

ಶಿವಮೊಗ್ಗ: ದೇಶಾದ್ಯಂತ ಒಂದು ಕಾಲಘಟ್ಟದಲ್ಲಿ ನಕ್ಸಲ್ ಚಟುವಟಿಕೆಗಳ ತಾಣವಾಗಿದ್ದ ಕಾಲೇಜು ಆವರಣಗಳು ಇಂದು ನಕ್ಸಲ್ ಮುಕ್ತವಾಗಿರುವುದಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಕಾಲೇಜು ಘಟಕಗಳೇ ಕಾರಣ ಎಂದು ಎಬಿಪಿವಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜಿ.ಬಾಲಕೃಷ್ಣ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಗುರುವಾರ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾಲೇಜು ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 80-90ರ ದಶಕದಲ್ಲಿ ಕಾಲೇಜುಗಳಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿತ್ತು. ಕಾಲೇಜು ವಿದ್ಯಾರ್ಥಿಗಳ ಕೈಗೆ ಗನ್ ಕೊಡಲು ಮುಂದಾಗಿದ್ದರು. ಆದರೆ ಎಬಿವಿಪಿ ಕಾಲೇಜು ಘಟಕಗಳ ಮೂಲಕ ವಿದ್ಯಾರ್ಥಿಗಳ ಕೈಗೆ ಗನ್ ಬದಲು ಪೆನ್ ಕೊಡಲು ತೀರ್ಮಾನಿಸಿದ ಪರಿಣಾಮ ಕಾಲೇಜು ಆವರಣಗಳಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ಕ್ಷೀಣವಾಗಿದೆ ಎಂದರು.
ವಿಶ್ವದ ಅತ್ಯಂತ ದೊಡ್ಡ ಸಂಘಟನೆಗಳಲ್ಲಿ ಒಂದಾಗಿರುವ ಎಬಿವಿಪಿಗೆ ಪ್ರತಿ ವರ್ಷ 15 ಲಕ್ಷ ವಿದ್ಯಾರ್ಥಿಗಳು ಸೇರ್ಪಡೆ ಆಗುತ್ತಿರುವುದು ಹೆಮ್ಮೆಯ ಸಂಗತಿ. ಗುಣಮಟ್ಟದ ಶಿಕ್ಷಣದ ಕೊಡಿಸುವ ಜತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಹಲವು ಬಾರಿ ಸಂಘಟನೆ ಹೋರಾಟ ಮಾಡಿಕೊಂಡು ಬರುತ್ತಿದೆ. ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪಾರದರ್ಶಕತೆ ತರಲು ಎಬಿವಿಪಿಯ ಶ್ರಮ ಮಹತ್ವದ್ದಾಗಿದೆ ಎಂದು ಹೇಳಿದರು.
ಕರ್ನಾಟಕ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಡಾ. ರವಿ ಮಂಡ್ಯ, ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಸುಮುಖ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ಸಂಚಾಲಕ ವಿಧಾತ್ರಿ ಹೆಬ್ಬಾರ್ ಉಪಸ್ಥಿತರಿದ್ದರು.