ಪ್ರಕೃತಿಯ ಮಾಂತ್ರಿಕರು: ವೇಷ ಧರಿಸಿ ಮೋಸ ಮಾಡಿ ಬದುಕುವ ಪ್ರಾಣಿಗಳ ರೋಚಕ ಕಥೆ ಇಲ್ಲಿದೆ! | Animal mind games

 Animal mind games
ಮೈಂಡ್ ಗೇಮ್ಸ್ ಆಡುವ ಚಾಣಾಕ್ಷ ಪ್ರಾಣಿಗಳು
Published on: 

Animal mind games: ಪ್ರಕೃತಿ ಅನ್ನೋದು ಒಂದು ದೊಡ್ಡ ರಹಸ್ಯದ ಲೋಕ. ಇಲ್ಲಿ ಕೇವಲ ದೈಹಿಕ ಶಕ್ತಿ ಇದ್ದವರೇ ಬಾಳಬೇಕು ಅಂತೇನಿಲ್ಲ. ಬುದ್ಧಿವಂತಿಕೆ ಇರೋರು ಮಾತ್ರ ತಮ್ಮ ಸಾಮ್ರಾಜ್ಯ ಕಟ್ಟಿಕಳ್ಳೋದು. ಸಾಮಾನ್ಯವಾಗಿ ಕಾಡಿನಲ್ಲಿ ಸಿಂಹ, ಹುಲಿಗಳೆಂದರೆ ಬಲಶಾಲಿಗಳು ಎನ್ನುತ್ತೇವೆ. ಆದ್ರೆ, ಕೆಲ ಪ್ರಾಣಿಗಳು ಮೈಬಲಕ್ಕಿಂತ ತಲೆಬಲವನ್ನೇ (Mind Games) ನಂಬಿ ಬದುಕುತ್ತಿವೆ. ಬೇಟೆಯಾಡಲು ಅಥವಾ ಶತ್ರುಗಳಿಂದ ತಪ್ಪಿಸಿಕೊಳ್ಳಲು ಇವು ಬಳಸುವ ತಂತ್ರಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ.

1. ಮಿಮಿಕ್ ಆಕ್ಟೋಪಸ್ (Mimic Octopus)

ಇಂಡೋ-ಪೆಸಿಫಿಕ್ ಸಾಗರದ ಆಳ ಕಡಿಮೆ ಇರುವ ಮರಳು ಮಿಶ್ರಿತ ಪ್ರದೇಶಗಳಲ್ಲಿ ಕಂಡುಬರುವ ಮಿಮಿಕ್ ಆಕ್ಟೋಪಸ್ ಪ್ರಕೃತಿಯ ಅದ್ಭುತ ವೇಷಧಾರಿಗಳಲ್ಲೊಂದು. ಶತ್ರುಗಳಿಂದ ತಪ್ಪಿಸಿಕೊಳ್ಳಲು ಇದು ಬಳಸುವ ತಂತ್ರ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಶತ್ರುಗಳಿಗೆ ಚಳ್ಳೆಹಣ್ಣು ತಿನ್ನಿಸುವ ಕಲೆ: ತನ್ನ ದೇಹದ ಬಣ್ಣ, ಆಕಾರ ಮತ್ತು ಚಲನವಲನಗಳನ್ನು ಕ್ಷಣಾರ್ಧದಲ್ಲಿ ಬದಲಾಯಿಸುವ ಸಾಮರ್ಥ್ಯ ಈ ಆಕ್ಟೋಪಸ್‌ಗಿದೆ. ಅಪಾಯ ಎದುರಾದಾಗ ವಿಷಕಾರಿ ಸಮುದ್ರ ಹಾವಿನಂತೆ ಕಾಣುವ ರೀತಿಯಲ್ಲಿ ತನ್ನ ದೇಹ ಮತ್ತು ಕೈಗಳನ್ನು ಚಾಚಿ ಶತ್ರುಗಳನ್ನು ಬೆದರಿಸುತ್ತದೆ. ಅಷ್ಟೇ ಅಲ್ಲ, ಲಯನ್‌ಫಿಶ್, ಜೆಲ್ಲಿ ಫಿಶ್ ಹಾಗೂ ಸ್ಟಿಂಗ್‌ರೇ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಸಮುದ್ರ ಜೀವಿಗಳ ರೂಪವನ್ನು ಅನುಕರಿಸಬಲ್ಲದು. ತನ್ನ ಈ ಅದ್ಭುತ ನಕಲು ಕಲೆಯಿಂದಲೇ ಶತ್ರುಗಳಿಂದ ರಕ್ಷಣೆ ಪಡೆಯುತ್ತದೆ.

