ಇನ್ನೂ ಸಂಪರ್ಕಕ್ಕೆ ಸಿಗದ ನಕ್ಸಲ್ ರವೀಂದ್ರ

Naxals
Published on

ಚಿಕ್ಕಮಗಳೂರು: ರಾಜ್ಯದಲ್ಲಿ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಎಂಟು ನಕ್ಸಲರ ಪೈಕಿ ವಿಕ್ರಮಗೌಡ ಎನ್​ಕೌಂಟರ್ ಆಗಿದ್ದರೆ, ಆರು ಮಂದಿ ಬುಧವಾರ ಶರಣಾಗತರಾಗಿದ್ದಾರೆ. ಆದರೆ ಓರ್ವ ನಕ್ಸಲ್ ಶೃಂಗೇರಿ ತಾಲೂಕಿನ ಕಿಗ್ಗ ಮೂಲದ ರವೀಂದ್ರ ಮಾತ್ರ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ.

ಹೇಗಾದರೂ ಮಾಡಿ ಆತನನ್ನೂ ಶರಣಾಗತಿ ಮಾಡಿಸಲು ನಕ್ಸಲ್ ಶರಣಾಗತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಪ್ರಯತ್ನಪಟ್ಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಕಿಗ್ಗ ಮೂಲದ ರವೀಂದ್ರ 18 ವರ್ಷಗಳ ಹಿಂದೆ ನಕ್ಸಲ್ ಸಂಘಟನೆಗೆ ಸೇರಿ ಅಂದಿನಿಂದಲೂ ಭೂಗತನಾಗಿದ್ದಾನೆ. ಈತನ ವಿರುದ್ಧ 14 ಕೇಸ್​ಗಳಿವೆ ಎನ್ನಲಾಗುತ್ತಿದೆ. ಈತನೂ ಶರಣಾಗಿದ್ದರೆ ಕರ್ನಾಟಕದಲ್ಲಿ ನಕ್ಸಲರೇ ಇಲ್ಲವಾಗುತ್ತಿದ್ದರು. ಆದರೆ ಈತ ಮಾತ್ರ ನಾಪತ್ತೆಯಾಗಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ. 15 ದಿನಗಳೊಳಗಾಗಿ ಆತನನ್ನು ಸಂರ್ಪಸಿ ಕರೆತರುವುದಾಗಿ ಸಮಿತಿ ಮುಖಂಡರು ಹೇಳಿದ್ದಾರೆ. ಆದರೆ ಅಷ್ಟರಲ್ಲಿ ರವೀಂದ್ರ ಸಿಗುತ್ತಾನೆಯೇ ಎಂಬುದು ಪ್ರಶ್ನೆಯಾಗಿದೆ.

ನಕ್ಸಲ್ ಚಟುವಟಿಕೆ ಬಗ್ಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಶರಣಾಗತರಾಗಿರುವ ಆರು ಜನರೇ ಕೊನೆ ಎಂಬುದಾಗಿದೆ. ನಕ್ಸಲ್ ರವೀಂದ್ರನನ್ನು ಶರಣಾಗತರಾಗಿರುವ ಗುಂಪಿನವರು ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ. ತನಿಖೆ ನಡೆದಿದೆ. ನಕ್ಸಲರ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. | ಡಾ.ಜಿ. ಪರಮೇಶ್ವರ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net