

ಎಚ್.ವಿ.ದೀಪಕ್ ನರಸಿಂಹ
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾತ್ ಮಹಾದೇವಪ್ರಮೋದದಾ ||
ದೇವಿಯು ನವರಾತ್ರಿಯ ಎಂಟನೆಯ ದಿನ ಮಹಾಗೌರಿ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಪಾವಿತ್ರ್ಯ ಹಾಗೂ ಸ್ವಚ್ಛತೆಯ ದೇವತೆಯೀಕೆ. ಶಂಖ-ಚಂದ್ರ-ಕುಂದ ಪುಷ್ಪದಷ್ಟು ಬೆಳ್ಳಗಿರುವಳೆಂದೂ ಹೇಳಲಾಗಿದೆ. ಇವಳು ಶಾಂತಮುದ್ರೆಯವಳು. ಶಿವನನ್ನು ವರಿಸುವುದಕ್ಕಾಗಿ ಮಹಾಗೌರಿ ಕಠೋರ ತಪಸ್ಸು ಮಾಡಿದ ಕಾರಣ ಶರೀರ ಕಪ್ಪಾಗಿತ್ತು ಮತ್ತು ಸಂತುಷ್ಟನಾದ ಶಿವನು ಪವಿತ್ರ ಗಂಗೆಯ ಜಲದಿಂದ ತೊಳೆದಾಗ, ಪ್ರಕಾಶಮಾನವಾಗಿ ಬೆಳ್ಳಗಾಯಿತು ಮತ್ತು ಆಗಿನಿಂದ ಇವಳು ಗೌರಿ ಎಂದು ಕರೆಯಲ್ಪಟ್ಟಳು. ಎತ್ತಿನ ಮೇಲೆ ಸಂಚರಿಸುವ ಈಕೆ ನಾಲ್ಕು ಕೈ ಹೊಂದಿದ್ದಾಳೆ. ಒಂದು ಕೈಲಿ ತ್ರಿಶೂಲ ಹಾಗೂ ಇನ್ನೊಂದು ಕೈಲಿ ಡಮರುಗ ಹಿಡಿದಿದ್ದಾಳೆ. ಎಲ್ಲರನ್ನೂ ಕ್ಷಮಿಸುವುದಕ್ಕೆ ಹಾಗೂ ಪಾಪಿಗಳನ್ನು ಪರಿಶುದ್ಧಗೊಳಿಸುವುದಕ್ಕೆ ಈಕೆ ಪ್ರಸಿದ್ಧಳು. ತಪಸ್ಯೇನೆ ಮಹಾನ್ ‘ಗೌರಃ’, ಅಂದರೆ ‘ತೇಜಸ್ಸ’ನ್ನು ಪ್ರಾಪ್ತಮಾಡಿಕೊಂಡವಳೇ ಮಹಾಗೌರಿ. ಮಂತ್ರಯೋಗಸಮಿಕ್ಷೆಯಲ್ಲಿ ‘ಸಮಾಧಿ’ ಪದದ ವ್ಯುತ್ಪತ್ತಿಯನ್ನು ‘ಸಮ್ + ಆ + ಅಧಿ’ ಎಂದು ಹೇಳಲಾಗಿದೆ. ‘ಸಮ್ ಅಂದರೆ ಸೂಕ್ಷಾ್ಮತಿಸೂಕ್ಷ್ಮ ಶಕ್ತಿತರಂಗಗಳ ಸಮ್ಯಕ್, ‘ಆ’ ಅಂದರೆ ‘ವರೆಗೆ’ ಮತ್ತು ‘ಧಿ’ ಅಂದರೆ ‘ಮಾನವನ ಶರೀರದಿಂದ ನಿರಂತರವಾಗಿ ಉರ್ತತಗೊಳ್ಳುವ ಸ್ಪಂದನಲಹರಿಗಳು’. ಧೀ ಎಂಬ ಲಹರಿಗಳನ್ನು ಸೂಕ್ಷಾ್ಮತಿಸೂಕ್ಷ್ಮಶಕ್ತಿ ಲಹರಿಗಳ ಸಮ್ಯಕ್ ಅವಸ್ಥೆಯ ತನಕ ಕೊಂಡೊಯ್ಯುವ ಪ್ರಕ್ರಿಯೆಯನ್ನು ಸಮಾಧಿ ಎನ್ನುತ್ತಾರೆ. ಈ ರೀತಿ ಮತ್ತೆ ಮತ್ತೆ ಸಮಾಧಿಯನ್ನು ಸಾಧಿಸುವುದಕ್ಕೆ ‘ತಪಸ್ಯಾ’ ಎನ್ನುತ್ತಾರೆ. ಇಂತಹ ತಪಸ್ಸನ್ನು ವಿಶಿಷ್ಟ ಕಾಲಾವಧಿಯ ತನಕ ಮಾಡುವುದರಿಂದ ‘ಗೌರ’ ಅಥವಾ ‘ತೇಜಸ್ಸು’ ಪ್ರಾಪ್ತವಾಗುತ್ತದೆ. ಇಂತಹ ಅತ್ಯುಚ್ಚ ತೇಜಸ್ಸನ್ನು ಯಾರು ಪಡೆದುಕೊಂಡಿದ್ದಾಳೆಯೋ ಅವಳು ಮತ್ತು ಯಾರ ಪ್ರಸಾದದಿಂದ ಸಮಾಧಿಯನ್ನು ಸಾಧಿಸಬಹುದೋ ಅವಳೇ ‘ಮಹಾಗೌರಿ’. ಮಹಾಗೌರಿಯ ಪ್ರಸಿದ್ಧ ದೇಗುಲ ಪಂಜಾಬಿನ ಲೂಧಿಯಾನದಲ್ಲಿದೆ.
