ಎನ್‌ಸಿಸಿ ಅಭ್ಯರ್ಥಿಗಳಿಗೆ ವಿಶೇಷ ಪ್ರವೇಶ: ಅವಿವಾಹಿತರಿಗೆ ಅವಕಾಶ, ಸೇನೆಯಿಂದ ಸ್ಪೆಷಲ್ ಎಂಟ್ರಿ ಸ್ಕೀಮ್

army
Published on

ಕಾಲೇಜಿನಲ್ಲಿದ್ದಾಗ ನೀವೇನಾದ್ರೂ ಎನ್‌ಸಿಸಿ ಕೆಡೆಟ್ ಆಗಿದ್ರಾ? ಶಿಸ್ತು ಸಂಯಮ ರೂಢಿಸಿಕೊಂಡು ಅತ್ಯುತ್ತಮ ಸೇವೆ ಸಲ್ಲಿಸಿದ್ದಿರಾ? ಮುಂಬರುವ ದಿನಗಳಲ್ಲಿ ಭಾರತೀಯ ಸೇನೆ ಸೇರುವ, ಯೋಧರಾಗುವ ಕನಸು ಇದೆಯೇ? ಅಂಥವರಿಗೀಗ ಬಂಪರ್ ಅವಕಾಶವೊಂದು ಒಲಿದು ಬಂದಿದೆ. ಹೌದು... ವಿಶೇಷ ನೇಮಕಾತಿ ಪ್ರವೇಶ (Special Entry Scheme) ಮೂಲಕ ಖಾಲಿ ಹುದ್ದೆಗಳನ್ನು ಎನ್‌ಸಿಸಿ ಕೋಟಾದಡಿ ಭರ್ತಿ ಮಾಡಲು ಭಾರತೀಯ ಸೇನೆ ಮುಂದಾಗಿದ್ದು, ಯೋಜನೆ ಸೌಲಭ್ಯ ಪಡೆಯಲು ಯಾರು ಅರ್ಹರು ಹಾಗೂ ಪ್ರಕ್ರಿಯೆ ಹೇಗೆ ನಡೆಯಲಿದೆ ಎನ್ನುವುದನ್ನು ಗಮನಿಸೋಣ.

ರಕ್ಷಣಾ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೇನೆಯು ಪ್ರತಿವರ್ಷ ಕೀರು ಸೇವಾ ಆಯೋಗ (ಎಸ್‌ಎಸ್‌ಸಿ) ಅನುದಾನದಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಎನ್‌ಸಿಸಿ ಸ್ಪೆಷಲ್ ಎಂಟ್ರಿ ಸ್ಕೀಮ್ ರೂಪಿಸಿದೆ. ಈ ಯೋಜನೆಯನ್ನು ನಿರ್ದಿಷ್ಟವಾಗಿ ಎನ್‌ಸಿಸಿಯಲ್ಲಿ ಪಾಲ್ಗೊಂಡ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗಾಗಿ ವಿನ್ಯಾಸಗೊಳಿಸಿದ್ದು, ರಾಷ್ಟ್ರಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಬೇಕು ಎನ್ನುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.

ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಅಭ್ಯರ್ಥಿಗಳು ಕನಿಷ್ಠ 19 ರಿಂದ ಗರಿಷ್ಠ 25ವರ್ಷ ವಯೋಮಿತಿಯೊಳಗಿರಬೇಕು. ಸೇನೆಯು ಹೊರಡಿಸುವ ಅಧಿಸೂಚನೆಯಲ್ಲಿ ತಿಳಿಸಿದ ದಿನಾಂಕಕ್ಕೆ ಅನ್ವಯವಾಗುವಂತೆ ಅದೇ ಅವಧಿಯಲ್ಲಿ ಜನಿಸಿರಬೇಕು. ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಅಂಕಪಟ್ಟಿಯಲ್ಲಿರುವ ಜನ್ಮದಿನಾಂಕವನ್ನೇ ಪರಿಗಣಿಸಲಾಗುತ್ತದೆ.

ಯಾರು ಅರ್ಹರು?
ಭಾರತದ ಪ್ರಜೆಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಹಾಗೆಯೇ ಭಾರತದಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ 1962 ಜ.1ಕ್ಕಿಂತ ಮೊದಲು ಆಗಮಿಸಿದ ಟಿಬೇಟಿಯನ್ ನಿರಾಶ್ರಿತರು ಹಾಗೂ ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ಪೂರ್ವ ಆಫ್ರಿಕಾದ ದೇಶಗಳು ಮತ್ತು ವಿಯೆಟ್ನಾಂದಿಂದ ವಲಸೆ ಬಂದು ಭಾರತ ಸರ್ಕಾರದಿಂದ ಅರ್ಹತೆ ಪ್ರಮಾಣ ಪತ್ರ ಪಡೆದವರು ಹುದ್ದೆಗೆ ಅರ್ಹರು. ನೇಪಾಳದ ಗೂರ್ಖಾ ಸಮುದಾಯಕ್ಕೆ ಸೇರಿದವರಿಗೆ ಅರ್ಹತೆ ಪ್ರಮಾಣಪತ್ರ ಅಗತ್ಯವಿಲ್ಲ.

