ತಮಗೆ ವಿಷಪ್ರಾಶನ ಮಾಡಿಸಿದ್ದು ಯಾರೆಂದು ಹೇಳಿದ ರಷ್ಯಾ ಪ್ರತಿಪಕ್ಷ ನಾಯಕ ಅಲೆಕ್ಸಿ...

Alexi
Published on

ಬರ್ಲಿನ್​: ರಷ್ಯಾದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರು ಈಗಷ್ಟೇ ಚೇತರಿಸಿಕೊಂಡಿದ್ದಾರೆ. ದೇಹದಲ್ಲಿ ವಿಷಪೂರಿತ ಅಂಶ ಸೇರಿ, ಕೋಮಾಕ್ಕೆ ಜಾರಿದ್ದ ಅಲೆಕ್ಸಿ ಪವಾಡ ಸದೃಶವೆಂಬಂತೆ ಬದುಕುಳಿದಿದ್ದಾರೆ.

ಜರ್ಮನಿಯ ಬರ್ಲಿನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್​ಚಾರ್ಜ್ ಆಗಿರುವ ಅಲೆಕ್ಸಿ ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​​ ಅವರೇ ನನಗೆ ವಿಷಪ್ರಾಶನ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವ್ಲಾದಿಮಿರ್​ ಪುತಿನ್​ ತಮ್ಮ ಪ್ರತಿಪಕ್ಷ ನಾಯಕನಿಗೆ ವಿಷ ಉಣಿಸಿದ್ದಾರೆ ಎಂಬ ಸಣ್ಣದೊಂದು ಸುದ್ದಿ ಅದಾಗಲೇ ಹೊರಟಿತ್ತು. ಆದರೆ ಅಲೆಕ್ಸಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಆಸ್ಪತ್ರೆಯಲ್ಲಿದ್ದ ಅವರು ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. ಚೇತರಿಸಿಕೊಂಡ ಬಳಿಕ ಜರ್ಮನಿಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅಲೆಕ್ಸಿ, ಈ ವಿಷಪ್ರಾಶನ ಕೃತ್ಯದ ಹಿಂದೆ ಖಂಡಿತವಾಗಿಯೂ ಪುತಿನ್​ ಇದ್ದಾರೆ. ಅದರ ಹೊರತು ನನಗೆ ಬೇರೆ ಯಾವ ಕಾರಣವೂ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅನುಶ್ರೀ ಆಪ್ತನ ಪರ ಕರಾವಳಿ ಶಾಸಕರ ಒತ್ತಡ.. ಒತ್ತಡಕ್ಕೆ ಕಾರಣವಾಗಿರುವ ಆ ಲಿಂಕ್​ ಏನು?

ನೊವಿಚೋಕ್ ಗುಂಪಿಗೆ ಸೇರಿದ ವಿಷಕಾರಿ ಪದಾರ್ಥವನ್ನು ಅಲೆಕ್ಸಿಗೆ ನೀಡಲಾಗಿತ್ತು ಎಂದು ಜರ್ಮನಿಯ ಆಸ್ಪತ್ರೆ ಹೇಳಿತ್ತು. ಅಷ್ಟೇ ಅಲ್ಲ ಈ ವರದಿಯನ್ನಾಧರಿಸಿದ ಜರ್ಮನಿ ಸರ್ಕಾರ, ರಷ್ಯಾದ ಬಳಿ ಮಾಹಿತಿಯನ್ನೂ ಕೇಳಿದೆ. ಇದೀಗ ಅಲೆಕ್ಸಿ ಅವರು ಖಡಾಖಂಡಿತವಾಗಿ ಈ ಘಟನೆ ಹಿಂದೆ ಪುತಿನ್​ ಇದ್ದಾರೆಂದು ಹೇಳುತ್ತಿದ್ದಾರೆ.

ಆದರೆ ಡುಮಾದ ಅಧ್ಯಕ್ಷ ವ್ಯಾಚೆಸ್ಲಾವ್ ವೊಲೊಡಿನ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಅಲೆಕ್ಸಿ ವಿರುದ್ಧ ಕಿಡಿಕಾರಿದ್ದಾರೆ. ಅವರೊಬ್ಬ ದುಷ್ಕರ್ಮಿ, ನಾಚಿಕೆ ಇಲ್ಲದವನು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಒಂದು ರೂಪಾಯಿ ದಂಡದ ವಿರುದ್ಧ ಪುನಃ ಸುಪ್ರೀಂ ಮೆಟ್ಟಿಲೇರಿದ ವಕೀಲ ಪ್ರಶಾಂತ್​ ಭೂಷಣ್​

ಅಲೆಕ್ಸಿ ಜೀವವನ್ನು ಪುತಿನ್​ ಕಾಪಾಡಿದ್ದಾರೆ. ಟಾಮ್‌ಸ್ಕ್‌ ನಗರದಿಂದ ಮಾಸ್ಕೋಗೆ ತೆರಳುವಾಗ ಅವರ ಆರೋಗ್ಯ ಹದೆಗಟ್ಟಿತ್ತು. ಕೂಡಲೇ ವಿಮಾನ ತುರ್ತುಭೂಸ್ಪರ್ಶ ಮಾಡಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಪೈಲಟ್​​ಗಳಿಂದ ಹಿಡಿದು ಅಧ್ಯಕ್ಷರವರೆಗೆ ಎಲ್ಲರೂ ಅವರ ಜೀವ ಉಳಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net