ನೀರಲ್ಲಿ ಮುಳುಗಿದ್ದ ನಟಿಯ ಮೃತದೇಹ ಐದು ದಿನದ ಬಳಿಕ ಪತ್ತೆ

Naya
Published on

ಕ್ಯಾಲಿಫೋರ್ನಿಯಾ: ಕಳೆದ ವಾರ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ ಹಾಲಿವುಡ್​ ನಟಿ ನಯಾ ರಿವೇರಾ ಮೃತ ದೇಹ ಪತ್ತೆಯಾಗಿದೆ. ಸೋಮವಾರ ತನಿಖಾ ತಂಡದ ಕಾರ್ಯಾಚರಣೆ ವೇಳೆ ಮೃತ ದೇಹ ಪತ್ತೆಯಾಗಿದ್ದು, ಸಂಬಂಧಪಟ್ಟವರಿಗೆ ದೇಹವನ್ನು ಹಸ್ತಾಂತರಿಸಲಾಗಿದೆ.

ಅಂದಹಾಗೆ, 33 ವರ್ಷ ವಯಸ್ಸಿನ ಈ ನಟಿ ಲಾಸ್‌ಏಂಜಲೀಸ್ ಜು. 9ರಂದು ಸಮೀಪದ ಪಿರು ಸರೋವರದಲ್ಲಿ ದೋಣಿಯನ್ನು ಬಾಡಿಗೆಗೆ ಪಡೆದು ಅದರಲ್ಲಿ ಮಗನೊಂದಿಗೆ ವಿಹಾರಕ್ಕೆ ಹೋಗಿದ್ದರು. ‘‘ತಾಯಿ ನೀರಿಗೆ ಹಾರಿದ್ದನ್ನು ನಾನು ನೋಡಿದೆ. ಆದರೆ ಎಷ್ಟೊತ್ತಾದರೂ ಮೇಲೆ ಬರಲೇ ಇಲ್ಲ’’ ಎಂಬುದಾಗಿ ಬಾಲಕ ಪೊಲೀಸರೆದುರು ಹೇಳಿದ್ದ.

ಬಾಲಕ ಹೇಳಿಕೆ ಮೇರೆಗೆ ಕಳೆದೊಂದು ವಾರದಿಂದ ನದಿಯಲ್ಲಿ ನಟಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಮೃತದೇಹ ಪತ್ತೆಯಾಗಿದೆ. ಫಾಕ್ಸ್ ಟಿವಿಯಲ್ಲಿ 2009ರಿಂದ 2015ರವರೆಗೆ ಪ್ರಸಾರವಾದ ಪ್ರಸಿದ್ಧ ಮ್ಯೂಸಿಕಲ್ ಕಾಮೆಡಿ ‘ಗ್ಲೀ’ಯಲ್ಲಿನ ರಿವೇರಾ ನಟನೆ ಜನಮನ್ನಣೆ ಗಳಿಸಿತ್ತು. ಅದರಲ್ಲಿ ನಟಿಸುವಾಗಲೇ ಸಹ ನಟ ಮಾರ್ಕ್ ಸಾಲಿಂಗ್ ಜತೆ ಡೇಟಿಂಗ್‌ನಲ್ಲಿ ತೊಡಗಿದ್ದರು. ಆತನ ವಿರುದ್ಧ 2018ರಲ್ಲಿ ಚೈಲ್ಡ್ ಪೋರ್ನೋಗ್ರಫಿ ಆರೋಪ ಕೇಳಿಬಂದಿತ್ತು. ನಂತರ ಆ ನಟ ಆತ್ಮಹತ್ಯೆ ಮಾಡಿಕೊಂಡಿದ್ದ.

ಇನ್ನೊಬ್ಬ ನಟ ರಿಯಾನ್ ಡೋರ್ಸೆಯನ್ನು ಮದುವೆಯಾಗಿದ್ದ ರಿವೇರಾ ನಾಲ್ಕು ವರ್ಷಗಳ ದಾಂಪತ್ಯದ ಬಳಿಕ 2018ರ ಜುಲೈನಲ್ಲಿ ವಿಚ್ಛೇದನ ಪಡೆದಿದ್ದರು. ಇದಕ್ಕೂ ಮುನ್ನ 2013ರಲ್ಲಿ ರಾಪರ್ ಬಿಗ್ ಸಿಯಾನ್‌ರ ಜತೆಗೆ ರಿವೇರಾ ಸಂಬಂಧ ಹೊಂದಿದ್ದರು. ಆದರೆ ಈ ಸಂಬಂಧ ಒಂದೇ ವರ್ಷದಲ್ಲಿ ಅಂತ್ಯಗೊಂಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net