

ಬೆಂಗಳೂರು: ಕರೊನಾ ಮಟ್ಟಹಾಕಲು ದುಡಿಯುತ್ತಿರುವವರ ಪಟ್ಟಿಗೆ ನ್ಯಾಷನಲ್ ಕೆಡೆಟ್ ಕೋರ್ (ಎನ್ಸಿಸಿ) ಕೆಡೆಟ್ಗಳ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ. ದೇಶದಲ್ಲಿ ಕರೊನಾವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ‘ಯೋಗದಾನ್’ ಶೀರ್ಷಿಕೆ ಅಡಿ ಕೆಲಸ ಮಾಡಲು ಮುಂದಾಗಿರುವ ಕೆಡೆಟ್ಗಳು ಮುಂದಿನ ಆಗುಹೋಗುಗಳಿಗೆ ತಾವೇ ಜವಾಬ್ದಾರರೆಂಬ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಆ ಮೂಲಕ ಅಗತ್ಯಬಿದ್ದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಎಂಬ ಸಂದೇಶ ಸಾರಿದ್ದಾರೆ.
ದೇಶದಲ್ಲಿ 13ರಿಂದ 15 ಲಕ್ಷ ಕೆಡೆಟ್ಗಳಿದ್ದು, ಬಹುತೇಕ ಪ್ರತಿ ಕಾಲೇಜುಗಳಲ್ಲೂ ಘಟಕಗಳಿವೆ. ಈ ಪೈಕಿ 48 ಸಾವಿರಕ್ಕೂ ಹೆಚ್ಚು ಕೆಡೆಟ್ಗಳು ಕರೊನಾ ನಿಯಂತ್ರಣ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆರೋಗ್ಯ ಭಾರತ ನಿರ್ವಣಕ್ಕೆ ಸಹಕಾರಿಯಾಗಲು ಕರೊನಾ ವಿರುದ್ಧ ಹೋರಾಡುವುದಕ್ಕಾಗಿ ಕರ್ನಾಟಕ ಮತ್ತು ಗೋವಾ ಎನ್ಸಿಸಿ ಘಟಕ ಮೇ 28ರಂದು ಅರ್ಜಿ ಆಹ್ವಾನಿಸಿತ್ತು. ಅರ್ಜಿ ಭರ್ತಿ ಮಾಡಿದ ಬಳಿಕ ಕೆಡೆಟ್ಗಳು ಅದನ್ನು ಮರಳಿ ಇ-ಮೇಲ್ ಮೂಲಕ ಪ್ರಾದೇಶಿಕ ಎನ್ಸಿಸಿ ನಿರ್ದೇಶಕರಿಗೆ ಸಲ್ಲಿಸಬೇಕಾಗಿತ್ತು.
ಮುಚ್ಚಳಿಕೆ ಷರತ್ತು: ದೇಶಸೇವೆ ಎಂದಾಗ ಕೆಲವು ಆಪತ್ತುಗಳು ಎದುರಾಗುವುದು ಸಹಜ. ಒಮ್ಮೆ ಸೇವೆ ಸಲ್ಲಿಸುತ್ತೇನೆಂದು ಬಂದಾಗ ಜೀವದ ಹಂಗು ತೊರೆದು ಕೆಲಸ ಮಾಡಲು ಸಿದ್ಧರಿರಬೇಕು. ಮುಂದಿನ ಆಗುಹೋಗುಗಳಿಗೆ ತಾನೇ ಜವಾಬ್ದಾರಿ ಎಂದು ಮುಚ್ಚಳಿಕೆ ನೀಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಈ ಷರತ್ತುಗಳಿಗೆ ಅಭ್ಯರ್ಥಿಗಳ ಜತೆಗೆ ಅವರ ಪಾಲಕರೂ ಸಹಿ ಮಾಡಿದ್ದಾರೆ.
