ನವರಾತ್ರಿ ವೈಭವ: ಮೋಕ್ಷದಾಯಿನೀ

Navaratri
Published on

| ಡಾ.ಗಣಪತಿ ಹೆಗಡೆ

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |

ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವೀನಿ ||

ನವರಾತ್ರಿಯ ಐದನೆಯ ದಿನ ಅಂದರೆ ಆಶ್ವಯುಜಮಾಸದ ಶುಕ್ಲಪಕ್ಷದ ಪಂಚಮಿಯಂದು ಭಗವತಿ ದುರ್ಗೆಯನ್ನು ಸ್ಕಂದಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಇವಳು ಸ್ಕಂದನ ತಾಯಿಯಾದ ಕಾರಣ "ಸ್ಕಂದಮಾತಾ' ಎಂದು ಹೆಸರು. ಸ್ಕಂದಮಾತೆಯ ವಿಗ್ರಹವು ಭಗವಾನ್​ ಸ್ಕಂದನು ಬಾಲರೂಪದಲ್ಲಿ ಈಕೆಯ ತೊಡೆಯ ಮೇಲೆ ಕುಳಿತಿರುವಂತೆಯೇ ಇರುತ್ತದೆ. ಸ್ಕಂದಮಾತಾ ದೇವಿಗೆ ನಾಲ್ಕು ಭುಜಗಳು. ಬಲಗಡೆಯ ಮೇಲಿನ ಕೈಯಿಂದ ಸ್ಕಂದನನ್ನು ತೊಡೆಯಲ್ಲಿ ಕೂರಿಸಿಕೊಂಡಿರುವಳು. ಕೆಳಗಿನ ಬಲಗೈಯಲ್ಲಿ ಕಮಲದ ಹೂವನ್ನು ಹಿಡಿದಿರುವಳು. ಎಡಗಡೆಯ ಮೇಲಿನ ಕೈಯಲ್ಲಿ ಏಕಮುದ್ರೆ. ಮೇಲಕ್ಕೆತ್ತಿರುವ ಎಡಗೈಯಲ್ಲಿ ಮತ್ತೆ ಕಮಲವನ್ನು ಹಿಡಿದಿದ್ದಾಳೆ. ದೇವಿಯು ಕಮಲದ ಹೂವಿನ ಮೇಲೆ ಆಸೀನಳಾಗಿದ್ದು, ಇವಳನ್ನು "ಪದ್ಮಾಸನಾದೇವಿ' ಎಂದೂ ಕರೆಯುತ್ತಾರೆ.

ಸ್ಕಂದಮಾತಾದೇವಿಯ ಅವತಾರಕ್ಕೆ ವಿಶೇಷವಾದ ಹಿನ್ನೆಲೆಯೊಂದಿದೆ. ಒಮ್ಮೆ ತಾರಕಾಸುರನೆಂಬ ರಾಕ್ಷಸನಿಂದ ದೇವತೆಗಳು ಭಯಭೀತರಾಗಿದ್ದರು. ಇವರ ಭಯವನ್ನು ದೂರಮಾಡಲು ದೇವಿಯು ಸಾತ್ವಿಕ ಶಕ್ತಿರೂಪದಲ್ಲಿ ಸ್ಕಂದನೆಂಬ ಪುತ್ರನನ್ನು ಪ್ರದಾನ ಮಾಡಿದಳು. "ಅಸುರ' ಎಂಬ ಪದವು ಅಂಧಕಾರದ ಸಂಕೇತವಾದರೆ "ಸ್ಕಂದ' ಎಂಬ ಪದವು ಪ್ರಕಾಶದ ಸಂಕೇತ. ಅಸುರರು ಮೃತ್ಯುವಿನ ಪ್ರತಿಕವಾದರೆ, ಸ್ಕಂದನು ಅಮೃತಸ್ವರೂಪದ ಪ್ರತಿಕ. ಹಾಗೆಯೇ ಜ್ಞಾನಸ್ವರೂಪಿ ಕೂಡ. ಪುರಾಣಗಳಲ್ಲಿ ಕುಮಾರ, ಶಕ್ತಿಧರ ಎಂದು ಇವನನ್ನು ಕರೆಯಲಾಗಿದೆ. ಐದನೆಯ ದಿನ ದೇವಿಗೆ ಸ್ಕಂದಾಲಂಕಾರವನ್ನು ಮಾಡಲಾಗುತ್ತದೆ.

