NASA Voyager 1: ನಾಸಾದ ವಾಯೇಜರ್-1 ಬಾಹ್ಯಾಕಾಶ ನೌಕೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿನತ್ತ ಸಾಗುತ್ತಿದೆ. 2026ರ ನವೆಂಬರ್ 18ರಂದು ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರ ಕ್ರಮಿಸಿದ ಮೊದಲ ಮಾನವ ನಿರ್ಮಿತ ವಸ್ತು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಒಂದು ಬೆಳಕಿನ ದಿನ ಎಂದರೆ ಬೆಳಕು ಒಂದು ದಿನದಲ್ಲಿ ಕ್ರಮಿಸುವ ದೂರ. ಇದು ಸರಿಸುಮಾರು 25.9 ಬಿಲಿಯನ್ ಕಿಲೋಮೀಟರ್ಗಳಿಗೆ ಸಮಾನ.
ಈ ದೂರ ತಲುಪಿದ ಬಳಿಕ ಭೂಮಿಯಿಂದ ಕಳುಹಿಸುವ ರೇಡಿಯೊ ಸಂಕೇತ ವಾಯೇಜರ್-1 ತಲುಪಲು ಸುಮಾರು 24 ಗಂಟೆ ಬೇಕಾಗುತ್ತದೆ. ಅಲ್ಲಿಂದ ಪ್ರತಿಕ್ರಿಯೆ ಬಂದರೂ ಭೂಮಿಗೆ ತಲುಪಲು ಮತ್ತೊಂದು 24 ಗಂಟೆ ಬೇಕಾಗುತ್ತದೆ.
ಈ ಬಾಹ್ಯಾಕಾಶ ನೌಕೆಯಲ್ಲಿರುವ ವಿಶೇಷ ವಸ್ತುಗಳಲ್ಲಿ ಗೋಲ್ಡನ್ ರೆಕಾರ್ಡ್ ಕೂಡ ಒಂದು. 12 ಇಂಚಿನ ಚಿನ್ನದ ಲೇಪನ ಹೊಂದಿರುವ ತಾಮ್ರದ ಈ ಡಿಸ್ಕ್ನಲ್ಲಿ ಭೂಮಿಯ 115 ಚಿತ್ರಗಳು, ಪ್ರಕೃತಿಯ ಶಬ್ದಗಳು, 55 ಭಾಷೆಗಳ ಶುಭಾಶಯಗಳು ಹಾಗೂ ವಿವಿಧ ಸಂಸ್ಕೃತಿಗಳನ್ನು ಪ್ರತಿನಿಧಿಸುವ 27 ಸಂಗೀತ ಕೃತಿಗಳಿವೆ.
ಈ ದಾಖಲೆಗಳಲ್ಲಿ ಭಾರತದ ಸಂಗೀತ ಪರಂಪರೆಗೂ ವಿಶೇಷ ಸ್ಥಾನವಿದೆ. ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಕೇಸರಬಾಯಿ ಕೇರ್ಕರ್ ಅವರು ಹಾಡಿರುವ 'ಜಾತ್ ಕಹಾನ್ ಹೋ' ಎಂಬ ಮೂರೂವರೆ ನಿಮಿಷಗಳ ಗಾಯನವನ್ನು ಗೋಲ್ಡನ್ ರೆಕಾರ್ಡ್ನಲ್ಲಿ ಸೇರಿಸಲಾಗಿದೆ. ರಾಗ ಭೈರವಿಯಲ್ಲಿ ಮೂಡಿಬಂದಿರುವ ಈ ಹಾಡಿನ ಶೀರ್ಷಿಕೆಯ ಅರ್ಥ 'ನೀವು ಎಲ್ಲಿಗೆ ಹೋಗುತ್ತಿದ್ದೀರಿ?' ಎಂಬುದಾಗಿದೆ.
1892ರ ಜುಲೈ 13ರಂದು ಗೋವಾದ ಕೇರಿ ಗ್ರಾಮದಲ್ಲಿ ಜನಿಸಿದ ಕೇಸರಬಾಯಿ ಕೇರ್ಕರ್ ಅವರು ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಮುಖ ಗಾಯಕರಲ್ಲಿ ಒಬ್ಬರು. ಜೈಪುರ-ಅತ್ರೌಲಿ ಘರಾಣೆಯ ಪ್ರಸಿದ್ಧ ಗಾಯಕಿಯಾಗಿದ್ದ ಅವರು, ಈ ಘರಾಣೆಯ ಸ್ಥಾಪಕ ಉಸ್ತಾದ್ ಅಲ್ಲಾದಿಯಾ ಖಾನ್ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದರು.
ಅಮೆರಿಕದ ಸಂಗೀತ ಸಂಶೋಧಕ ರಾಬರ್ಟ್ ಇ. ಬ್ರೌನ್ ಅವರು ಗೋಲ್ಡನ್ ರೆಕಾರ್ಡ್ಗಾಗಿ ಸಂಗೀತ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೇಸರಬಾಯಿ ಅವರ ಭೈರವಿ ಗಾಯನವನ್ನು ಭಾರತೀಯ ಶಾಸ್ತ್ರೀಯ ಸಂಗೀತದ ಅತ್ಯುತ್ತಮ ಧ್ವನಿಮುದ್ರಿತ ಉದಾಹರಣೆ ಎಂದು ಅವರು ಬಣ್ಣಿಸಿದ್ದರು.
