

ಬೆಳೆಗಳ ಇಳುವರಿ ಕುಂಠಿತ: ಭೂಮಧ್ಯ ರೇಖೆಯ ಆಸುಪಾಸಿನ ರಾಷ್ಟ್ರಗಳಲ್ಲಿ ಬೆಳೆಗಳ ಇಳುವರಿ ಕುಂಠಿತವಾಗುತ್ತಿದೆ. 120 ದಿನಗಳಲ್ಲಿ ಬೆಳೆಯಬೇಕಾದ ಬೆಳೆಗಳು 90 ದಿನ ಬೆಳೆದು, ಕುಂಠಿತವಾಗುತ್ತಿವೆ. ಇದರಿಂದ ಇಳುವರಿಯೂ ಕಡಿಮೆಯಾಗಿದೆ. ಕಾಳು ಕಟ್ಟುವ ಪ್ರಮಾಣವೂ ಕಡಿಮೆಯಾಗುತ್ತಿದೆ. ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ವಿಶೇಷ ಗಮನ ವಹಿಸಬೇಕಿದೆ. ಉಷ್ಣಾಂಶ ಏರಿಕೆಯಿಂದ ಕೆಲ ರಾಷ್ಟ್ರಗಳಲ್ಲಿ ಬೀಳುವ ವಾರ್ಷಿಕ ಮಳೆ ಪ್ರಮಾಣದಲ್ಲಿ ಏರಿಳಿತವಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ನೈಋತ್ಯ ಮಾನ್ಸೂನ್ ಸಂದರ್ಭದಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಆದರೆ, ಕರಾವಳಿ ಹಾಗೂ ಕಡತತೀರ ಜಿಲ್ಲೆಗಳಲ್ಲಿ ವಾರ್ಷಿಕ ಮಳೆ ಪ್ರಮಾಣ ಇಳಿಮುಖವಾಗುತ್ತಿದೆ. ಪೂರ್ವ ಮಾನ್ಸೂನ್ ಹಾಗೂ ಈಶಾನ್ಯ ಮಾನ್ಸೂನ್ ಸಂದರ್ಭದಲ್ಲಿ ಕೆಲ ಜಿಲ್ಲೆಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತಿದೆ.
ಬೆಳೆ ಪದ್ಧತಿ ಬದಲಾಗಬೇಕಿದೆ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ನೈರುತ್ಯ ಮಾನ್ಸೂನ್ ಸಂದರ್ಭದಲ್ಲಿ 120-140 ಅವಧಿಯ ಬೆಳೆಗಳಿಗೆ ನೀರಿನ ಕೊರತೆಯಾಗುತ್ತಿದ್ದು, ಬೆಳೆ ಪದ್ಧತಿ ಬದಲಾಗಬೇಕಿದೆ. ಅಲ್ಪಾವಧಿ ಬೆಳೆಗಳ ತಳಿಗಳನ್ನು ಬೆಳೆದು ಆಹಾರ ಭದ್ರತೆ ಕಾಪಾಡಿಕೊಳ್ಳಬೇಕು. ಕಡಲತೀರ ಪ್ರದೇಶಗಳಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿಯೂ ಬೆಳೆಗಳ ಪದ್ಧತಿ ಬದಲಾಗಬೇಕಿದೆ. ಅಲ್ಪಾವಧಿ ರಾಗಿ ಮತ್ತು ಭತ್ತಗಳ ಬದಲು ಇಲ್ಲಿ ದೀರ್ಘಾವಧಿ ಬೆಳೆಗಳನ್ನು ಬೆಳೆಯಬೇಕು. ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಪ್ರಾರಂಭವಾಗುತ್ತದೆ. ಬೀಳುವ ಮಳೆ ಆಧಾರದಲ್ಲಿ ಬೀಜಗಳನ್ನು ಬಿತ್ತನೆ ಮಾಡಬೇಕು. ನೀರಿನ ಕೊರತೆ ಇರುವ ಕಡೆಗಳಲ್ಲಿ ಅಲ್ಪಾವಧಿ ಬೆಳೆಗಳನ್ನು ಬೆಳೆಯಬೇಕು. ಹಾಗಾಗಿ, ಯಾವ್ಯಾವ ಪ್ರದೇಶಗಳಲ್ಲಿ ಏನೇನು ಬೆಳೆಗಳನ್ನು ಬೆಳೆಯಬೇಕು ಎಂಬುದರ ಬಗ್ಗೆ ಸಂಶೋಧನೆ ನಡೆಸಿ ಕ್ರಿಯಾಯೋಜನೆ ತಯಾರಿಸಬೇಕು. ಈ ಕೆಲಸವನ್ನು ಎಲ್ಲರ ಸಹಕಾರದಿಂದ ಸರ್ಕಾರ ಮಾಡಬೇಕಿದೆ. ಬೆಳಗಾವಿ, ಬಳ್ಳಾರಿ, ಶಿವಮೊಗ್ಗ, ಚಾಮರಾಜನಗರದಲ್ಲಿ ಬೆಳೆಗಳ ಇಳುವರಿ ಕಡಿಮೆಯಾಗುತ್ತಿದೆ. ಮಂಡ್ಯ, ಮೈಸೂರು, ಹಾಸನ ಮತ್ತು ರಾಯಚೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಇಳುವರಿ ಜಾಸ್ತಿಯಾಗುತ್ತಿದೆ.
