ಚಳಿಗಾಲದಲ್ಲಿ ಚರ್ಮದ ಆರೋಗ್ಯಕ್ಕೆ ಬೇಕು ನೈಸರ್ಗಿಕ ಆರೈಕೆ

ವಿಜಯವಾಣಿ (1)
Published on
ದೇಹದ ಉಳಿದ ಭಾಗ ಏನಾದರೂ ಆಗಲಿ ಚರ್ಮ ಮಾತ್ರ ಚೆನ್ನಾಗಿರಬೇಕು ಮತ್ತು ಚೆನ್ನಾಗಿ ಕಾಣಬೇಕು ಎಂಬುದು ಬಹುತೇಕ ನಮ್ಮೆಲ್ಲರ ಆಸೆ. ಆದರೆ ಈ ಆಸೆಗೆ ತಣ್ಣೀರೆರೆಚುವ ಕೆಲಸವನ್ನು ಅತ್ಯಂತ ಸುಲಭವಾಗಿ ಚಳಿಗಾಲ ಮಾಡಿಬಿಡುತ್ತದೆ. ಚಳಿಗಾಲದಲ್ಲಿ ತೇವಾಂಶದ ಕೊರತೆಯಿಂದ ಚರ್ಮದ ಅಡಿ ಪದರದಲ್ಲಿರುವ ಕೊಬ್ಬಿನ ಪ್ರಮಾಣದಲ್ಲಿ ದೊಡ್ಡ ಪ್ರಮಾಣದ ಇಳಿಕೆಯಾಗುವುದರಿಂದ ಸಹಜವಾಗಿ ಚರ್ಮ ಒಣಗುವುದು, ಬಿರುಕು ಬಿಡುವುದು, ತುರಿಕೆಯಾಗುವುದು, ಕಪ್ಪಾಗುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಈ ಕಾರಣದಿಂದ ಚಳಿಗಾಲ ಬಂತೆಂದರೆ ಎಷ್ಟೋ ಕಂಪನಿಗಳು ತಮ್ಮ ಲೋಶನ್, ಕ್ರೀಮ್ಳ ಪ್ರಚಾರದಲ್ಲಿ ತೊಡಗುತ್ತವೆ.

ಸಹಜವಾಗಿ ಜನರು ಕೂಡ ಇವುಗಳಿಂದ ಚರ್ಮದ ತೇವಾಂಶ ಹೆಚ್ಚಿ ತಮಗೆ ಅನುಕೂಲವಾಗುತ್ತದೆ ಮತ್ತು ಚರ್ಮ ಸುಂದರವಾಗಿ ಕಾಣುತ್ತದೆ ಎಂದು ಭಾವಿಸಿ ಅವುಗಳನ್ನು ಖರೀದಿಸುತ್ತಾರೆ. ಆದರೆ ಇಂಥ ಬಹುತೇಕ ಕ್ರೀಮ್ ಗಳಲ್ಲಿ ಹಲವಾರು ರೀತಿಯ ರಾಸಾಯನಿಕಗಳು ಇರುವ ಕಾರಣ ಇವು ಭವಿಷ್ಯದಲ್ಲಿ ಚರ್ಮದ ಆರೋಗ್ಯವನ್ನು ಹಾಳು ಮಾಡಬಹುದು. ಹಾಗಾಗಿ ಚಳಿಗಾಲದಲ್ಲಿ ನಮ್ಮ ಚರ್ಮದ ಆರೋಗ್ಯವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳುವ ಬಗೆಯನ್ನು ಸರಿಯಾಗಿ ತಿಳಿದುಕೊಳ್ಳೋಣ.

ಮೊದಲನೆಯದಾಗಿ ಆಹಾರ

ಆಯುರ್ವೆದ ಈ ಋತುವಿನಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಸೇವಿಸಲು ಹೇಳುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಸೇವಿಸಿದಾಗ ಸಹಜವಾಗಿ ಚರ್ಮದ ಒಣಗುವಿಕೆ ಕಡಿಮೆಯಾಗುತ್ತದೆ. ಮನೆಯಲ್ಲಿ ತಯಾರಿಸಿದ ತುಪ್ಪ, ಗಾಣದಿಂದ ತೆಗೆದ ಎಳ್ಳೆಣ್ಣೆ, ಕೊಬ್ಬರಿ ಎಣ್ಣೆಯಂತಹ ಎಣ್ಣೆಗಳು, ಒಣ ಹಣ್ಣುಗಳು, ಬಾದಾಮಿ, ಶೇಂಗಾ, ಗೋಡಂಬಿಯಂತಹ ನಟ್​ಗಳು ಒಳ್ಳೆಯ  ಕೊಬ್ಬಿಗೆ ಉದಾಹರಣೆಗಳು. ಬೇರೆ ಕಾಲಗಳಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಚಳಿಗಾಲದಲ್ಲಿ ನಾವು ನೀರನ್ನು ಸೇವಿಸಬೇಕು. ಅಥವಾ ಬೂದುಗುಂಬಳದ ಜ್ಯೂಸ್, ಯಾವುದಾದರೂ ಸೊಪ್ಪಿನ ಅಥವಾ ಹಣ್ಣಿನ ಜ್ಯೂಸ್​ಗಳನ್ನು ಕೂಡ ಸೇವಿಸಬಹುದು. ಲಭ್ಯವಿದ್ದರೆ ತಾಜಾ ಗರಿಕೆ ಹುಲ್ಲನ್ನು ತಂದು ಸ್ವಲ್ಪ ನೀರು ಹಾಕಿ ರುಬ್ಬಿ ಸೋಸಿ ಸೇವಿಸುವುದು ಒಳ್ಳೆಯದು. ಇದರಿಂದ ಚರ್ಮದ ಸೌಂದರ್ಯ ವೃದ್ಧಿಯಾಗಲು ಸಹಾಯವಾಗುತ್ತದೆ.

