

ನವದೆಹಲಿ: ಕಾಶ್ಮೀರ ಮೂಲದ ತಂದೆ ಮಗಳಿಗೆ ದೆಹಲಿಯಲ್ಲಿ ತಂಗುವುದಕ್ಕೆ ಓಯೋ ಹೋಟೆಲ್ ಒಂದರಲ್ಲಿ ರೂಂ ನೀಡಲು ನಿರಾಕರಿಸಲಾಗಿದೆ. ಅವರಿಬ್ಬರೂ ಕಾಶ್ಮೀರಿಗಳು ಎನ್ನುವ ಕಾರಣದಿಂದಲೇ ರೂಂ ನೀಡಿಲ್ಲ ಎನ್ನಲಾಗಿದೆ.
ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ನೌಮನ್ ರಫೀಕ್ರನ್ನು ನೋಡಲು ಆಕೆಯ ತಂದೆ ಮತ್ತು ತಂಗಿ ದೆಹಲಿಗೆ ಬಂದಿದ್ದರು. ಮಗಳನ್ನು ಭೇಟಿ ಮಾಡಿದ ಅವರು ದೆಹಲಿಯ ವಿಜಯ ನಗರದಲ್ಲಿರುವ ಆಶಾ ರೆಸಿಡೆನ್ಸಿ ಹೋಟೆಲ್ನಲ್ಲಿ ರೂಂ ಕೇಳಿದ್ದಾರೆ. ಆದರೆ ಹೋಟೆಲ್ನಲ್ಲಿ ಇವರು ಕಾಶ್ಮೀರಿಗಳು ಎಂಬ ಕಾರಣದಿಂದ ರೂಂ ನೀಡಲಾಗಿಲ್ಲ. ತಂದೆಯ ಬಳಿ ಎಲ್ಲಾ ದಾಖಲಾತಿಗಳು ಇದ್ದರೂ ಸಹ ಅದನ್ನು ನೋಡದೆಯೇ ರೂಂ ನೀಡಲು ನಿರಾಕರಿಸಲಾಗಿದೆ ಎಂದು ನೌಮನ್ ತಿಳಿಸಿದ್ದಾರೆ.
ಏತಕ್ಕಾಗಿ ರೂಂ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರು ನಮಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಜನರಿಗೆ ರೂಂ ನೀಡದಿರುವಂತೆ ಆದೇಶಿಸಿದ್ದಾರೆ ಎಂದು ಹೋಟೆಲ್ನಲ್ಲಿ ತಿಳಿಸಿದ್ದಾರೆ. ನಾನು ಆ ಮೂರೂ ದೇಶದವನಲ್ಲ ನಾನು ಕಾಶ್ಮೀರದವನು ಎಂದು ಹೇಳಿದ್ದಕ್ಕೆ, ಕಾಶ್ಮೀರದವರಿಗೂ ಸಹ ರೂಂ ನೀಡದಿರುವಂತೆ ಆದೇಶಿಸಿದ್ದಾರೆ ಎಂದು ತಿಳಿಸಲಾಗಿದೆ.
ಈ ವಿಚಾರವಾಗಿ ನೌಮನ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿದ್ದಂತೆ ಅನೇಕರು ಓಯೋ ಮತ್ತು ಪೊಲೀಸರ ಬಗ್ಗೆ ಆಕ್ರೋಶವ್ಯಕ್ತ ಪಡಿಸಿದ್ದಾರೆ.
ವಿಷಯ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಓಯೋ, ತಮ್ಮ ಸಂಸ್ಥೆಯು ದೇಶದ ಯಾವ ಮೂಲೆಯಲ್ಲಿಯೂ ಇಂತಹ ಆದೇಶ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಮುಖರ್ಜಿ ನಗರ ಪೊಲೀಸರು ಸಹ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಪೊಲೀಸ್ ಇಲಾಖೆ ಆ ರೀತಿಯ ಯಾವುದೇ ಆದೇಶ ನೀಡಿಲ್ಲ ಎಂದು ಹೇಳಿದೆ.
ಆದರೆ ಆಶಾ ರೆಸಿಡೆನ್ಸಿ ಹೋಟೆಲ್ ಮ್ಯಾನೇಜ್ಮೆಂಟ್ ಮಾತ್ರ ಪೊಲೀಸರೇ ತಮಗೆ ಈ ಆದೇಶ ಹೊರಡಿಸಿದ್ದರು ಎಂದು ಆರೋಪಿಸಿದೆ. ಶಾಹಿನ್ ಬಾಗ್ ಮತ್ತು ಇತರೆ ಕಡೆಗಳಲ್ಲಿ ಸಿಎಎ ವಿರುದ್ಧದ ಹೋರಾಟ ನಿಲ್ಲುವವರೆಗೂ ಜಮ್ಮು ಕಾಶ್ಮೀರ ಮತ್ತು ಲಡಾಕ್ನ ಜನರಿಗೆ ರೂಂ ನೀಡದಿರುವಂತೆ ಪೊಲೀಸರು ತಿಳಿಸಿದ್ದರು ಎಂದು ಮ್ಯಾನೇಜ್ಮೆಂಟ್ ತಿಳಿಸಿದೆ. ವಿಜಯ ನಗರದ ಇತರೆ ಹೋಟೆಲ್ಗಳಲ್ಲಿ ವಿಚಾರಿಸಿದಾಗ ಮೂರು ಇಸ್ಲಾಮಿಕ್ ದೇಶಗಳ ಜನರಿಗೆ ರೂಂ ನೀಡದಿರುವಂತೆ ಆದೇಶ ನೀಡಲಾಗಿತ್ತು ಆದರೆ ಜಮ್ಮು ಮತ್ತು ಲಡಾಕ್ ಬಗ್ಗೆ ಯಾವುದೇ ಆದೇಶವಿರಲಿಲ್ಲ ಎಂದು ತಿಳಿಸಿವೆ. (ಏಜೆನ್ಸೀಸ್)