ಆಸಕ್ತಿದಾಯಕ ಸಂಗತಿಯೆಂದರೆ, ಕೇಸರಬಾಯಿ ಅವರಿಗೆ ಧ್ವನಿಮುದ್ರಣ ಮತ್ತು ರೇಡಿಯೊ ಪ್ರಸಾರದ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಸಂಗೀತ ಬರಹಗಾರ್ತಿ ಸುಶೀಲಾ ಮಿಶ್ರಾ ಅವರ ಪ್ರಕಾರ, ಅವರು ಪ್ರಸಾರ ಮಾಧ್ಯಮಗಳಿಂದ ದೂರ ಉಳಿಯಲು ಬಯಸುತ್ತಿದ್ದರು. ಧ್ವನಿಮುದ್ರಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದ ಬಳಿಕ ಎಚ್ಎಂವಿ ಸ್ಟುಡಿಯೋಗೆ ಮತ್ತೆ ಹೋಗಲು ನಿರಾಕರಿಸಿದ್ದರು ಎನ್ನಲಾಗಿದೆ.
1977ರ ಸೆಪ್ಟೆಂಬರ್ 16ರಂದು ಕೇಸರಬಾಯಿ ನಿಧನರಾದರು. ಅದಕ್ಕೂ ಕೇವಲ 11 ದಿನಗಳ ಮೊದಲು, ಸೆಪ್ಟೆಂಬರ್ 5ರಂದು ವಾಯೇಜರ್-1 ಉಡಾವಣೆಯಾಗಿತ್ತು. ಹೀಗೆ ಅವರ ಧ್ವನಿ ಇಂದು ಭೂಮಿಯಿಂದ ಕೋಟ್ಯಂತರ ಕಿಲೋಮೀಟರ್ ದೂರದಲ್ಲಿ ಸಾಗುತ್ತಿರುವುದು ವಿಶೇಷ.
ಕೇವಲ ಸಂಗೀತವಷ್ಟೇ ಅಲ್ಲ, ಭಾರತದ ಭಾಷಾ ವೈವಿಧ್ಯಕ್ಕೂ ಗೋಲ್ಡನ್ ರೆಕಾರ್ಡ್ನಲ್ಲಿ ಸ್ಥಾನ ನೀಡಲಾಗಿದೆ. ಹಿಂದಿ, ಬಂಗಾಳಿ, ಮರಾಠಿ, ಗುಜರಾತಿ, ಕನ್ನಡ, ತೆಲುಗು, ಪಂಜಾಬಿ, ಉರ್ದು, ಒಡಿಯಾ ಮತ್ತು ರಾಜಸ್ಥಾನಿ ಸೇರಿದಂತೆ 10 ಭಾರತೀಯ ಭಾಷೆಗಳಲ್ಲಿ ಶುಭಾಶಯ ಸಂದೇಶಗಳನ್ನು ದಾಖಲಿಸಲಾಗಿದೆ.
ಇವುಗಳಲ್ಲಿ ಭೂಮಿಯ ನಿವಾಸಿಗಳ ಪರವಾಗಿ ನೀಡಿರುವ ಶುಭಾಶಯಗಳೂ ಇವೆ. ರಾಜಸ್ಥಾನಿ ಭಾಷೆಯ ಸಂದೇಶವೊಂದರಲ್ಲಿ, 'ನಾವು ಇಲ್ಲಿ ಸಂತೋಷವಾಗಿದ್ದೇವೆ, ನೀವೂ ಅಲ್ಲಿ ಸಂತೋಷವಾಗಿರಿ' ಎಂಬ ಹಾರೈಕೆ ಇದೆ. ಕಾರ್ನೆಲ್ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಬಿಶುನ್ ಖರೆ ಅವರು ಭಾರತೀಯ ಸಮುದಾಯದ ಜನರನ್ನು ಸಂಪರ್ಕಿಸಿ ಈ ಸಂದೇಶಗಳನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಾಯೇಜರ್-1 ಗೋಲ್ಡನ್ ರೆಕಾರ್ಡ್ನಲ್ಲಿರುವ ಸಂಗೀತವನ್ನು ಪ್ರಸಾರ ಮಾಡುವುದಿಲ್ಲ. ಅದು ಮಾನವ ನಾಗರಿಕತೆಯ ನೆನಪಿನ ದಾಖಲೆ ರೂಪದಲ್ಲಿ ಈ ಡಿಸ್ಕ್ ಅನ್ನು ತನ್ನೊಂದಿಗೆ ಹೊತ್ತೊಯ್ಯುತ್ತಿದೆ. ನಾಸಾದ ಅಂದಾಜಿನ ಪ್ರಕಾರ, ಸುಮಾರು 40,000 ವರ್ಷಗಳ ಬಳಿಕ ವಾಯೇಜರ್-1 ಗ್ಲೀಸ್ 445 ನಕ್ಷತ್ರದ ಸಮೀಪದಿಂದ ಹಾದುಹೋಗಲಿದೆ.
ಈ ಡಿಸ್ಕ್ ಅನ್ನು ಬೇರೆ ಯಾವುದಾದರೂ ನಾಗರಿಕತೆ ಕಂಡುಕೊಳ್ಳುತ್ತದೆಯೇ ಎಂಬುದು ಇಂದಿಗೂ ತಿಳಿದಿಲ್ಲ. ಆದರೆ ಮಾನವ ಇತಿಹಾಸ, ಸಂಸ್ಕೃತಿ ಮತ್ತು ಸಂಗೀತದ ನೆನಪುಗಳನ್ನು ಹೊತ್ತ ವಾಯೇಜರ್-1ನ ಪಯಣದಲ್ಲಿ ಭಾರತದ ಶಾಸ್ತ್ರೀಯ ಸಂಗೀತಕ್ಕೂ ಸ್ಥಾನ ಸಿಕ್ಕಿರುವುದು ಹೆಮ್ಮೆಯ ಸಂಗತಿ.