

ಶೃಂಗೇರಿ: ಪರಿಸರವನ್ನು ಹಸಿರಾಗಿಸಲು ಗಿಡ, ಮರ ಬೆಳೆಸಬೇಕು. ಪ್ರತಿ ವರ್ಷವೂ ಗಿಡ ನೆಟ್ಟು ಪೋಷಿಸಬೇಕು ಎಂದು ಸಿಂದೋಡಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕಿಗ್ಗಾ ಜಯಣ್ಣ ಹೇಳಿದರು.
ಮರ್ಕಲ್ ಗ್ರಾಪಂ ಸಿಂದೋಡಿಯಲ್ಲಿ ಗ್ರಾಮ ಅರಣ್ಯ ಸಮಿತಿ ಮಂಗಳವಾರ ಏರ್ಪಡಿಸಿದ್ದ ವನಮಹೋತ್ಸವದಲ್ಲಿ ಗಿಡನೆಟ್ಟು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಅರಣ್ಯದ ಮೇಲೆ ಅತಿಕ್ರಮಣ ಹೆಚ್ಚಾಗಿದೆ. ಉರುವಲು ಬಳಕೆ ಕಡಿಮೆಯಾದರೂ ಕಾಡು ನಾಶ ಮುಂದುವರಿದಿದೆ. ಕಟ್ಟಡ ನಿರ್ಮಾಣ, ಕೈಗಾರಿಕೆ, ಅಭಿವೃದ್ಧಿ ಕಾರ್ಯಕ್ಕಾಗಿ ಅರಣ್ಯ ನಾಶ ಮಾಡಲಾಗುತ್ತಿದೆ. ಅರಣ್ಯ ನಾಶದಿಂದ ಪ್ರಕೃತಿ ವಿಕೋಪ ಹೆಚ್ಚುತ್ತಿದ್ದು ಅಕಾಲಿಕ ಮಳೆ, ಅತಿಯಾದ ಬಿಸಿಲು ಉಂಟಾಗುತ್ತಿದೆ. ಇದಕ್ಕೆಲ್ಲ ಪರಿಹಾರವೆಂದರೆ ಗಿಡಗಳನ್ನು ಬೆಳಸುವುದು ಎಂದರು.
ಅರಣ್ಯ ಇಲಾಖೆಯ ಾರೂಕ್ ದೊಡವಾಡ ಮಾತನಾಡಿ, ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಕಾಡು ಉಳಿಯಲು ಸಾಧ್ಯ. ನೆಟ್ಟಿರುವ ಗಿಡವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಸಮಿತಿ ಸದಸ್ಯರಾದ ನಯನಕುಮಾರ, ಪ್ರಜ್ವಲ್, ಪ್ರಸಾದ, ಮಲ್ಲಿಕಾ, ಚಿತ್ರಾ, ಭವಾನಿ, ಸವಿತಾ, ಅರಣ್ಯ ಇಲಾಖೆಯ ಹರೀಶ್ ಇದ್ದರು.