ಸ್ಕಂದಮಾತೆಯ ಪೂಜಾವಿಧಿ ಬಹಳ ವಿಶೇಷವಾಗಿದೆ. ಸ್ಕಂದಮಾತೆಗೆ ನೀಲಿ ಬಣ್ಣದ ಸೀರೆ ಹಾಗೂ ಅದೇ ಬಣ್ಣದ ಕುಪ್ಪಸವನ್ನು ತೊಡಿಸಿ, ನೀಲಿ ಬಣ್ಣದ ಹೂ, ನೀಲ ಬಣ್ಣದ ಅಕ್ಷತೆ ಗೆಜ್ಜೆವಸ, ನೀಲಿ ಬಣ್ಣದ ಪುಷ್ಪಗಳಿಂದ ಪೂಜಿಸಬೇಕು. ದೇವಿಗೆ ಅಂದು ಶಾವಿಗೆ ಪಾಯಸ ಹಾಗೂ ಅನ್ನವನ್ನು ನೈವೇದ್ಯ ಮಾಡಬೇಕು.

ಸ್ಕಂದಮಾತೆಯ ಉಪಾಸನೆಯಿಂದ ನಮಗೆ ಅನೇಕ ಶುಭಫಲಗಳು ದೊರೆಯುತ್ತವೆ. ಇವಳನ್ನು "ಮೋಕ್ಷದಾಯಿನೀ' ಎಂದು ಕರೆದಿದ್ದಾರೆ. ಭಕ್ತರ ಸುಖ, ಶಾಂತಿ, ನೆಮ್ಮದಿಯ ಬಯಕೆಗಳು ಪರಿಪೂರ್ಣವಾಗುತ್ತವೆ. ಆರಾಧಿಸುವವನು ಮರ್ತ್ಯಲೋಕದಲ್ಲಿ ಆನಂದವನ್ನು ಅನುಭವಿಸಿ ಪರಲೋಕದಲ್ಲಿ ಪರಮಶಾಂತಿಯನ್ನು ಪಡೆಯುತ್ತಾನೆ. ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಆರಾಧಿಸುವವರ ಬುದ್ಧಿಶಕ್ತಿ ಅತ್ಯಂತ ಚುರುಕಾಗುತ್ತದೆ. ಅವರು ಜೀವನದಲ್ಲಿ ಯಶಸ್ಸು ಹಾಗೂ ಕೀರ್ತಿಯನ್ನು ಗಳಿಸುತ್ತಾರೆ. ಅವಳ ಪೂಜೆಯಿಂದ ಅಲೌಕಿಕವಾದ ತೇಜಸ್ಸು ಹೆಚ್ಚುತ್ತದೆ. ಇಷ್ಟೇ ಅಲ್ಲದೇ ಸಂತಾನಪ್ರಾಪ್ತಿ, ಗೌರವಪ್ರಾಪ್ತಿ, ಧನಪ್ರಾಪ್ತಿ ಮುಂತಾದವುಗಳಾಗುತ್ತವೆ. ನವರಾತ್ರಿಯ ಪಂಚಮಿಯಂದು ಸಾಧಕರು, ಯೋಗಿಗಳು ಈ ದೇವಿಯನ್ನು ಆರಾಧಿಸುವಾಗ ಮನಸ್ಸನ್ನು ವಿಶುದ್ಧ ಚಕ್ರದಲ್ಲಿ ನೆಲೆಗೊಳಿಸಿಕೊಳ್ಳುತ್ತಾರೆ.

ಯಾ ದೇವಿ ಸರ್ವಭೂತೇಷು ದಯಾರೂಪೇಣ ಸಂಸ್ಥಿತಾ |

ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ ||

"ಯಾವ ದೇವಿಯು ಸಕಲ ಚರಾಚರಗಳಲ್ಲಿ ದಯೆಯ ರೂಪದಲ್ಲಿ ಸ್ಥಿತಳಾಗಿರುವಳೋ ಅಂತಹ ದೇವಿಗೆ ನಮೋ ನಮ@>' ಎಂಬ ಅರ್ಥವನ್ನು ಕೊಡುವ ಈ ಶ್ಲೋಕವನ್ನು ಇಪ್ಪತ್ತೊಂದು ಬಾರಿ ಹೇಳಿಕೊಂಡು ದೇವಿಗೆ ನಮಸ್ಕರಿಸಿದರೆ ನಮ್ಮ ಮನಸ್ಸಿನ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬುದು ಪುರಾಣಗಳಿಂದ ಕಂಡುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net