ಸಿ ಸರ್ಟಿಫಿಕೇಟ್ ಕಡ್ಡಾಯ
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಪದವಿ ಹಂತದ ಎಲ್ಲ ವರ್ಷಗಳ ಅಂಕಗಳನ್ನು ಗಣನೆಗೆ ತೆಗೆದುಕೊಂಡಾಗ ಕನಿಷ್ಠ ಶೇ.50 ಅಂಕ ಹೊಂದಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹಿಂದಿನ 2-3ವರ್ಷಗಳ ಪರೀಕ್ಷೆಗಳಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಎನ್‌ಸಿಸಿಯ ಸೀನಿಯರ್ ಡಿವಿಷನ್ ಅಥವಾ ವಿಂಗ್‌ನಲ್ಲಿ ಕನಿಷ್ಠ ಎರಡು / ಮೂರು ವರ್ಷಗಳು ಸೇವೆ ಸಲ್ಲಿಸಿರಬೇಕು ಮತ್ತು ಎನ್‌ಸಿಸಿಯ ಸಿ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಪರೀಕ್ಷೆಯಲ್ಲಿ ಕನಿಷ್ಠ ‘ಬಿ’ ಗ್ರೇಡ್ ಪಡೆದಿರಬೇಕು.

ಯುದ್ಧದಲ್ಲಿ ಮಡಿದವರ ಮಕ್ಕಳಿಗೆ ಮೀಸಲು
ಯದ್ಧದಲ್ಲಿ ಮಡಿದ ಸೇನೆಯ ಸಿಬ್ಬಂದಿ ಮಕ್ಕಳಿಗೂ ಈ ಯೋಜನೆಯಲ್ಲಿ ಕೆಲವು ಹುದ್ದೆಗಳನ್ನು ಮೀಸಲಿಟ್ಟಿದ್ದು, ಅರ್ಹತಾ ಮಾನದಂಡಗಳನ್ನು ಪೂರೈಸಿದವರಿಗೆ ಆದ್ಯತೆ ನೀಡಲಾಗುತ್ತದೆ. ವೀರಮರಣ ಹೊಂದಿದ ಅಥವಾ ಗಾಯಗೊಂಡ (ಸ್ವಯಂ ಪ್ರೇರಿತವಲ್ಲದ) ಸಿಬ್ಬಂದಿಯ ಅವಿವಾಹಿತ ಪುತ್ರ ಅಥವಾ ಪುತ್ರಿಯರು ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ಅಗತ್ಯ ಶೈಕ್ಷಣಿಕ ಅರ್ಹತೆ ಪಡೆದಿರಬೇಕು. ಇವರು ಎನ್‌ಸಿಸಿ ಸಿ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಲ್ಲ.

ತರಬೇತಿ ಅವಧಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ (ಒಟಿಎ) 49 ವಾರಗಳ ಕಾಲ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಕೆಡೆಟ್‌ಗಳಿಗೆ 56,100ರೂ. ಸ್ಟೈಂಡ್ ನೀಡುವ ಜತೆಗೆ ತರಬೇತಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

ಆಕರ್ಷಕ ವೇತನ ಶ್ರೇಣಿ 
ಎನ್‌ಸಿಸಿ ಅಭ್ಯರ್ಥಿಗಳನ್ನು ರೆಗ್ಯುಲರ್ ಆರ್ಮಿಗೆ 14ವರ್ಷಗಳ ಸೇವೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆದರೆ, ಪ್ರಾಥಮಿಕವಾಗಿ 10 ವರ್ಷ ಸೇವೆ ಸಲ್ಲಿಸಿದ ನಂತರ ಕಾರ್ಯಕ್ಷಮತೆ ಹಾಗೂ ದಕ್ಷತೆ ಆಧಾರದ ಮೇಲೆ ಉಳಿದ 4 ವರ್ಷಗಳ ಅವಧಿಗೆ ಸೇವೆ ಮುಂದೂಡಲಾಗುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಭಡ್ತಿ ಮೂಲಕ ನಿಯೋಜನೆಗೊಳ್ಳುವ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿ ನಿಗದಿಪಡಿಸಿದ್ದು, 56,100 ರೂ. ನಿಂದ 2,50,000 ರೂ.ವರೆಗೂ ಪಾವತಿಸಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಫೆ.6 ಕೊನೇ ದಿನ
ಪ್ರತಿವರ್ಷದಂತೆ ಈ ವರ್ಷವೂ ಸೇನೆಯು ಅಧಿಸೂಚನೆ ಬಿಡುಗಡೆ ಮಾಡಿದ್ದು, 2024ರ ಎನ್‌ಸಿಸಿ ಸ್ಪೆಷಲ್ ಎಂಟ್ರಿ ಸ್ಕೀಮ್ 56ನೇ ಬ್ಯಾಚ್ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಫೆ.6ರೊಳಗೆ ಅಧಿಕೃತ joinindianarmy.nic.in. ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. 2024ರ ಜು.1ಕ್ಕೆ ಅನ್ವಯಿಸುವಂತೆ ಕನಿಷ್ಠ 19, ಗರಿಷ್ಠ 25 ವಯೋಮಿತಿ ನಿಗದಿಪಡಿಸಿದ್ದು, 1999ರ ಜುಲೈ 2ಕ್ಕಿಂತ ಮೊದಲು ಮತ್ತು 2005ರ ಜುಲೈ 2ರ ನಂತರ ಜನಿಸಿರಬಾರದು. 56ನೇ ಬ್ಯಾಚ್ ಅಕ್ಟೋಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net