

ಕೃತಕ ಬುದ್ಧಿವಂತಿಕೆಯಿಂದ ನಾವು ನಮ್ಮ ನೈಸರ್ಗಿಕ ಜೀವನವನ್ನು ಕಳೆದುಕೊಳ್ಳುತ್ತಿದೇವಾ? ಎಂಬ ಪ್ರಶ್ನೆಯೊಂದು ನಮ್ಮೆದುರಿಗಿದೆ. ಏಕೆಂದರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಕಾಲದ ಈಗಿನ ದೊಡ್ದ ಸಮಸ್ಯೆಯೆಂದರೆ ಹತ್ತು ಹಲವಾರು ಒತ್ತಡಗಳ ಕೃತಕ ಬದುಕು. ವಿದ್ಯಾರ್ಥಿ ಜೀವನದಲ್ಲಿ ಒತ್ತಡ, ವ್ಯವಹಾರಿಕ ಜೀವನದಲ್ಲಿ ಒತ್ತಡ, ಕುಟುಂಬ ಜೀವನದಲ್ಲಿ ಒತ್ತಡ ಇತ್ಯಾದಿ. ಈ ಒತ್ತಡದಿಂದ ಹಾಗೂ ಕೃತಕ ಬುದ್ಧಿವಂತಿಕೆಯಿಂದ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ.
ಮೊದಲಾಗಿ ತಂದೆ ತಾಯಂದಿರ ಒತ್ತಡ. ನೀನು ಶಾಲೆಯಲ್ಲಿ ಮೊದಲ ಸ್ಥಾನ ಪಡೆಯಬೇಕು, ನಮಗೆ ಹೆಸರು ತರಬೇಕು, ಹೆಸರಾಂತ ವೈದ್ಯ ಅಥವಾ ಇಂಜಿನಿಯರ್ ಆಗಬೇಕು. ಆದ್ದರಿಂದ ಸದಾಕಾಲ ಟ್ಯೂಷನ್, ಹೋಮ್ ವರ್ಕ್, ಕರಾಟೆ ಕ್ಲಾಸ್, ಡಾನ್ಸ್, ಮ್ಯೂಸಿಕ್ ಇತ್ಯಾದಿಗಳಿಂದಾಗಿ ಇಲ್ಲಿ ಮುಗ್ಧ ಮಕ್ಕಳ ನೈಸರ್ಗಿಕ ಬದುಕಿಗೆ ಸಮಯವೇ ಇಲ್ಲದಂತಾಗಿದೆ.
ಇನ್ನೊಂದು ಕಡೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಒತ್ತಡ. ಕಲಿ, ಕಲಿ, ಕಲಿ. ಸಿಇಟಿ, ನೀಟ್, ಜೆಇಇ ಇದರಲ್ಲಿ ರ್ಯಾಂಕ್ ತಂದು ನಮ್ಮ ಶಾಲೆಯ ಕೀರ್ತಿ ಹಾಗೂ ಮಾರ್ಕೆಟಿಂಗ್ ಹೆಚ್ಚಿಸಬೇಕು. ನಾವು ಮಕ್ಕಳನ್ನು ಯಂತ್ರದ ಥರ ತರಬೇತಿಗೊಳಿಸಿದರೆ ಮನುಷ್ಯತ್ವವನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುವುದು ಯಾವಾಗ? ಶಾಲೆಯಲ್ಲಿ ಸೆಕೆಂಡ್ ಮತ್ತು ಥರ್ಡ್ ಬರಲು ಕಲಿಸುವುದು ಯಾರು? ಇವೆಲ್ಲ ಕಲಿಕೆಯ ಕಾಲದ ಒತ್ತಡಗಳು.
ಶಾಲಾ ಕಾಲೇಜು ಒತ್ತಡ ಮುಗಿದ ನಂತರ ಯುವಜನರಿಗೆ ಕೆಲಸದ ಸ್ಥಳದಲ್ಲಿ ಒತ್ತಡ. ಅಲ್ಲಿ ಹಣವೇ ಪ್ರಮುಖ ಮಾನದಂಡ. ಹೆಚ್ಚು ಸಂಬಳ ಪಡೆಯಲು ಹೆಚ್ಚು ಕಲಿ. ಹಾಗಾಗಿ ಉನ್ನತ ಸ್ಥಾನ ಪಡೆಯಲು ಅವರೆಲ್ಲರಲ್ಲಿ ಹುಚ್ಚು ಸ್ಪರ್ಧೆ. ಒಂದೋ ಕೆಲಸ ಮಾಡು ಇಲ್ಲವೇ ನಾಶವಾಗು ಎಂಬಂಥ ಸ್ಥಿತಿ. ಈ ಒತ್ತಡ ಇನ್ನೊಂದು ಕೃತಕ ಬದುಕಿಗೆ ಪೀಠಿಕೆ ಹಾಕುತ್ತದೆ.