Mimic Octopus
ಮಿಮಿಕ್ ಆಕ್ಟೋಪಸ್

2. ಮಾರ್ಗೇ ಬೆಕ್ಕು (Margay Cat)

ಧ್ವನಿ ಅನುಕರಿಸುವ ಕಲೆಯಲ್ಲಿ ನಿಪುಣ: ದಕ್ಷಿಣ ಮತ್ತು ಮಧ್ಯ ಅಮೆರಿಕದ ದಟ್ಟ ಮಳೆಕಾಡುಗಳಲ್ಲಿ ಮರಗಳ ಮೇಲೆ ವಾಸಿಸುವ ಮಾರ್ಗೇ ಬೆಕ್ಕು, ಧ್ವನಿಯನ್ನು ಅನುಕರಿಸುವ ಕಲೆಯಲ್ಲಿ ನಿಪುಣವಾಗಿದೆ. ಮರಗಳ ಮರೆಯಲ್ಲಿ ಅಡಗಿ ಕುಳಿತು, ಮರಿ ಪೈಡ್ ಟ್ಯಾಮರಿನ್ ಕೋತಿ ಅಳುವ ಧ್ವನಿಯನ್ನು ಹೊರಡಿಸುತ್ತದೆ. ಮರಿ ಅಪಾಯದಲ್ಲಿದೆ ಎಂದು ಭಾವಿಸಿ ಧಾವಿಸಿ ಬರುವ ದೊಡ್ಡ ಕೋತಿಗಳನ್ನು ತನ್ನ ಬೇಟೆಯಾಡುವ ತಂತ್ರಕ್ಕೆ ಬಳಸಿಕೊಳ್ಳುತ್ತದೆ. ಹೀಗೆ ಇತರ ಪ್ರಾಣಿಗಳ ಧ್ವನಿಯನ್ನೇ ಅನುಕರಿಸಿ ಬೇಟೆಯನ್ನು ಸೆಳೆಯುವ ಈ ಬೆಕ್ಕು ಪ್ರಕೃತಿಯ ಕುತೂಹಲಕಾರಿ ಜೀವಿಗಳಲ್ಲಿ ಒಂದಾಗಿದೆ.

Margay Cat
ಮಾರ್ಗೇ ಬೆಕ್ಕು

3. ಫೋರ್ಕ್-ಟೇಲ್ಡ್ ಡ್ರೋಂಗೋ (Fork-tailed Drongo)

ಮೈಂಡ್ ಗೇಮ್ ತಂತ್ರ: ಈ ಕಪ್ಪು ಪಕ್ಷಿ ಸ್ವತಃ ಕಷ್ಟಪಟ್ಟು ಆಹಾರ ಹುಡುಕೋ ಬದಲು ಬೇರೆಯವರದ್ದೇ ಕದಿಯೋದ್ರಲ್ಲಿ ಕಿಲಾಡಿ. ಮೀರ್‌ಕ್ಯಾಟ್ಸ್ ಅಥವಾ ಇತರೆ ಪಕ್ಷಿಗಳು ಆಹಾರ ಹಿಡಿದ ತಕ್ಷಣ, ಹದ್ದು ಅಥವಾ ಬೇಟೆಗಾರ ಪ್ರಾಣಿ ಬರ್ತಿದೆ ಅಂತ ಸುಳ್ಳು ಎಚ್ಚರಿಕೆಯ ಕೂಗು (False alarm) ಹಾಕುತ್ತೆ. ಪ್ರಾಣಿಗಳು ಹೆದರಿ ಬಿಲದೊಳಗೆ ಓಡಿದ ಕೂಡಲೇ, ಅಲ್ಲೇ ಬಿಟ್ಟುಹೋದ ಆಹಾರವನ್ನು ಈ ಪಕ್ಷಿ ಆರಾಮವಾಗಿ ತಿನ್ನುತ್ತದೆ..

Fork-tailed Drongo
ಫೋರ್ಕ್-ಟೇಲ್ಡ್ ಡ್ರೋಂಗೋ

4. ಆಂಗ್ಲರ್ ಫಿಶ್ (Anglerfish)

