ರಾಷ್ಟ್ರೀಯತೆಯನ್ನು ಯಾರಿಗೂ ಜಿಪಿಎ ಕೊಟ್ಟಿಲ್ಲ: ಸಚಿವ ಡಾ. ಎಂ. ಸಿ. ಸುಧಾಕರ್

Laptop Distribution
Published on

ಬೆಂಗಳೂರು: ರಾಷ್ಟ್ರೀಯತೆಯನ್ನು ಯಾರಿಗೂ ಜಿಪಿಎ ಕೊಟ್ಟಿಲ್ಲ, ರಾಷ್ಟ್ರೀಯತೆಯ ಬಗ್ಗೆ ನಾವು ಬೇರೆಯವರಿಂದ ಕಲಿಯುವ ಅಗತ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಬುಧವಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮತ್ತು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದ ಟೆಲಿವಿಷನ್ ಸ್ಟುಡಿಯೋ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯತೆಯನ್ನು ನಾವು ಈ ಹಿಂದಿನಿಂದಲೂ ಅಳವಡಿಸಿಕೊಂಡು, ಪಾಲಿಸಿಕೊಂಡು ಬಂದಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನಕ್ಕೆ ನಮ್ಮ ಬದ್ಧತೆ ಇರಬೇಕು. ನಾವು ಸಂವಿಧಾನವನ್ನು ಗೌರವಿಸಬೇಕು ಎಂದು ಅವರು ಹೇಳಿದರು.

ಸುಮಾರು 20 ವರ್ಷಗಳ ಹಿಂದೆ ಡೈರಿ ಹಿಡಿದುಕೊಂಡು ಜನ ಓಡಾಟ ನಡೆಸುತ್ತಿದ್ದರು. ಆದರೆ ಈಗ ಲ್ಯಾಪ್‌ಟಾಪ್ ಅನಿವಾರ್ಯವಾಗಿದೆ. ಇದನ್ನು ಮನಗಂಡು ಸರ್ಕಾರ ಆ್ಯಪಲ್ ಕಂಪೆನಿಯ ಲ್ಯಾಪ್‌ಟಾಪ್ ಅನ್ನು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ. ಜಯಕರ ಎಸ್. ಎಂ., ಕುಲಸಚಿವ ಶೇಕ್ ಲತೀಫ್, ಮೌಲ್ಯಮಾಪನ ಕುಲಸಚಿವ ಡಾ. ಸಿ. ಶ್ರೀನಿವಾಸ್, ವಿತ್ತಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

171 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್

ವಿಶ್ವವಿದ್ಯಾಲಯದ 171 ವಿದ್ಯಾರ್ಥಿಗಳಿಗೆ ಸಚಿವರು ಲ್ಯಾಪ್‌ಟಾಪ್ ವಿತರಿಸಿದರು. ಇದಕ್ಕೆ 1.39 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ವಿವಿ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net