50 ದಿನ 370 ಕೋಟಿ; ದೇಶಾದ್ಯಂತ ಕಾಂತಾರದ ಕಂಪು

Kantara
Published on

ಬೆಂಗಳೂರು: ರಿಷಭ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿರುವ ‘ಕಾಂತಾರ’ ಚಿತ್ರ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ 50 ದಿನ ಪೂರೈಸಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಥಿಯೇಟರ್​ಗಳಲ್ಲಿ 50 ದಿನ ಪೂರೈಸಿದ ಚಿತ್ರ ಬಲು ಅಪರೂಪ. ಕರ್ನಾಟಕ ಮಾತ್ರವಲ್ಲ ಹೊರದೇಶದ ಹಲವೆಡೆ ಕನ್ನಡ ಚಿತ್ರವೊಂದು 50 ದಿನಗಳನ್ನು ಪೂರೈಸಿರುವುದು ದಾಖಲೆ ಎನ್ನಲಾಗಿದೆ.

ಸೆ. 30ರಂದು ಕನ್ನಡದಲ್ಲಿ ಮೊದಲು ಬಿಡುಗಡೆಯಾದ ‘ಕಾಂತಾರ’ ನಂತರದ ದಿನಗಳಲ್ಲಿ ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲು ರಿಲೀಸ್ ಆಗಿತ್ತು. ಕರ್ನಾಟಕದಲ್ಲೇ ಬರೋಬ್ಬರಿ 160 ಕೋಟಿ ರೂ. ಗಳಿಕೆ ಮಾಡಿಕೊಂಡಿರುವ ‘ಕಾಂತಾರ’, ಹೊರದೇಶಗಳು ಹಾಗೂ ಪರಭಾಷೆಗಳಿಂದ 200 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದೆ. ಆ ಮೂಲಕ ಇದುವರೆಗಿನ ‘ಕಾಂತಾರ’ ಚಿತ್ರದ ಒಟ್ಟು ಗಳಿಕೆ 370 ಕೋಟಿ ರೂ. ದಾಟಿದೆ. ಈ ತಿಂಗಳಂತ್ಯಕ್ಕೆ ಪರಭಾಷೆಗಳಲ್ಲು 50 ದಿನ ಪೂರೈಸಲಿದೆ ಚಿತ್ರ. ‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಚಿತ್ರಗಳ ಬಳಿಕ ಹೊಂಬಾಳೆ ಫಿಲಂಸ್ ಸಂಸ್ಥೆ ‘ಕಾಂತಾರ’ ಚಿತ್ರದ ಮೂಲಕ ಮತ್ತೆ ದೇಶ, ವಿದೇಶಗಳಿಂದ ಎಲ್ಲರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದೆ.

ಮುಂದಿದೆ ಸಿನಿಮಾಗಳ ಹಬ್ಬ: ಸದ್ಯ ಹೊಂಬಾಳೆ ಫಿಲಂಸ್ ನಿರ್ವಣದ ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಗೆ ಸಜ್ಜಾಗಿದೆ. ಜತೆಗೆ ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರೀಕರಣ ನಡೆಯುತ್ತಿದೆ. ಹಾಗೇ ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ ‘ರಿಚರ್ಡ್ ಆಂಟನಿ’ ಮತ್ತು ಯುವರಾಜಕುಮಾರ್, ಸಂತೋಷ್ ಆನಂದರಾಮ್ ಕಾಂಬಿನೇಷನ್​ನ ಹೊಸ ಚಿತ್ರಗಳು ಸದ್ಯದಲ್ಲೇ ಸೆಟ್ಟೇರಲಿವೆ.

ಪಂಚ ಭಾಷೆಗಳಲ್ಲು ಹೊಂಬಾಳೆ ಚಿತ್ರಗಳು: ತೆಲುಗಿನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಾಯಕನಾಗಿರುವ ‘ಸಲಾರ್’ ಚಿತ್ರೀಕರಣ ಭರದಿಂದ ಸಾಗಿದ್ದು, 2023ರ ಸೆಪ್ಟೆಂಬರ್ 23ರಂದು ಸಿನಿಮಾ ಬಿಡುಗಡೆಯಾಗಲಿದೆ. ಹೊಂಬಾಳೆ ಫಿಲಂಸ್ ತಮಿಳಿನಲ್ಲು ಎರಡು ಚಿತ್ರಗಳನ್ನು ನಿರ್ವಿುಸುತ್ತಿದೆ. ‘ಸೂರರೈ ಪುಟ್ರು’ ನಿರ್ದೇಶಕಿ ಸುಧಾ ಕೊಂಗರಾ ಒಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಕೆಲವೇ ದಿನಗಳಲ್ಲಿ ಇನ್ನೊಂದು ಚಿತ್ರದ ಘೋಷಣೆ ಆಗಲಿದೆ. ಮಲಯಾಳಂನಲ್ಲು ಎರಡು ಚಿತ್ರಗಳನ್ನು ನಿರ್ವಿುಸುತ್ತಿದ್ದು, ಅದರಲ್ಲಿ ಪವನ್ ಕುಮಾರ್ ನಿರ್ದೇಶನದ, ಫಹಾದ್ ಫಾಸಿಲ್ ನಾಯಕನಾಗಿರುವ ‘ಧೂಮಂ’ ಚಿತ್ರ ಇತ್ತೀಚೆಗಷ್ಟೆ ಮುಹೂರ್ತ ಆಚರಿಸಿಕೊಂಡಿದೆ. ಜತೆಗೆ ಪೃಥ್ವಿರಾಜ್ ಸುಕುಮಾರನ್ ನಟಿಸಿ, ನಿರ್ದೇಶಿಸಲಿರುವ ‘ಟೈಸನ್’ ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ. ಹಿಂದಿ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net