

ಶಿವಮೊಗ್ಗ: ನಗರದ ಡಿಎಆರ್ ಮೈದಾನದಲ್ಲಿ ಭಾನುವಾರ ಜಿಲ್ಲಾ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಶಿಸ್ತುಬದ್ಧ ಮತ್ತು ಆರ್ಕಷಕ ಪಥಸಂಚಲನದಲ್ಲಿ ಎನ್‌ಸಿಸಿ ಬಾಲಕಿಯರು ಪ್ರಥಮ ಬಹುಮಾನ ಪಡೆದರು.
ಸೇಕ್ರೆಡ್ ಹಾರ್ಟ್ ಶಾಲೆ ದ್ವಿತೀಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ತೃತೀಯ ಬಹುಮಾನ ಪಡೆದರು. ಪ್ರಥಮ ಬಾರಿಗೆ ಪೌರ ಕಾರ್ಮಿಕರ ವಿಶೇಷ ತುಕಡಿ ಶಿಸ್ತುಬದ್ಧ ಪಥ ಸಂಚಲನ ನಡೆಸಿ ಎಲ್ಲರ ಗಮನ ಸೆಳೆಯಿತು. ಪರೇಡ್ ಕಮಾಂಡರ್ ಕೆ.ಎಸ್.ಪ್ರಶಾಂತ್ ಕನ್ನಡದಲ್ಲಿ ಆದೇಶ ನೀಡಿದರು. 28 ತಂಡಗಳು ಕವಾಯಿತಿನಲ್ಲಿ ಪಾಲ್ಗೊಂಡಿದ್ದವು.
ವಿವಿಧ ಶಾಲಾ ಮಕ್ಕಳು ನೃತ್ಯ ರೂಪಕ ಪ್ರದರ್ಶನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅತ್ಯುತ್ತಮ ಸೇವೆ ಸಲ್ಲಿಸಿದ 11 ಸರ್ಕಾರಿ ನೌಕರರು ಹಾಗೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.