

ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ|
ವೃಷಾರೂಢಾಂ ಶೂಲಧರಾಂ ಶೈಲಪುತ್ರೀ ಯಶಸ್ವಿನೀಮ್ ||
ಶೈಲಪುತ್ರಿಯೆಂದರೆ ಪರ್ವತನ ಪುತ್ರಿ ಪಾರ್ವತಿ. ಪರ್ವತರಾಜನ ಮಗಳಾದ ಈಕೆಗೆ ಸತಿ, ಭವಾನಿ, ಹೇಮಾವತಿ ಎಂದೂ ಹೆಸರಿದೆ. ಇವಳು ಪ್ರಕೃತಿಯ ಮಗಳು. ಎರಡು ಹಸ್ತಗಳನ್ನು ಹೊಂದಿರುವ ಈಕೆ ಒಂದು ಕೈಲಿ ತ್ರಿಶೂಲವನ್ನೂ, ಇನ್ನೊಂದು ಕೈಲಿ ಕಮಲ ವನ್ನೂ ಹಿಡಿದಿರುತ್ತಾಳೆ. ನಂದಿ ಈಕೆಯ ವಾಹನ. ಹಣೆಯಲ್ಲಿ ಚಂದ್ರನಿದ್ದಾನೆ. ನವರಾತ್ರಿಯ ಮೊದಲನೆಯ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರ ಯೋಗ ಸಾಧನೆ ಪ್ರಾರಂಭವಾಗುತ್ತದೆ. ಯೋಗದಲ್ಲಿ ಮೂಲಾಧಾರ ಚಕ್ರವು ಮೂಲವಾಗಿರುವುದು. ದೇವಿ ಶೈಲಪುತ್ರಿ ಈ ಚಕ್ರದ ದೇವತೆ. ಸ್ಥಿರತೆ ಮತ್ತು ಶಕ್ತಿಯ ಪ್ರತೀಕವಾದ ಈ ಚಕ್ರವು ಜಾಗೃತಗೊಂಡಾಗ ಆ ವ್ಯಕ್ತಿಯು ಆಧ್ಯಾತ್ಮಿಕ ಪ್ರಯಾಣಕ್ಕೆ ಹೋಗುವನು. ದೇವಿಗೆ ಇಷ್ಟವಾದ ಮಲ್ಲಿಗೆ ಹೂವಿನಿಂದ ಶೈಲಪುತ್ರಿ ದೇವಿಯನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ.
ದೇವಿ ಶೈಲಪುತ್ರಿ ಕವಚ
ಓಂಕಾರಃ ಮೇ ಶಿರಃ ಪಾತು ಮೂಲಾಧಾರ ನಿವಾಸಿನೀ |
ಹ್ರೀಂಕಾರಃ ಪಾತು ಲಲಾಟೇ ಬೀಜರೂಪಾ ಮಹೇಶ್ವರೀ ||
ಶ್ರೀಂಕಾರ ಪಾತು ವದನೇ ಲಾವಣ್ಯಾ ಮಹೇಶ್ವರೀ |
ಹುಂಕಾರಃ ಪಾತು ಹೃದಯಂ ತಾರಿಣೀ ಶಕ್ತಿ ಸ್ವಧೃತಾ
ಫಟ್ಕಾರ ಪಾತು ಸರ್ವಾಂಗೇ ಸರ್ವ ಸಿದ್ಧಿ ಫಲಪ್ರದಾ ||
ದೇವಿ ಶೈಲಪುತ್ರಿ ಮಂತ್ರ: ‘ಓಂ ದೇವಿ ಶೈಲಪುತ್ರೖೆ ನಮಃ’. ರಕ್ಷಣೆಗಾಗಿ ಮತ್ತು ಶೈಲಪುತ್ರಿ ದೇವಿಯ ಆಶೀರ್ವಾದಕ್ಕಾಗಿ ಈ ಶ್ಲೋಕವನ್ನು ಪಠಿಸಬೇಕು.
