ ಎನ್ಸಿಪಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎನ್ನುವುದು ಅಜಿತ್ ಪವಾರ್ ಬಣದ ಅನಿಸಿಕೆ ಎನ್ನಲಾಗಿದೆ. ಹೀಗಿದ್ದರೂ, ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೆ ಎನ್ಸಿಪಿ ಪುನರ್ ಮಿಲನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎನ್ಡಿಎ ಮೈತ್ರಿಕೂಟ ಸರ್ಕಾರದ ಕಟು ಟೀಕಾಕಾರರಾಗಿರುವ ಸುಪ್ರಿಯಾ, ಎನ್ಸಿಪಿ ವಿಲೀನಗೊಳಿಸಿ ಎನ್ಡಿಎ ಭಾಗವಾಗುತ್ತಾರಾ ಎನ್ನುವ ಬಗ್ಗೆ ಖಚಿತತೆ ಇಲ್ಲ.
ಏನು ಮಾತಾಡುತ್ತಿದ್ದೀರಿ? ಈ ತರಹದ ಪ್ರಶ್ನೆಗಳಿಗೆ ಉತ್ತರಿಸುವ ಸಮಯ ಇದಲ್ಲ. ಇಂದು ಸಂತಸದ ದಿನ. ಹಾಗಾಗಿ, ಒಳ್ಳೆಯ ವಿಷಯಗಳ ಬಗ್ಗೆಯಷ್ಟೇ ಮಾತನಾಡೋಣ.
| ನಿತೀಶ್ ಕುಮಾರ್ ಬಿಹಾರ ಸಿಎಂ