ಮಳೆಯೂ ಹೆಚ್ಚು: ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವಾರ್ಷಿಕ ಮಳೆ ಅವಧಿ ಒಂದು ತಿಂಗಳು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. ಭಾರಿ ಮಳೆಯಿಂದ ಭೂಕುಸಿತ ಮತ್ತು ಪ್ರವಾಹ ಸೇರಿ ಇನ್ನಿತರ ಅವಘಡಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಇದನ್ನು ತಡೆಯಲು ಈಗಿನಿಂದಲೇ ಸರ್ಕಾರಗಳು ಸಿದ್ಧತೆ ಮಾಡಿಕೊಳ್ಳಬೇಕಿದೆ. ಹೆಚ್ಚು ಮಳೆಯಾದರೆ ಕೃಷಿ ಮೇಲೆ ದುಷ್ಟರಿಣಾಮ ಉಂಟಾಗಲಿದೆ. ನೀರು ಪೋಲಾಗುವುದನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳಬೇಕಿದೆ.
ನೀರನ್ನು ಸಂಪನ್ಮೂಲವಾಗಿ ಪರಿವರ್ತಿಸಬೇಕು: ನಮಗೆ ಮಳೆಯಿಂದ ಲಭಿಸುತ್ತಿರುವ ನೀರನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಕೆಲಸ ಆಗಬೇಕು. ಈ ವರ್ಷ ಅನೇಕ ಕಡೆ ಹೆಚ್ಚು ಮಳೆಯಾದಂತೆ ಕಾಣುತ್ತಿದೆ. ಆದರೆ ಅಕ್ಟೋಬರ್ ತಿಂಗಳವರೆಗೆ ಆಗಿರುವ ಮಳೆ ನೋಡಿದಾಗ, ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಿಲ್ಲ ಎನ್ನುವುದು ತಿಳಿಯುತ್ತದೆ. ಎರಡು ದಿನದಲ್ಲಿ ಸುರಿಯುವ ಮಳೆ ಒಂದೇ ದಿನದಲ್ಲಿ ಲಭಿಸಿದಾಗ, ಪ್ರವಾಹವನ್ನು ಸಂಪನ್ಮೂಲವನ್ನಾಗಿ ಮಾಡಿಕೊಳ್ಳುವುದೊಂದೇ ಪರಿಹಾರವಾಗುತ್ತದೆ. ಹೆಚ್ಚು ದಿನದಿಂದ ನೀರಿನ ಹರಿವಿಲ್ಲದೆ ಬತ್ತಿದ ಸ್ಥಳಕ್ಕೆ ಒಂದೇ ಬಾರಿ ನೀರು ಹರಿದಾಗ ಸಣ್ಣಪುಟ್ಟ ಭೂ ಹೊಂದಾಣಿಕೆಗಳು ನಡೆಯುತ್ತವೆ, ಆದರೆ ಇದರಿಂದ ದೊಡ್ಡಪ್ರಮಾಣದ ಅಪಾಯ ಇಲ್ಲ.
ಹಲವು ಏರುಪೇರು: ಮುಂಬರುವ ಕೆಲ ವರ್ಷಗಳಲ್ಲಿ ಕರ್ನಾಟಕದ ಉತ್ತರ ಒಳನಾಡಿನ 62 ತಾಲೂಕುಗಳ ಪೈಕಿ 59 ತಾಲೂಕುಗಳಲ್ಲಿ ಮಳೆ ಕಡಿಮೆ ಆಗುವ ಸಾಧ್ಯತೆ ಇದೆ. ಕೆಲ ಜಿಲ್ಲೆಗಳಲ್ಲಿ ಮಳೆಪ್ರಮಾಣ ಹೆಚ್ಚಲಿದೆ. ಈ ಹಿಂದೆ ಕಡಿಮೆ ಮಳೆ ಆಗುತ್ತಿದ್ದ ಚಿತ್ರದುರ್ಗದಲ್ಲಿ 65 ಮಿಮೀ ಮಳೆ ಹೆಚ್ಚಾಗಿದೆ. ಅಲ್ಲಿ ಕಳೆದ ನಾಲ್ಕು ವರ್ಷದಿಂದ ಸತತ ನೆರೆ ಸಂಭವಿ ಸುತ್ತಿದೆ.