ಬೆಳಕಿನ ಬಲೆಗೆ ಬೀಳಿಸುವ ಬೇಟೆಗಾರ: ಸಮುದ್ರದ ಅತ್ಯಂತ ಆಳವಾದ, ಕತ್ತಲು ತುಂಬಿದ ಪ್ರದೇಶಗಳಲ್ಲಿ ವಾಸಿಸುವ ಆಂಗ್ಲರ್ ಫಿಶ್ ಬೇಟೆಯಾಡುವ ತಂತ್ರವೇ ವಿಶೇಷ. ಇದರ ತಲೆಯ ಮುಂಭಾಗದಲ್ಲಿ ಗಾಳದಂತಿರುವ ಉದ್ದನೆಯ ರಚನೆ ಇದ್ದು, ಅದರ ತುದಿಯಲ್ಲಿ ಬ್ಯಾಕ್ಟೀರಿಯಾಗಳ ಸಹಾಯದಿಂದ ಹೊಳೆಯುವ ಬೆಳಕಿನ ಅಂಗವಿರುತ್ತದೆ. ಕತ್ತಲಿನಲ್ಲಿ ಈ ಬೆಳಕನ್ನು ನೋಡಿ ಆಹಾರವೆಂದು ಭಾವಿಸಿ ಸಣ್ಣ ಮೀನುಗಳು ಹತ್ತಿರ ಬರುತ್ತವೆ. ಅವು ಸಮೀಪಿಸುತ್ತಿದ್ದಂತೆ ಆಂಗ್ಲರ್ ಫಿಶ್ ತನ್ನ ದೊಡ್ಡ ಬಾಯಿಯನ್ನು ತೆರೆದು ಕ್ಷಣಾರ್ಧದಲ್ಲಿ ನುಂಗಿಹಾಕುತ್ತದೆ. ಹೀಗೆ ಕತ್ತಲನ್ನೇ ತನ್ನ ಬೇಟೆಯ ತಂತ್ರವನ್ನಾಗಿ ಬಳಸುವ ಈ ಮೀನು ಸಮುದ್ರದ ವಿಚಿತ್ರ ಜೀವಿಗಳಲ್ಲಿ ಒಂದಾಗಿದೆ.

Anglerfish
ಆಂಗ್ಲರ್ ಫಿಶ್

5. ಡೆತ್ ಆಡರ್ ಹಾವು (Death Adder)

ಮರೆಮಾಚಿಕೊಂಡೇ ಹೊಂಚು ಹಾಕುವ ವಿಷಕಾರಿ ಹಾವು: ಆಸ್ಟ್ರೇಲಿಯಾ ಮತ್ತು ನ್ಯೂ ಗಿನಿಯಾದ ಕಾಡು ಹಾಗೂ ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡುಬರುವ ಡೆತ್ ಆಡರ್, ಬೇಟೆಯನ್ನು ಬೆನ್ನಟ್ಟುವ ಬದಲು ಹೊಂಚು ಹಾಕಿ ಕಾಯುವ ತಂತ್ರ ಅನುಸರಿಸುತ್ತದೆ.

Death Adder Snake)
ಡೆತ್ ಆಡರ್ ಹಾವು

ಇದನ್ನೂ ಓದಿ: ವಾಯೇಜರ್-1ನಲ್ಲಿ ಅಂತರಿಕ್ಷಕ್ಕೆ ಹಾರಿದ ಭಾರತದ ಕೋಗಿಲೆ! 49 ವರ್ಷದ ಹಿಂದೆಯೇ ದಾಖಲಾಗಿದ್ದ ಕೇಸರಬಾಯಿ ಧ್ವನಿ |NASA Voyager 1

ಇನ್ನು, ಒಣ ಎಲೆಗಳ ನಡುವೆ ತನ್ನ ದೇಹವನ್ನು ಮರೆಮಾಚಿಕೊಂಡು, ಬಾಲದ ತುದಿಯನ್ನು ಹುಳುವಿನಂತೆ ಅಲುಗಾಡಿಸುತ್ತದೆ. ಇದನ್ನು ನಿಜವಾದ ಹುಳು ಎಂದು ಭಾವಿಸಿ ಹತ್ತಿರ ಬರುವ ಪಕ್ಷಿಗಳು, ಕಪ್ಪೆಗಳು ಹಾಗೂ ಸಣ್ಣ ಪ್ರಾಣಿಗಳನ್ನು ಕ್ಷಣಾರ್ಧದಲ್ಲಿ ಹಿಡಿಯುತ್ತದೆ. ತನ್ನ ಮರೆಮಾಚುವಿಕೆ ಮತ್ತು ತಾಳ್ಮೆಯನ್ನೇ ಬೇಟೆಯ ತಂತ್ರವನ್ನಾಗಿಸಿಕೊಂಡಿರುವ ಈ ಹಾವು ಪ್ರಕೃತಿಯ ಅತ್ಯಂತ ಚಾಣಾಕ್ಷ ಬೇಟೆಗಾರರಲ್ಲಿ ಒಂದಾಗಿದೆ.