ಬ್ರಹ್ಮಚಾರಿಣಿ ಮಹಿಮೆ: ನವರಾತ್ರಿ ವೈಭವ-2

Navarathri
Published on
| ಸ್ವಾಮಿ ಶಾಂತಿವ್ರತಾನಂದ ಶ್ರೀರಾಮಕೃಷ್ಣ ಆಶ್ರಮ, ಮೈಸೂರು

ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |

ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

ಆದಿಶಕ್ತಿ ದುರ್ಗಾದೇವಿಯ ಒಂಬತ್ತು ರೂಪಗಳಲ್ಲಿ ಎರಡನೇ ರೂಪವೇ ಬ್ರಹ್ಮಚಾರಿಣಿ. ಇವಳು ತನ್ನ ಕೈಯಲ್ಲಿ ಕಮಲ, ಅಕ್ಷಮಾಲೆ, ವರದ ಹಸ್ತ ಮತ್ತು ಕಮಂಡಲವನ್ನು ಹಿಡಿದಿರುವಳು. ‘ಹೇ ದೇವಿ ಬ್ರಹ್ಮಚಾರಿಣಿ, ನಿನ್ನ ಸ್ವರೂಪ ಭವ್ಯವಾದುದು ಹಾಗೂ ಜ್ಯೋತಿರ್ಮಯವಾದುದು. ದಯವಿಟ್ಟು ನನ್ನ ಮೇಲೆ ಕೃಪೆ ಮಾಡು’ ಎಂಬುದು ಪ್ರಾರ್ಥನೆಯ ಸಾರ.

ಹಿಮವಂತನ ಪುತ್ರಿಯಾಗಿ ಜನಿಸಿದ ಶೈಲಜಾದೇವಿ ನಾರದರ ಉಪದೇಶದಂತೆ ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಂಡಳು. ಆದ್ದರಿಂದ ಈಕೆಯನ್ನು ಬ್ರಹ್ಮಚಾರಿಣಿ ಅಥವಾ ತಪಶ್ಚಾರಿಣಿ ಎಂದೂ, ‘ಅಪರ್ಣಾ’, ‘ಉಮಾ’ ಎಂದೂ ಕರೆಯುತ್ತಾರೆ.

ಇಲ್ಲಿ ಬ್ರಹ್ಮ ಎಂದರೆ ತಪಸ್ಸು ಎಂದರ್ಥ. ಆಚರಣಿ ಎಂದರೆ ಕೈಗೊಂಡವಳು. ಸಹಸ್ರ ವರ್ಷಗಳ ತಪಸ್ಸಿನಿಂದ ಈಕೆಯ ಶರೀರವೇನೋ ಕೃಶವಾಯಿತು. ಆದರೆ ಅದು ತಪಸ್ಸಿನಿಂದ ಜ್ಯೋತಿರ್ಮಯವಾಯಿತು, ಪರಿಶುದ್ಧವಾಯಿತು. ಈಕೆಯ ತಪಸ್ಸಿನ ಪ್ರಭಾವದಿಂದಾಗಿ ಮೂರು ಲೋಕಗಳಲ್ಲೂ ಹಾಹಾಕಾರವುಂಟಾಯಿತು. ಆಗ ಸ್ವಯಂ ಬ್ರಹ್ಮದೇವನೇ ಪ್ರತ್ಯಕ್ಷನಾಗಿ, ‘ಹೇ ದೇವಿ! ಇಂದಿನವರೆಗೂ ಯಾರೂ ಇಂತಹ ಘೊರ, ಕಠಿಣ ತಪಸ್ಸನ್ನು ಆಚರಿಸಿರಲಿಲ್ಲ. ಖಂಡಿತವಾಗಿಯೂ ನಿನ್ನ ಮನಸ್ಸಿನ ಅಭೀಷ್ಟ ನೆರವೇರುವುದು. ಶಿವನು ನಿನ್ನ ಪತಿಯಾಗುವನು. ಈಗ ನಿನ್ನ ತಪಸ್ಸನ್ನು ನಿಲ್ಲಿಸಿ, ಮನೆಗೆ ತೆರಳು’ ಎಂದನು. ನಂತರ ಪರಶಿವನು ಶೈಲಜಾಳನ್ನು ವಿವಾಹವಾದನು.

ಈಕೆಯ ಪೂಜೆಯಿಂದ ಭಕ್ತಿ, ವೈರಾಗ್ಯಗಳು ಹೆಚ್ಚುತ್ತವೆ. ಯಶಸ್ಸು ಪ್ರಾಪ್ತವಾಗುತ್ತದೆ. ಸದಾಚಾರ, ಸಂಯಮ ಸಿದ್ಧಿಸುತ್ತದೆ. ನವರಾತ್ರಿಯ ಎರಡನೇ ದಿವಸ ಸಾಧಕನು ಅವಳನ್ನು ಅರ್ಚಿಸಿದರೆ ಅವನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ದೇವಿಯ ಆಶೀರ್ವಾದದಿಂದ ಸಾಧಕನಿಗೆ ಸ್ಥಿರಬುದ್ಧಿ ಉಂಟಾಗುತ್ತದೆ ಎಂದು ತಂತ್ರಶಾಸ್ತ್ರಗಳು ಹೇಳಿವೆ.

ತ್ರಿಪುರ ಮೇ ಹೃದಯಂ ಪಟು ಲಾಲಟೇ ಪಟು ಶಂಕರಾಭಾಮಿನೀ

ಅರ್ಪಣಾ ಸದಾಪ್ತ್ರ್ತು ನೇತ್ರೋ, ಅರ್ಧಾರೀ ಚ ಕಪೋಲೋ

ಪಂಚದಶೀ ಕಾಂತೇ ಪಟು ಮಧ್ಯದೇಶೇ ಪಟು ಮಹೇಶ್ವರೀ

ಷೋಡಶೀ ಸದಾಪ್ತ್ರ್ತು ನಭೋ ಗೃಹೋ ಚ ಪದಾಯೋ

ಅಂಗ ಪ್ರತ್ಯಂಗಾ ಸತತ ಪಟು ಬ್ರಹ್ಮಚಾರಿಣಿ

ದೇವಿ ಬ್ರಹ್ಮಚಾರಿಣಿ ಮಂತ್ರ: ‘ಓಂ ದೇವಿ ಬ್ರಹ್ಮಚಾರಿಣಿಯೇ ನಮಃ’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net