ತಮಿಳುನಾಡು ಗ್ರೀನ್ ಕ್ಲೈಮೇಟ್ ಕಂಪನಿಯ ಮಾದರಿಯಲ್ಲೇ ಕರ್ನಾಟಕದಲ್ಲೂ ಸಂಸ್ಥೆ ಸ್ಥಾಪಿಸಿದರೆ ಹವಾಮಾನ ವೈಪರೀತ್ಯ ಎದುರಿಸಲು ಸಹಕಾರಿಯೇ?
-ಹವಾಮಾನ ವೈಪರೀತ್ಯ ಎದುರಿಸಲು ಸಮಗ್ರತೆಯ ಮಾರ್ಗ ಕಂಡುಕೊಳ್ಳಬೇಕು. ವಾತಾವರಣದ ಕುರಿತು ಅಧ್ಯಯನ ಮಾಡಿದ ಸಂಸ್ಥೆಗಳು ಮಾಹಿತಿ ಕಲೆ ಹಾಕಿರುತ್ತವೆ. ಅದನ್ನು ಸರ್ಕಾರಗಳು ಬಳಕೆ ಮಾಡಿಕೊಳ್ಳಬಹುದು. ಪ್ರಧಾನಿಯವರು ಎರಡು ವರ್ಷ ಹಿಂದೆ 60 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದರು. ಈ ಹಣದಿಂದ ಇಂಧನ, ಸಾರಿಗೆ, ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಆಲೋಚಿಸಬೇಕು. ಪ್ರತಿ ರಾಜ್ಯದಲ್ಲೂ ಒಂದು ಹವಾಮಾನ ಬದಲಾವಣೆ ಸಂಸ್ಥೆ ಸ್ಥಾಪನೆ ಆಗುವುದು ಉತ್ತಮ. ಐಐಎಸ್ಸಿ, ಡಿಎಂಸಿ, ಕೃಷಿ ಇಲಾಖೆಯವರು ಸೇರಿ ಎಲ್ಲರೂ ಬೇರೆಬೇರೆ ಸಂಶೋಧನೆ, ಮಾಹಿತಿ ಕಲೆ ಹಾಕುತ್ತಿದ್ದಾರೆ. ನಮಗೆ ಮಾಹಿತಿ ಕೊರತೆ ಇಲ್ಲ, ಸಿಬ್ಬಂದಿ ಸಮಸ್ಯೆ ಇಲ್ಲ, ಸಂಶೋಧಕರ ಸಮಸ್ಯೆ ಇಲ್ಲ. ಆದರೆ ಎಲ್ಲವೂ ಒಂದು ಕಡೆ ಲಭಿಸುತ್ತಿಲ್ಲ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಒಂದು ಸಂಸ್ಥೆ ಮಾಡುವುದು ಉತ್ತಮ.
ಹವಾಮಾನ ಸಮಸ್ಯೆ ಬಗೆಹರಿಸಲು ದೊಡ್ಡ ಪ್ರಮಾಣದ ಹಣಕಾಸಿನ ಅವಶ್ಯಕತೆ ಇದ್ದು, ಒದಗಿಸುವುದು ಸರ್ಕಾರಗಳಿಂದ ಸಾಧ್ಯವೇ?
