ಛತ್ತೀಸ್​ಗಢದಲ್ಲಿ ಮುಂದುವರೆದ ನಕ್ಸಲರ ಶರಣಾಗತಿ; ಕಂಕೇರ್​ನಲ್ಲಿ 13 ಮಹಿಳೆಯರು ಸೇರಿ 21 ಮಂದಿ ಪೊಲೀಸರ ಮುಂದೆ ಶರಣು|Naxal surrender

ವಿಜಯವಾಣಿ - 2025-10-26T191847.462
Published on

ರಾಯ್‌ಪುರ: ಛತ್ತೀಸ್​ಗಢದಲ್ಲಿ ನಕ್ಸಲರ ಶರಣಾಗತಿ(Naxal surrender) ಮುಂದುವರೆದಿದ್ದು, ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ಸಂಘಟನೆಯ 13 ಮಹಿಳೆಯರು ಸೇರಿದಂತೆ ಒಟ್ಟು 21 ಮಂದಿ ಭಾನುವಾರ(ಅ. 26) ಕಂಕೇರ್ ಜಿಲ್ಲೆಯಲ್ಲಿ 18 ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರ ಮುಂದೆ ಶರಣಾಗಿದ್ದಾರೆ.

ಈ 21 ಮಂದಿ ಕೇಶ್ಕಲ್ ವಿಭಾಗದ (ಉತ್ತರ ಉಪ ವಲಯ ಬ್ಯೂರೋ) ಕುಮರಿ/ಕಿಸ್ಕೋಡೋ ಪ್ರದೇಶ ಸಮಿತಿಯಿಂದ ಬಂದವರಾಗಿದ್ದು, 'ಪೂನಾ ಮಾರ್ಗಮ್: ಪುನರ್ ಸಂಯೋಜನೆ ಮೂಲಕ ಪುನರ್ವಸತಿ' ಉಪಕ್ರಮದಡಿಯಲ್ಲಿ ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ವಿಭಾಗ ಸಮಿತಿ ಕಾರ್ಯದರ್ಶಿ ಮುಖೇಶ್ ಕೂಡ ಸೇರಿದ್ದಾರೆ.

ಈ ಕುರಿತು ಮಾತನಾಡಿರುವ  ಬಸ್ತಾರ್ ರೇಂಜ್ ಇನ್ಸ್​ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರರಾಜ್ ಪ್ಯಾಟ್ಲಿಂಗಮ್, ಪೂನಾ ಮಾರ್ಗಮ್: ಪುನರ್ ಸಂಯೋಜನೆ ಮೂಲಕ ಪುನರ್ವಸತಿ' ಉಪಕ್ರಮದ ಅಡಿಯಲ್ಲಿ ಇಂದು ಕಂಕೇರ್​ನಲ್ಲಿ ಮತ್ತೊಂದು ಮಹತ್ವದ ಕಾರ್ಯವನ್ನು ಸಾಧಿಸಲಾಗಿದೆ. ಸುಮಾರು 21 ಮಾವೋವಾದಿ ಕಾರ್ಯಕರ್ತರು ಸಶಸ್ತ್ರವನ್ನು, ಹಿಂಸಾಚಾರವನ್ನು ಆಧರಿಸಿದ ಸಿದ್ಧಾಂತವನ್ನು ತ್ಯಜಿಸಿದ್ದಾರೆ. ಗೌರವಾನ್ವಿತ ಜೀವನವನ್ನು ನಡೆಸಲು ಸಾಮಾಜಿಕ ಮುಖ್ಯವಾಹಿನಿಗೆ ಸೇರಿದ್ದಾರೆ ಎಂದು ಹೇಳಿದ್ದಾರೆ.

ಶರಣಾದವರಲ್ಲಿ ನಾಲ್ವರು ವಿಭಾಗೀಯ ಸಮಿತಿ ಸದಸ್ಯರು (DVCM), ಒಂಬತ್ತು ಮಂದಿ ಪ್ರದೇಶ ಸಮಿತಿ ಸದಸ್ಯರು (ACM) ಹಾಗೂ ನಿಷೇಧಿತ ಸಂಘಟನೆಯ ಇತರ ಎಂಟು ಸದಸ್ಯರು ಸೇರಿದ್ದಾರೆ. ಮೂರು AK-47 ರೈಫಲ್‌ಗಳು, ನಾಲ್ಕು ಸ್ವಯಂ-ಲೋಡಿಂಗ್ ರೈಫಲ್‌ಗಳು (SLR), ಎರಡು INSAS ಅಸಾಲ್ಟ್ ರೈಫಲ್‌ಗಳು, ಆರು .303 ರೈಫಲ್‌ಗಳು, ಎರಡು ಸಿಂಗಲ್-ಶಾಟ್ ರೈಫಲ್‌ಗಳು ಹಾಗೂ ಒಂದು ಬ್ಯಾರೆಲ್ ಗ್ರೆನೇಡ್ ಲಾಂಚರ್ (BGL) ಅನ್ನು ಹಸ್ತಾಂತರಿಸಿದ್ದಾರೆ. ಇಲ್ಲಿಯವರೆಗೆ ಅಕ್ಟೋಬರ್ ತಿಂಗಳ ಒಂದರಲ್ಲೇ 300ಕ್ಕೂ ಅಧಿಕ ಮಂದಿ ಶರಣಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net