

ಬೆಂಗಳೂರು: ರಾಜ್ಯ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿದ್ದ ಉಪ ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿ. ವೀರಪ್ಪ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಗುರುವಾರ ಅಂಕಿತ ಹಾಕಿದ್ದು, ಅಧಿಕೃತ ಆದೇಶ ಹೊರಬಿದ್ದಿದೆ.
ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿರುವ ವೀರಪ್ಪ ಅವರು ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ) ಸ್ಥಾಪನೆ ಕುರಿತ ಅರ್ಜಿಯ ವಿಚಾರಣೆ ಇವರ ನ್ಯಾಯಪೀಠದಲ್ಲಿಯೇ ನಡೆದು ಕೊನೆಗೆ ಎಸಿಬಿ ರದ್ದುಪಡಿಸಿ ಆದೇಶ ಹೊರಡಿಸಿದ್ದರು. ಇದಾದ ಮೇಲೆ ಮತ್ತೆ ಲೋಕಾಯುಕ್ತ ಸಂಸ್ಥೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲಿಸುವ ಅಧಿಕಾರ ನೀಡುವ ಮೂಲಕ ರಾಜ್ಯ ಸರ್ಕಾರ ಬಲ ತುಂಬಿತು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಬಿ. ವೀರಪ್ಪ ಅವರು ಸೇವೆ ಸಲ್ಲಿಸಿದ್ದು, ಸಾಮಾಜಿಕ ನ್ಯಾಯ ಆಧಾರದ ಮೇಲೆ ಸಾಕಷ್ಟು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಸರ್ಕಾರಕ್ಕೆ ಸೂಚನೆಗಳನ್ನು ಕೊಟ್ಟು ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಅನುಷ್ಠಾನ ಮಾಡಿದ್ದರು. ನಿವೃತ್ತಿ ಬಳಿಕ 545 ಪಿಎಸ್‌ಐ ನೇಮಕಾತಿ ಹಗರಣದ ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಿ. ವೀರಪ್ಪ ಅವರು, ನಿಗದಿತ ಸಮಯದಲ್ಲಿ ವಿಚಾರಣೆ ಮುಗಿಸಿ ಸರ್ಕಾರಕ್ಕೆ ವರದಿ ಸಹ ಸಲ್ಲಿಸಿದ್ದರು.