-‘ಹವಾಮಾನ ಆರ್ಥಿಕತೆ’ ಎನ್ನುವುದು ಅಗತ್ಯ, ಅದು ದೊಡ್ಡ ಮೊತ್ತ. ಆದರೆ ಹಣ ಹೊಂದಿಕೆ ಆಗುವವರೆಗೆ ಕಾಯುವ ಸ್ಥಿತಿ ಇಲ್ಲ. ಪ್ರತ್ಯೇಕವಾಗಿ ಕೆಲಸ ಮಾಡುವ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಅನುಕೂಲವಾಗುತ್ತದೆ. ಯಾವುದೇ ಯೋಜನೆಗಳನ್ನು ಕೈಗೊಳ್ಳುವ ಮುನ್ನ, ಈಗಾಗಲೇ ಲಭ್ಯವಿರುವ ದತ್ತಾಂಶಗಳನ್ನು ಅಧ್ಯಯನ ಮಾಡಿ ವಿನ್ಯಾಸ ಮಾಡಬೇಕು. ಆಗ ಪರಿಸರಕ್ಕೆ ಅಪಾಯ ತಪು್ಪವ ಜತೆಗೆ, ಯೋಜನೆಯ ಪೂರ್ಣ ಉಪಯೋಗವನ್ನೂ ಪಡೆದುಕೊಳ್ಳಬಹುದು. ಗ್ರೀನ್ ಇಂಡೆಕ್ಸ್ ಆಧಾರದಲ್ಲಿ ಬಜೆಟ್ ನೀಡಲಾಗುತ್ತದೆ ಎಂದು ಕೆಲ ವರ್ಷಗಳ ಹಿಂದೆ ಸರ್ಕಾರ ಘೋಷಣೆ ಮಾಡಿತಾದರೂ ಜಾರಿ ಆಗಲಿಲ್ಲ. ಇದೊಂದೇ ಹೆಜ್ಜೆಯಿಂದ ಅರ್ಧದಷ್ಟು ಸಮಸ್ಯೆ ಬಗೆಹರಿಯುತ್ತದೆ. ಈ ಕ್ರಮದ ನಂತರ ನಿರ್ದಿಷ್ಟ ಹವಾಮಾನ ಸಮಸ್ಯೆ ಸರಿಪಡಿಸಲು ಹಣವನ್ನು ವಿನಿಯೋಗಿಸಬಹುದು. ಯೋಜನೆಗಳಿಗೆ ಅನುಮೋದನೆ ನೀಡಲು ಈಗಾಗಲೇ ನೋಡುತ್ತಿರುವ ಅನೇಕ ಮಾನದಂಡಗಳ ಜತೆಗೆ ಪರಿಸರ ವಿಚಾರವನ್ನೂ ಸೇರಿಸಿಕೊಳ್ಳಬೇಕು.
ಹವಾಮಾನ ವೈಪರೀತ್ಯದಿಂದ ಆಹಾರ ಸ್ವಾವಲಂಬನೆ ಮೇಲೆ ಪರಿಣಾಮವಾಗುತ್ತದೆಯೇ?
-ಹವಾಮಾನ ವೈಪರೀತ್ಯ ಕ್ರಿಯಾಯೋಜನೆಯಲ್ಲಿ, ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಪ್ರಮಾಣ ಎಂದು ಅಂದಾಜಿಸಿ, ಬೆಳೆಗಳ ಕುರಿತು ಗುರುತಿಸಿದ್ದೇವೆ. ಒಟ್ಟಾರೆ ರಾಜ್ಯದಲ್ಲಿ ಉತ್ಪಾದನೆ ಕಡಿಮೆ ಆಗುವ ಸ್ಥಿತಿ ಇದರಿಂದ ಕಂಡುಬಂತು. ಹವಾಮಾನಕ್ಕೆ ಅನುಗುಣವಾದ ಕೃಷಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಹವಾಮಾನಕ್ಕೆ ತಕ್ಕಂತೆ ಬೆಳೆಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಉದಾಹರಣೆಗೆ, 2035ರ ವೇಳೆಗೆ ರಾಜ್ಯದ ಕೆಲವೆಡೆ ಭತ್ತದ ಉತ್ಪಾದನೆ ಶೇಕಡ 0.9 ಕಡಿಮೆ ಆಗಬಹುದು. ಜೋಳದ ಉತ್ಪಾದನೆ ಶೇ.2.5 ಹೆಚ್ಚಾಗಬಹುದು. ಇದೇ ವೇಳೆ ದಕ್ಷಿಣ ಕನ್ನಡ, ರಾಯಚೂರು, ಬಳ್ಳಾರಿ, ಮಂಡ್ಯದಲ್ಲಿ ಭತ್ತ ಉತ್ಪಾದನೆ ಶೇ.10-25ರವರೆಗೆ ಹೆಚ್ಚಾಗುತ್ತದೆ. ಬೀದರ್, ಚಿತ್ರದುರ್ಗ, ದಾವಣಗೆರೆಯಲ್ಲಿ ಜೋಳ ಹೆಚ್ಚು ಇಳುವರಿ ಕಾಣುತ್ತದೆ. ಇದಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡರೆ, ಉತ್ಪಾದನೆ ಹೆಚ್ಚಾಗಿ, ಏರುಗತಿಯಲ್ಲಿರುವ ಜನಸಂಖ್ಯೆಗೆ ಆಹಾರ ನೀಡಲು ಸಾಧ್ಯವಾಗುತ್ತದೆ.