ದೈವದ ಕೃಪಾಕಟಾಕ್ಷಕ್ಕೆ ಸುಲಭವಾದುದು ಭಕ್ತಿಮಾರ್ಗ. ಅದರಲ್ಲಿ ಪ್ರಥಮವಾದುದ್ದು ‘ಶ್ರವಣ’. ಭಗವಂತನ ಹೆಸರುಗಳು, ಮಹಿಮೆಗಳು, ಕಲ್ಯಾಣಗುಣಗಳು, ಲೀಲಾವಿನೋದಗಳನ್ನು ಶ್ರದ್ಧೆಯಿಂದ ಆಲಿಸುವುದು ಇಲ್ಲವೆ ಕೇಳಿಸುವಂತೆ ಮಾಡುವ ಕ್ರಿಯೆಯೇ ‘ಶ್ರವಣಭಕ್ತಿ’. ಭಗವದ್ಗುಣ ವೈಭವಗಳನ್ನು, ಚರಿತೆಗಳನ್ನು ಆಲಿಸಿ, ಭಕ್ತನು ಆ ಅನುಭೂತಿಗೆ ಒಳಗಾಗುವುದೇ ಈ ಶ್ರವಣ ಭಕ್ತಿಗೆ ಚರಮಾವಸ್ಥೆ. ಆಳ್ವಾರರ ಕೃತಿಗಳೆಲ್ಲವೂ ಭಗವಂತನ ಹೆಸರುಗಳು, ಲೀಲೆಗಳನ್ನು ಆಲಿಸುವುದು, ಕೇಳಿಸುವುದು - ಎನ್ನುವ ಕ್ರಿಯೆಗಳೊಂದಿಗೇ ಒಟ್ಟು ಗೂಡಿವೆ. ಅವರು ಭಗವಂತನ ಲೀಲೆಗಳನ್ನು ವರ್ಣಿಸುತ್ತಾ ಆತನನ್ನೇ ಪರಿಪೂರ್ಣನೆಂದು ಭಾವಿಸಿದಾಗ - ಅವನ್ನು ಆಲಿಸಿದಾಗ, ಕೇಳಿಸಿದಾಗ ಉಂಟಾಗುವ ಫಲಿತಗಳನ್ನು ವಿಶದೀಕರಿಸಿದ್ದಾರೆ.
ಗೋವಿಂದನನ್ನು ವರ್ಣಿಸುವ ಗೀತೆಗಳನ್ನು ಹಾಡುವವರಿಗೆ ಭಗವದನು ಗ್ರಹವು ತನಗೆ ತಾನೇ ಉಂಟಾಗುತ್ತದೆ. (ಪೆರಿಯಾಳ್ವಾರ್ ತಿರುಮೋಷಿ 2-9-11). ಭಗವಂತನ ಲೀಲೆಗಳಿಂದೊಡಗೂಡಿದ ಈ ಪಾಶುರಗಳನ್ನು ಆಲಿಸುವವರು ವೈಕುಂಠವನ್ನು ಸೇರುವರು. (ಪೆರಿಯಾಳ್ವಾರ್ ತಿರುಮೋಷಿ 2-1-10), ಭಗವಂತನ ಪವಿತ್ರ ಹೆಸರುಗಳನ್ನು ಆಲಿಸುವವರು ನರಕವನ್ನು ಹೊಂದುವುದಿಲ್ಲವೆಂದು ಪೊಯ್ ಹೈ ಆಳ್ವಾರರು (ಮೊದಲ್ ತಿರುವಂದಾದಿ-87), ಭಗವನ್ನಾಮವನ್ನು ಶ್ರವಣ ಮಾಡುವವರಿಗೆ ಪರಮಪದವು ಲಭಿಸುತ್ತದೆ ಎಂದು ತೊಂಡರಡಿಪ್ಪೊಡಿಯಾಳ್ವಾರರು (ತಿರುಮಾಲೈ-2) ಹೇಳಿದ್ದಾರೆ.
ನಮ್ಮಾಳ್ವಾರರು ಈ ಶ್ರವಣ ಭಕ್ತಿಯನ್ನು ಅನೇಕ ರೀತಿಗಳಲ್ಲಿ ಕೊಂಡಾಡಿದ್ದಾರೆ: ‘ನನ್ನ ಕಿವಿಗಳು ಸದಾ ಕಾಲದಲ್ಲೂ ಆನಂದದಾಯಕವಾದ ಭಗವಂತನ ಲೀಲೆಗಳನ್ನೇ ಆಲಿಸಲು ಇಚ್ಛಿಸುತ್ತವೆ’(ತಿರುವಾಯ್ ವೊಷಿ 3-9-6). ಇಂಥ ಶ್ರವಣಭಕ್ತಿ ನಮ್ಮದಾಗಲಿ. ಇನ್ನು, ಶೈಲಪುತ್ರಿಯ ಪ್ರಸಿದ್ಧ ದೇವಾಲಯಗಳೆಂದರೆ ವಾರಾಣಸಿಯ ಮರ್ಹಿಯಾ ಘಾಟ್ನಲ್ಲಿರುವ ಮಾ ಶೈಲಪುತ್ರಿ ದೇವಾಲಯ ಹಾಗೂ ಮುಂಬೈನ ವಾಶಿ ಬಳಿಯಿರುವ ಹೆಡಾವ್ಡೆ ಮಹಾಲಕ್ಷ್ಮೀ ದೇವಸ್ಥಾನ.
(ಲೇಖಕರು ಆಧ್ಯಾತ್ಮಿಕ ಚಿಂತಕರು)