

Nayanthara: ಬಹುಭಾಷಾ ನಟಿ ನಯನತಾರಾ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಬಿಯಾಂಡ್ ದಿ ಫೇರಿ ಟೇಲ್ ಸಾಕ್ಷ್ಯಚಿತ್ರಕ್ಕೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಈ ಬಾರಿ ಕಾನೂನು ತೊಂದರೆಗಾಗಿ ಸಿನಿಮಾ ಮತ್ತೊಮ್ಮೆ ಸುದ್ದಿಯಾಗಿದೆ. ಇದಕ್ಕೆ ಕಾರಣ, ಈ ಹಿಂದೆಯೇ ಬಿಡುಗಡೆಗೊಂಡು ಸೂಪರ್ಹಿಟ್ ಆಗಿರುವ ಚಿತ್ರವೊಂದರ ತೆರೆಮರೆಯ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಿಕೊಂಡಿರುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಹೈಕೋರ್ಟ್ ಮೆಟ್ಟಿಲೇರಿದೆ.
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ 2005ರಲ್ಲಿ ತೆರೆಕಂಡು ಬ್ಲಾಕ್ಬಸ್ಟರ್ ಹಿಟ್ ಆಗಿದ್ದ 'ಚಂದ್ರಮುಖಿ' ಚಿತ್ರವನ್ನು ನಿರ್ಮಿಸಿದ ಎಪಿ ಇಂಟರ್ನ್ಯಾಷನಲ್, ನಯನತಾರಾ ಚಿತ್ರ ಹಕ್ಕುಸ್ವಾಮ್ಯ ನಿಯಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ಗೆ ಸಲ್ಲಿಸಿತು. ಅಂತೆಯೇ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ನೆಟ್‌ಫ್ಲಿಕ್ಸ್ ಮತ್ತು ಟಾರ್ಕ್ ಸ್ಟುಡಿಯೋಗಳಿಗೆ ನೋಟಿಸ್ ಜಾರಿಗೊಳಿಸಿದೆ ಎಂದು '123 ತೆಲುಗು' ಸಿನಿ ವರದಿ ಉಲ್ಲೇಖಿಸಿದೆ.
ಕಾನೂನು ಎಚ್ಚರಿಕೆ ಜೊತೆಗೆ 5 ಕೋಟಿ ರೂ. ಪರಿಹಾರದ ಬೇಡಿಕೆಯ ಹೊರತಾಗಿಯೂ, ನಯನತಾರಾ ಸಾಕ್ಷ್ಯಚಿತ್ರವು 2005ರ ರಜನಿಕಾಂತ್ ಅಭಿನಯದ ಚಿತ್ರದ ತೆರೆಮರೆಯ ದೃಶ್ಯಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡಿದೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ನ್ಯಾಯಾಲಯವು ನೋಟಿಸ್ ನೀಡಿರುವ ಪಾರ್ಟಿಗಳಿಗೆ ಈ ವಿಚಾರಕ್ಕೆ ಪ್ರತಿಕ್ರಿಯಿಸಲು ಮುಂದಿನ ಎರಡು ವಾರಗಳ ಕಾಲಾವಕಾಶ ನೀಡಿದೆ.
ನಯನತಾರಾ ಅಭಿನಯಿಸುತ್ತಿರುವ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರಕ್ಕೆ ಎದುರಾಗುತ್ತಿರುವ ಕಾನೂನು ಸಂಕಷ್ಟ ಇದೇ ಮೊದಲಲ್ಲ. ಅಸಲಿಗೆ ಇದು ಎರಡನೇ ಬಾರಿಗೆ. ಈ ಹಿಂದೆ ತಮಿಳು ನಟ ಧನುಷ್ ಅವರ 2015ರಲ್ಲಿ ತೆರೆಕಂಡ 'ನಾನುಮ್ ರೌಡಿ ಧಾನ್'ನ ಚಿತ್ರದ ಮೂರು ಸೆಕೆಂಡುಗಳ ಕ್ಲಿಪ್ ಅನ್ನು ಎನ್ಓಸಿ ಪ್ರಮಾಣ ಪತ್ರ ಪಡೆಯದೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ, ವುಂಡರ್‌ಬಾರ್ ಫಿಲ್ಮ್ಸ್ ಕೋರ್ಟ್ ಮೆಟ್ಟಿಲೇರಿತ್ತು. ಆ ಅರ್ಜಿಯಲ್ಲಿ ನಯನತಾರಾ, ವಿಘ್ನೇಶ್ ಶಿವನ್ ಮತ್ತು ಅವರ ಕಂಪನಿ ರೌಡಿ ಪಿಕ್ಚರ್ಸ್ ವಿರುದ್ಧ 10 ಕೋಟಿ ರೂ.ಗಳ ಪರಿಹಾರ ಕೋರಲಾಗಿತ್ತು.
ಎರಡು ಪ್ರತ್ಯೇಕ ಚಿತ್ರಗಳ ಹಕ್ಕುಸ್ವಾಮ್ಯ ವಿವಾದಗಳು ನಟಿಯ ಸಾಕ್ಷ್ಯಚಿತ್ರದ ವಿರುದ್ಧ ಕೇಳಿಬಂದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ,(ಏಜೆನ್ಸೀಸ್).