ಆಯುರ್ವೆದದ ಪ್ರಕಾರ ಅಭ್ಯಂಗವನ್ನು ಅಂದರೆ ಎಣ್ಣೆಯ ಮಸಾಜ್ ಅನ್ನು ನಿತ್ಯವೂ ಮಾಡಿಕೊಳ್ಳಬೇಕು. ಇನ್ನು ಚಳಿಗಾಲದಲ್ಲಂತೂ ತಪ್ಪದೇ ಅಭ್ಯಂಗ ಮಾಡಲೇಬೇಕು. ಇದರಿಂದ ಮಾಂಸಖಂಡಗಳು, ಮೂಳೆ, ಸಂಧಿಗಳು ಮತ್ತು ಚರ್ಮದ ಆರೋಗ್ಯ ಶಾಶ್ವತವಾಗಿ ಹೆಚ್ಚಾಗುತ್ತದೆ. ಅಷ್ಟಾಂಗ ಹೃದಯ ಸಂಹಿತೆಯ ಪ್ರಕಾರ ಯಾರು ನಿತ್ಯವೂ ಎಣ್ಣೆಯ ಮಸಾಜ್ ಮಾಡಿಕೊಳ್ಳುತ್ತಾರೋ ಅಂಥವರಿಗೆ ಚರ್ಮ ಒಣಗುವುದು, ಸುಕ್ಕಾಗುವುದು ಮುಂತಾದ ತೊಂದರೆಗಳು ಆಗುವುದಿಲ್ಲ. ಯಷ್ಟಿಮಧು ತೈಲ, ಕ್ಷೀರಬಲ ತೈಲ, ಶುದ್ಧ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಗಳನ್ನು ಮಸಾಜ್​ಗೆ ಬಳಸಬಹುದು. ಮಸಾಜ್ ಆದ ನಂತರ ಸ್ವಲ್ಪ ಹೊತ್ತು ಎಳೆ ಬಿಸಿಲಿಗೆ ಮೈಯೊಡ್ಡಿದರೆ ದೇಹದ ಆರೋಗ್ಯಕ್ಕೆ ಹಾಗೂ ಚರ್ಮಕ್ಕೆ ತುಂಬಾ ಅನುಕೂಲವಾಗುತ್ತದೆ. ಸ್ನಾನಕ್ಕೆ ತೀಕ್ಷ್ಣವಾದ ಸಾಬೂನುಗಳನ್ನು ಬಳಸುವ ಬದಲು ಕಡಲೆ ಹಿಟ್ಟನ್ನು ಬಳಸಿದರೆ ತುಂಬಾ ಒಳ್ಳೆಯದು. ಇನ್ನು ಚಳಿಗಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡುವ ಮತ್ತು ಒಣ ಚರ್ಮಕ್ಕೆ ಅನುಕೂಲಕರವಾದ ಕೆಲವು ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ಒಣ ಚರ್ಮವಿದ್ದರೆ, ಹಸ್ತ-ಪಾದ ಗಳು ಬಿರುಕು ಬಿಡುತ್ತಿದ್ದರೆ ಮತ್ತು ದೇಹದ ಯಾವುದೇ ಭಾಗದಲ್ಲಿ ಉರಿ ಇದ್ದರೆ ಲೋಳೆಸರವನ್ನು ತೆಗೆದುಕೊಂಡು ಮಧ್ಯದಲ್ಲಿ ಕೊರೆದು ಅದನ್ನು ಚರ್ಮದ ಮೇಲೆ ಹದವಾಗಿ ಹಚ್ಚಿ ಮಸಾಜ್ ರೀತಿ ಮಾಡಿಕೊಳ್ಳಬಹುದು. ಲೋಳೆಸರ, ಶ್ರೀಗಂಧದ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಚರ್ಮದ ಮೇಲೆ ಹಚ್ಚಿಕೊಂಡರೆ ಒಣ ಚರ್ಮದವರಿಗೆ ತುಂಬಾ ಅನುಕೂಲವಾಗುತ್ತದೆ. ಜೊತೆಗೆ ಉರಿ, ತುರಿಕೆಗಳು ಕೂಡ ಕಡಿಮೆಯಾಗುತ್ತವೆ. ಐದಾರು ಬಾದಾಮಿಗಳನ್ನು ನೀರಿನಲ್ಲಿ ನೆನೆಸಿ ನಂತರ ಸಿಪ್ಪೆ ತೆಗೆದು ಅದನ್ನು ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಮೊಸರು ಮತ್ತು ಜೇನುತುಪ್ಪ ಹಾಕಿ ಕಲಸಿ ಇದನ್ನು ಕೂಡ ಚರ್ಮದ ಮೇಲೆ ಲೇಪ ಮಾಡಿಕೊಳ್ಳಬಹುದು. ಈ ಮಿಶ್ರಣವನ್ನು ಫೇಸ್ ಪ್ಯಾಕ್​ಗೆ ಕೂಡ ಬಳಸಬಹುದು. ಚಳಿಗಾಲದಲ್ಲಿ ನಿತ್ಯವೂ ಎರಡರಿಂದ ಮೂರು ಚಮಚ ಶುದ್ಧ ಎಳ್ಳೆಣ್ಣೆಯನ್ನು ಸೇವಿಸುವುದು ಒಳ್ಳೆಯದು. ಒಂದು ಅಥವಾ ಎರಡು ಮಾತ್ರೆ ಒಮೆಗಾ ತ್ರಿಯನ್ನು ಸೇವಿಸಿದರೂ ಆರೋಗ್ಯಕ್ಕೆ ಅನುಕೂಲವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net