ಕರೆ ನಿರೀಕ್ಷೆಯಲ್ಲಿ: ಕೆಡೆಟ್ಗಳ ಅರ್ಜಿ ಸ್ವೀಕರಿಸಿರುವ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ವಲಯದ ನಿರ್ದೇಶಕರು ‘ನಿಮ್ಮ ಅರ್ಜಿ ತಲುಪಿದ್ದು, ದೇಶದ ಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳಲು ಸಜ್ಜಾಗಿರಿ. ಅವಶ್ಯಕತೆ ಬಂದ ತಕ್ಷಣ ನಿಮಗೆ ಕರೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಸುವರ್ಣ ಅವಕಾಶ: ‘ದೇಶಸೇವೆ ನನ್ನ ಬಹುದಿನಗಳ ಆಸೆ. ಅದಕ್ಕಾಗಿಯೇ ಎನ್ಸಿಸಿ ಆಯ್ಕೆ ಮಾಡಿಕೊಂಡೆ. ನಮ್ಮ ಪಾಲಕರು ಶಿಕ್ಷಕರಾಗಿರುವುದರಿಂದ ಕರೊನಾ ವಿರುದ್ಧದ ಕಾರ್ಯಾಚರಣೆಗೆ ಒಪ್ಪಿಗೆ ನೀಡಿದ್ದಾರೆ. ನಾನು ದೇಶದ ಕರೆಗಾಗಿ ಕಾಯತ್ತಿದ್ದೇನೆ’ ಎನ್ನುತ್ತಾರೆ ಹಾವೇರಿ ಜಿಲ್ಲೆಯ ಡಿಪ್ಲೊಮಾ ವಿದ್ಯಾರ್ಥಿ ಎನ್ಸಿಸಿ ಕೆಡೆಟ್ ರಘುನಂದನ್ ಆರ್. ನಾಡಿಗೇರ್. ಅರ್ಜಿಯಲ್ಲಿ ‘ನಿಮ್ಮ ಜೀವಕ್ಕೆ ನೀವೇ ಹೊಣೆ’ ಎಂದಿದ್ದರಿಂದ ಮೊದಲಿಗೆ ಪಾಲಕರು ವಿರೋಧ ತೋರಿದರು. ಆನಂತರ ಒಪ್ಪಿದರು ಎನ್ನುತ್ತಾರೆ ಅವರು.
ಕೆಡೆಟ್ಸ್ ಕೆಲಸ * ಕಾಲ್ ಸೆಂಟರ್ * ಪ್ರಕರಣಗಳ ತನಿಖೆ * ಅಡುಗೆ ಕೆಲಸ * ಡೇಟಾ ಮ್ಯಾನೇಜ್ವೆುಂಟ್ ಮತ್ತು ಐಇಸಿ ಅಭಿವೃದ್ಧಿ * ದಟ್ಟಣೆ ನಿರ್ವಹಣೆ * ಸ್ವಚ್ಛತೆ ಕಾಪಾಡುವುದು * ಸರಕು ಮತ್ತು ಸಾಗಣೆ * ಇತರ ಕೆಲಸ
ಕರೊನಾ ವಿರುದ್ಧ ಹೋರಾಡುತ್ತಿರುವ ದೇಶದ ಜತೆ ಎನ್ಸಿಸಿ ‘ಯೋಗದಾನ್’ ಹೆಸರಿನಲ್ಲಿ ಕೈ ಜೋಡಿಸಲು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರು ಸೇರಲಿದ್ದಾರೆ. | ರಾಜೀವ್ ಚೋಪ್ರಾ, ಲೆಫ್ಟಿನೆಂಟ್ ಜನರಲ್, ಎನ್ಸಿಸಿ ವಿದ್ಯಾರ್ಥಿಗಳು ಹೆಚ್ಚಿನ ಉತ್ಸಾಹ ತೋರಿದ್ದಾರೆ. ಬೆಟಾಲಿಯನ್ನಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಬಂದ ತಕ್ಷಣ ಅವರನ್ನು ಕಳುಹಿಸಿಕೊಡಲಾಗುತ್ತದೆ. | ಹುಸೇನ್ ಸಾಬ್, ಕೇರ್ ಟೇಕರ್ ಎನ್ಸಿಸಿ, ಹಾವೇರಿ