ಸಂಪಾದಕೀಯ: ಪ್ರಕೃತಿ ನೀಡುತ್ತಿರುವ ಎಚ್ಚರಿಕೆ

rts
Published on

ಈ ವರ್ಷ ಹೀಟ್​ವೇವ್​ನ ನಿಜವಾದ ಅನುಭವ ದೇಶಾದ್ಯಂತ, ಅಷ್ಟೇ ಏಕೆ, ಜಗತ್ತಿನಾದ್ಯಂತ ಆಗುತ್ತಿದೆ. ಬೆಂಗಳೂರು ಸೇರಿದಂತೆ ಕೆಲವೆಡೆ ತಡವಾಗಿಯಾದರೂ ಆಗಿಷ್ಟು ಈಗಿಷ್ಟು ಮಳೆಯ ಹನಿಗಳು ಉದುರಿದರೂ, ಕಾದ ಹೆಂಚಿನಂತಾಗಿರುವ ನೆಲಕ್ಕೆ ಅದರಿಂದ ಯಾವ ಪರಿಣಾಮವೂ ಆಗಿಲ್ಲ. ‘ಏರ್​ಕಂಡೀಷನ್ಡ್ ಸಿಟಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರೇ ಇತ್ತೀಚೆಗೆ ಧಗೆಯ ವಿಷಯದಲ್ಲಿ ಬಳ್ಳಾರಿಯಾಗಿ ಮಾರ್ಪಟ್ಟಿದೆ. ಮೊನ್ನೆ ಉದ್ಯಾನನಗರಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಷಿಯಸ್ ಮೀರಿತ್ತು. ಬೇರೆ ನಗರಗಳ ಸ್ಥಿತಿಯೂ ಇದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಈ ಉಷ್ಣ ಅಲೆಯಿಂದ ಚರ್ಮವ್ಯಾಧಿಗಳು, ಕಾಲರಾ- ಗ್ಯಾಸ್ಟ್ರೋಎಂಟೆರಿಟಿಸ್​ನಂತಹ ಕಾಯಿಲೆಗಳು, ಹಸಿವಿನ ಕೊರತೆ, ನಿದ್ರಾಹೀನತೆ ಮುಂತಾದ ಆರೋಗ್ಯಸಂಬಂಧಿ ಸಮಸ್ಯೆಗಳಿಗೂ ಸಾವಿರಾರು ಜನ ತುತ್ತಾಗಿದ್ದಾರೆ. ಈ ಸಲದ ಮುಂಗಾರು ಕೂಡ ತನ್ನ ಪ್ರಕೋಪ ತೋರಿಸಲಿದೆ ಎಂಬ ಅಂದಾಜಿದೆ. ದಕ್ಷಿಣ ಭಾರತದಲ್ಲಿ ಮಳೆರಾಯ ಹಾವಳಿ ಎಬ್ಬಿಸಲಿದ್ದು, ಉತ್ತರ ಭಾರತದಲ್ಲಿ ಬರ ಬೀಳಲಿದೆ ಎಂಬ ಹವಾಮಾನ ಮುನ್ಸೂಚನೆಯೂ ಆಗಲೇ ಬಂದಿದೆ. ಇದೆಲ್ಲವೂ ಏಕಾಏಕಿ ಆಗಿದ್ದಲ್ಲ.

ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿನ ಏರಿಳಿತವು ಕಣ್ಣಿಗೆ ಕಾಣುವಂತಿದೆ. ಮಳೆಗಾಲ, ಚಳಿಗಾಲ, ಬೇಸಿಗೆ ಇವೆಲ್ಲವೂ ನಿರ್ದಿಷ್ಟವಾಗಿ ಆಯಾ ಕಾಲಕ್ಕೆ ಸಂಭವಿಸದೇ ಏರುಪೇರಾಗುತ್ತಿವೆ. ಮನುಷ್ಯನ ಚಟುವಟಿಕೆಗಳೇ ಪ್ರಕೃತಿಯ ಈ ಕೆಂಗಣ್ಣಿಗೆ ಕಾರಣ ಎಂಬುದು ಹವಾಮಾನ ಬದಲಾವಣೆಗಳ ಅಧ್ಯಯನಕ್ಕಾಗಿ ವಿಶ್ವಸಂಸ್ಥೆಯಿಂದ ನೇಮಕವಾಗಿರುವ ಜಾಗತಿಕ ವಿಜ್ಞಾನಿಗಳ ತಂಡ - ಐಪಿಸಿಸಿ (ಇಂಟರ್ ಗವರ್ನಮೆಂಟ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್) ಅಭಿಮತ. ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮುಂತಾದ ಮಾಲಿನ್ಯಕಾರಕ, ಪರಿಸರನಾಶಕ ಇಂಧನಗಳ ಬಳಕೆ ಮೇರೆ ಮೀರಿದೆ. ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಳೆದ ಏಳು ದಶಕಗಳಲ್ಲಿ ಮೂವತ್ತು ಪಟ್ಟು ಹೆಚ್ಚಾಗಿದೆ. ಈ ವಿಷಯದಲ್ಲಿ ಭಾರತ ಇಡೀ ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿದೆ. ಭೂಮಿಯ ಉಷ್ಣತೆ ಹೀಗೆಯೇ ಏರುತ್ತಿದ್ದರೆ ಅತಿವೃಷ್ಟಿ, ಅನಾವೃಷ್ಟಿ, ಕೃಷಿ ನಾಶ, ಜನ-ಜಾನುವಾರುಗಳ ನಾಶ ಮುಂತಾದವು ಇನ್ನಷ್ಟು ಹೆಚ್ಚಾಗಲಿದೆ.

ಈಗ ನಾವೆಲ್ಲ ಅನುಭವಿಸುತ್ತಿರುವುದು ಹಲವು ವರ್ಷಗಳಿಂದ ತಜ್ಞರು ಎಚ್ಚರಿಸುತ್ತ ಬಂದಿದ್ದ ಹವಾಮಾನ ಬದಲಾವಣೆ ಅರ್ಥಾತ್ ಜಾಗತಿಕ ತಾಪಮಾನ ಏರಿಕೆಯ ಆರಂಭಿಕ ಝುಲಕ್ ಅಷ್ಟೆ. ಮುಂದಿನ ದಶಕಗಳು ಇನ್ನಷ್ಟು ಭೀಕರವಾಗಿರಲಿವೆ. ಆದ್ದರಿಂದ ಸರ್ಕಾರಗಳು, ಕೈಗಾರಿಕೆಗಳು ಮತ್ತು ವೈಯಕ್ತಿಕವಾಗಿ ಪ್ರಜ್ಞಾವಂತ ಜನರು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು, ವಾಯು-ಜಲ ಮಾಲಿನ್ಯ ತಡೆಯುವುದು, ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವುದು ಮುಂತಾದ ಕ್ರಮಗಳಿಗೆ ಆದಷ್ಟು ಬೇಗ ತೆರೆದುಕೊಳ್ಳಬೇಕು. ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಕಡಿಮೆ ಮಾಡಿ, ಪವನ- ಸೌರ ವಿದ್ಯುತ್ ಬಳಕೆ ಹೆಚ್ಚಿಸಬೇಕು. ಪರಿಸರಕ್ಕೆ ಪೂರಕವಾದ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು. ಸಮರೋಪಾದಿಯಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳಲು ಮುಂದಾಗದೇ ಇದ್ದರೆ, ಭೂಮಿಯ ದುಸ್ಥಿತಿಗೆ ನಮ್ಮನ್ನು ಮುಂದಿನ ಪೀಳಿಗೆ ಶಪಿಸುವಂತಾದೀತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net