ಜಗದ್ಗುರು ಶ್ರೀ ಆದಿಶಂಕರಾಚಾರ್ಯ ವಿರಚಿತ ಶ್ರೀ ಗೌರೀ ದಶಕಂ
ಆಶಾಪಾಶಕ್ಲೇಶವಿನಾಶಂ ವಿದಧಾನಾಂ
ಪಾದಾಂಭೋಜಧ್ಯಾನಪರಾಣಾಂ ಪುರುಷಾಣಾಂ |
ಈಶಾಂ ಈಶಾರ್ಧಾಂಗಹರಾಂ ತಾಮಭಿರಾಮಾಂ
ಗೌರೀಂ ಅಂಬಾಂ ಅಂಬುರುಹಾಕ್ಷೀಂ ಅಹಮೀಡೇ ||
ಮಂತ್ರ: ಓಂ ದೇವೀ ಮಹಾಗೌರ್ಯು ನಮಃ
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿಯನ್ನು ಬಿಳಿ ಹೂವಿನಿಂದ ಪೂಜೆ ಮಾಡುವುದರಿಂದ ಭಕ್ತರಿಗೆ ಶಕ್ತಿ ಮತ್ತು ಯೋಗ್ಯತೆ ಸಿಗುವುದು. ಎಲ್ಲ ಸಂಕಷ್ಟಗಳನ್ನು ಆಕೆ ನಿವಾರಣೆ ಮಾಡುವಳು. ಭಕ್ತರ ಎಲ್ಲ ಆಕಾಂಕ್ಷೆಗಳನ್ನು ಈಡೇರಿಸುವ ಮಹಾಗೌರಿ ಎಲ್ಲ ರೀತಿಯ ಸುಖ ಹಾಗೂ ಸಂತೋಷವನ್ನು ಕರುಣಿಸುವಳು. ಇದನ್ನು ಮಹಾಅಷ್ಟಮಿ ಎಂದೂ ಕರೆಯಲಾಗುತ್ತದೆ.
ದೈವದ ಕೃಪಾಕಟಾಕ್ಷಕ್ಕೆ ಭಕ್ತಿಮಾರ್ಗದಲ್ಲಿ 8ನೇ ವಿಧ ಸಖ್ಯ. ಲೌಕಿಕ ವ್ಯವಹಾರದಲ್ಲಿ ನಾವು ತೋರುವ ಆದರ್ಶ ಮೈತ್ರಿಯನ್ನು ತೋರಿಸುವುದಕ್ಕೆ ‘ಸಖ್ಯಭಕ್ತಿ’ ಎಂದು ಹೆಸರು. ಮೈತ್ರಿಯಲ್ಲಿಯ ಉನ್ನತಾಶಯಗಳನ್ನು ಅನುಸರಿಸಿ ನಡೆದುಕೊಳ್ಳುವ ಮಿತ್ರರ ನಡುವೆ ಯಾವುದೇ ರೀತಿಯ ಸ್ವಾರ್ಥವೂ ಇರಲಾರದು. ಸಖ್ಯಭಾವದಿಂದ ನಿಸ್ವಾರ್ಥ ಭಕ್ತಿಗೆ ಪರಿಪುಷ್ಟಿ ಏರ್ಪಡುತ್ತದೆ.
(ಲೇಖಕರು ಆಧ್ಯಾತ್ಮಿಕ ಚಿಂತಕರು)