'ಲೇಡಿ ಸೂಪರ್‌ಸ್ಟಾರ್' ಎಂದು ಕರೆಯೋದು ಬೇಡವೆಂದ ನಯನತಾರಾ! ಕಾರಣ ತಿಳಿಸಿದ ಬಹುಬೇಡಿಕೆಯ ನಟಿ

ವಿಜಯವಾಣಿ (30)
Published on

ತಮಿಳುನಾಡು: ಭಾರತೀಯ ಚಲನಚಿತ್ರೋದ್ಯಮದ ಖ್ಯಾತ ನಟಿ, ಬಹುಭಾಷಾ ಕಲಾವಿದೆ ನಯನತಾರಾ ಸದ್ಯ ಹಲವಾರು ಹೊಸ ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಮುಂದಿನ 'ಅನ್ನಪೂರ್ಣಿ' ಚಿತ್ರದ ಬಿಡುಗಡೆ ಸಂದರ್ಭದ ವೇಳೆ ನಡೆದ ಸಂದರ್ಶನದಲ್ಲಿ ಹಲವು ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಈ ವರ್ಷದಲ್ಲಿ ಬಹುದೊಡ್ಡ ಬ್ಲಾಕ್​​ಬಸ್ಟರ್​ ಹಿಟ್​ ಪಡೆದ ಶಾರುಖ್ ಖಾನ್ ಅಭಿನಯದ 'ಜವಾನ್'​ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿತ್ತು. ಈ ಸಿನಿಮಾದಲ್ಲಿ ಶಾರುಖ್​ಗೆ ನಾಯಕಿಯಾಗಿ ಕಾಣಿಸಿಕೊಂಡ ನಯನತಾರಾ, ಜವಾನ್ ಮೂಲಕ ಬಾಲಿವುಡ್​ ಅಂಗಳಕ್ಕೆ ಪಾದಾರ್ಪಣೆ ಮಾಡಿದರು. ಬಾಲಿವುಡ್​ನಲ್ಲಿ ತಮ್ಮ ಚೊಚ್ಚಲ ಚಿತ್ರದ ಮುಖೇನ ಎಲ್ಲರ ಗಮನ ಸೆಳೆದ ನಟಿ, ಸ್ಟಾರ್​ ನಿರ್ದೇಶಕರಿಂದ ಸಾಕಷ್ಟು ದೊಡ್ಡ ಪ್ರಾಜೆಕ್ಟ್​ಗಳ ಆಫರ್​ ಕೂಡ ಪಡೆದರು. ಇದೀಗ ನಟಿ ತಮಗೆ ಲೇಡಿ ಸೂಪರ್​ಸ್ಟಾರ್​ ಎಂದು ಕರೆಯುವುದು ಇಷ್ಟವಿಲ್ಲ ಎಂದು ಹೇಳಿರುವುದು ಅವರ ಫ್ಯಾನ್ಸ್​ಗಳಲ್ಲಿ ಭಾರೀ ಆಶ್ವರ್ಯ ಉಂಟುಮಾಡಿದೆ.

'ಅನ್ನಪೂರಣಿ' ಬಿಡುಗಡೆ ವೇಳೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, "ಲೇಡಿ ಸೂಪರ್‌ಸ್ಟಾರ್ ಎಂದು ಕರೆಯುವುದು ನನಗೆ ಇಷ್ಟವಿಲ್ಲ, ಅದೊಂದು ರೀತಿ ಬೈಗುಳದಂತೆ ಭಾಸವಾಗುತ್ತದೆ. ನನ್ನನ್ನು ಆ ರೀತಿ ಉಲ್ಲೇಖಿಸಿ, ಹೇಳುವುದು ಬೇಡ" ಎಂದು ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿದರು. ಇದೇ ರೀತಿ ಈ ಹಿಂದೆ ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕೂಡ ತಮ್ಮನ್ನು 'ಥಲಾ' ಎಂದು ಕರೆಯುವುದು ಬೇಡ ಎಂದು ತಿಳಿಸಿದ್ದರು.

ಸದ್ಯ ನಯನತಾರಾ 'ಟೆಸ್ಟ್', 'ಥನಿ ಒರುವನ್ 2', 'ಮನ್ನಂಗಟ್ಟಿ 1960', 'ಕಣ್ಣಪ್ಪ' ಸೇರಿದಂತೆ ಹಲವು ಚಿತ್ರಗಳ ಕೆಲಸಗಳಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದು, ವಿವಾದ ಮತ್ತು ವದಂತಿಗಳಿಂದ ದೂರ ಉಳಿದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net