ಬಿಜಾಪುರದಲ್ಲಿ ಐಇಡಿ ಸ್ಫೋಟಕ್ಕೆ ಇಬ್ಬರು ಯೋಧರು ಬಲಿ

naxal
Published on

ರಾಯ್‍ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ನಕ್ಸಲೀಯರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ರಾಜ್ಯ ಕಾರ್ಯಪಡೆಯ ಮುಖ್ಯ ಕಾನ್ಸ್‌ಟೇಬಲ್ ಭರತ್ ಲಾಲ್ ಸಾಹು ಮತ್ತು ಕಾನ್‌ಸ್ಟೆಬಲ್ ಸತೇರ್ ಸಿಂಗ್ ನಕ್ಸಲರ ದುಷ್ಕೃತ್ಯಕ್ಕೆ ಪ್ರಾಣವನ್ನು ಅರ್ಪಿಸಿದರು.

ತಾರೆಮ್ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡಿಮಾರ್ಕಾ ಅರಣ್ಯದಲ್ಲಿ ಕಳೆದ ರಾತ್ರಿ ಐಇಡಿ ಸ್ಫೋಟ ಸಂಭವಿಸಿದೆ. ಭದ್ರತಾ ಪಡೆ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ಪೈಪ್ ಬಾಂಬ್ ಸ್ಫೋಟಗೊಂಡಿದೆ.

ಈ ನಡುವೆ ಹೆಚ್ಚುವರಿ ಭದ್ರತಾ ಪಡೆಗಳನ್ನು ಘಟನೆ ನಡೆದ ಪ್ರದೇಶಕ್ಕೆ ಕಳುಹಿಸಲಾಗಿದೆ. ಗಾಯಗೊಂಡ ಎಸ್‌ಟಿಎಫ್ ಸಿಬ್ಬಂದಿಗೆ ಸೂಕ್ತ ಚಿಕಿತ್ಸೆಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ತಿಂಗಳು ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಆರು ಮಾವೋವಾದಿಗಳು ಹತರಾಗಿದ್ದರು. ನಕ್ಸಲ್ ದಾಳಿ ಪಡೆಯ ಆಧಾರಸ್ತಂಭವೆಂದು ಪರಿಗಣಿಸಲಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಕಂಪನಿ ನಂ.6ರ ಮೇಲೆ ಭದ್ರತಾ ಪಡೆಗಳು ನಡೆಸಿದ ಅತಿ ದೊಡ್ಡ ದಾಳಿ ಇದಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net