

ಇಸ್ಲಾಮಾಬಾದ್: ಪಾಕಿಸ್ತಾನ ಪೀಪಲ್ಸ್ ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ. ಈ ಮೂಲಕ ನವಾಜ್ ಷರೀಫ್ ನಾಲ್ಕನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ.
ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಉಂಟಾ ಗಿದೆ. ಸರ್ಕಾರ ರಚನೆಗೆ ಜನಾದೇಶ ಪಡೆಯುವಲ್ಲಿ ತಮ್ಮ ಪಕ್ಷ ವಿಫಲವಾಗಿದೆ. ಹೀಗಾಗಿ ಪ್ರಧಾನಿ ಅಭ್ಯರ್ಥಿಯಾಗಲು ನಾನು ಇಚ್ಛೆ ಪಡುವುದಿಲ್ಲ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಜತೆಗೆ ಮೈತ್ರಿಯನ್ನೂ ಮಾಡಿಕೊಳ್ಳುವುದಿಲ್ಲ. ದೇಶದಲ್ಲಿ ರಾಜಕೀಯ ಅಸ್ಥಿರತೆಯನ್ನು ನಿವಾರಿಸಲು ಪಿಎಂಎಲ್-ಎನ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ ಎಂದು ಬಿಲಾವಲ್ ಹೇಳಿದರು.
ಸರ್ಕಾರ ರಚನೆ ಮತ್ತು ರಾಜಕೀಯ ಸ್ಥಿರತೆಗಾಗಿ ಇತರ ರಾಜಕೀಯ ಪಕ್ಷಗಳೊಂದಿಗೆ ಸಮನ್ವಯ ನಡೆಸಲು ಸಮಿತಿ ರಚಿಸಲು ಪಕ್ಷ ನಿರ್ಧರಿಸಿದೆ. ಸರ್ಕಾರದ ಭಾಗವಾಗಿರಲೂ ನಾವು ಬಯಸುವುದಿಲ್ಲ. ದೇಶದ ರಾಜಕೀಯ ಸ್ಥಿರತೆಯನ್ನು ಪುನಃಸ್ಥಾಪಿಸಲು ಬಯಸುತ್ತೇವೆ. ಪಿಪಿಪಿ ಸುಭದ್ರ ಸರ್ಕಾರ ರಚನೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 8ರಂದು ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆದಿತ್ತು. 266 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಾರೆ. ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 75 ಸ್ಥಾನಗಳನ್ನು ಗಳಿಸಿದೆ. ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳನ್ನು ಗಳಿಸಿದೆ.
ಇಮ್ರಾನ್ ಖಾನ್ ಪಕ್ಷದ ಮೈತ್ರಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಕ್ಷ ಕೇಂದ್ರದಲ್ಲಿ ಮತ್ತು ಪಂಜಾಬ್, ಖೈಬರ್-ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಸರ್ಕಾರ ರಚಿಸಲು ಎರಡು ಬಲಪಂಥೀಯ ಧಾರ್ವಿುಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವುದಾಗಿ ಮಂಗಳವಾರ ಘೊಷಿಸಿದೆ. ಎರಡೂ ಪಕ್ಷಗಳನ್ನು ಸೇರಿಸಿದರೂ ಸರ್ಕಾರ ರಚಿಸಲು ಸಾಕಾಗುವಷ್ಟು ಬಲ ಅವರ ಬಳಿ ಇಲ್ಲ ಎನ್ನಲಾಗಿದೆ. ಆದರೆ ಖೈಬರ್-ಪಖ್ತುಂಖ್ವಾದಲ್ಲಿ ಮಾತ್ರ ಇಮ್ರಾನ್ ಖಾನ್ ಪಕ್ಷದ ಸ್ವಂತ ಬಲದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಇದೆ.