ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪರಶುರಾಮ ಅವತಾರದಲ್ಲಿ ರಾಹುಲ್ ಗಾಂಧಿಗೆ ಹಾಲಿನ ಅಭಿಷೇಕ: ಬಿಜೆಪಿ ಟೀಕೆ | Rahul Gandhi

ವಿಪಕ್ಷ ನಾಯಕ ರಾಹುಲ್ ಗಾಂಧಿಯ ಹುಟ್ಟುಹಬ್ಬ ಆಚರಣೆ ಮಾಡಿರುವುದು.
ವಿಪಕ್ಷ ನಾಯಕ ರಾಹುಲ್ ಗಾಂಧಿಯ ಹುಟ್ಟುಹಬ್ಬ ಆಚರಣೆ ಮಾಡಿರುವುದು.
Published on
ವಾರಣಾಸಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಶುಕ್ರವಾರ 56ನೇ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಧಾನಿ ಮೋದಿ ಸೇರಿ ದೇಶಾದ್ಯಂತ ನಾಯಕರು, ಕಾರ್ಯಕರ್ತರು ಶುಭಾಶಯ ಕೋರುತ್ತಿದ್ದಾರೆ. ಇದೇ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ವಾರಾಣಸಿಯ ಕಾಶಿಯ ಗಂಗಾನದಿಯಲ್ಲಿ ಪರಶುರಾಮನ ಅವತಾರದಲ್ಲಿ ರಾಹುಲ್ ಅವರಿಗೆ ಹಾಲಿನ ಅಭಿಷೇಕ ಮಾಡಿದ್ದು, ಚರ್ಚೆಗೀಡಾಗಿದೆ.
ರಾಹುಲ್ ಗಾಂಧಿ ಅವರನ್ನು ಪರಶುರಾಮ ಎಂದು ಚಿತ್ರಿಸುವ ಪೋಸ್ಟರ್ ಹಿಡಿದು ಗಂಗಾ ನದಿಯ ದಡದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ. ಪೋಸ್ಟರ್‌ನಲ್ಲಿ ರಾಹುಲ್ ಅವರ ಒಂದು ಕೈಯಲ್ಲಿ ಖಡ್ಗ ಮತ್ತು ಮತ್ತೊಂದು ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದಿರುವುದ ಕಾಣುತ್ತದೆ.
ಕಾರ್ಯಕರ್ತರು ಆ ಪೋಸ್ಟರ್ ಮೇಲೆ ಹಾಲು ಸುರಿದು, ವೇದ ಮಂತ್ರಗಳೊಂದಿಗೆ ರುದ್ರಾಭಿಷೇಕ ಮಾಡಿದ್ದಾರೆ. 11 ಕೆಜಿ ತೂಕದ ಲಡ್ಡು ಕೇಕ್ ಕತ್ತರಿಸಿ ರಾಹುಲ್ ಗಾಂಧಿಯವರ ದೀರ್ಘ, ಆರೋಗ್ಯಕರ ಮತ್ತು ಯಶಸ್ವಿ ಜೀವನಕ್ಕಾಗಿ ಪ್ರಾರ್ಥಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಯನ್ನು ಹುಟ್ಟು ಹಾಕಿದೆ.

ಬಿಜೆಪಿಯಿಂದ ಟೀಕೆ

ಪರಶುರಾಮನ ಅವತಾರದಲ್ಲಿ ರಾಹುಲ್ ಪೋಸ್ಟರ್​ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕನನ್ನು ಚಿತ್ರಿಸಿದ ಈ ಚಿತ್ರಣವನ್ನು ಹಿಂದೂ ನಂಬಿಕೆ ಮತ್ತು ಕೋಟ್ಯಂತರ ಭಕ್ತರಿಗೆ ಮಾಡಿದ ಅವಮಾನ ಎಂದು ಖಂಡಿಸಿದೆ.
ಈ ಕುರಿತು ಎಕ್ಸ್​ನಲ್ಲಿ ವಿಡಿಯೋ ಮೂಲಕ ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ, ರಾಹುಲ್ ಗಾಂಧಿಯನ್ನು ಪರಶುರಾಮ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಿಂಬಿಸುವುದು ಹಿಂದೂ ನಂಬಿಕೆ ಮತ್ತು ಕೋಟ್ಯಂತರ ಭಕ್ತರಿಗೆ ಅವಮಾನಕರ ಮತ್ತು ಆಕ್ರಮಣಕಾರಿ. ದೇವತೆಗಳು ಪವಿತ್ರರು ಮತ್ತು ಅವುಗಳನ್ನು ರಾಜಕೀಯ ವೈಭವೀಕರಣ ಅಥವಾ ವ್ಯಕ್ತಿತ್ವ ಆರಾಧನೆಗೆ ಎಂದಿಗೂ ಬಳಸಬಾರದು ಎಂದಿದ್ದಾರೆ.
ಹಿಂದೂ ಭಯೋತ್ಪಾದನೆಯ ನಂತರ, ಸನಾತನ ಸಂಸ್ಥೆಯನ್ನು ಅಪಹಾಸ್ಯ ಮಾಡಿ, ಪ್ರಭುರಾಮನ ಅಸ್ತಿತ್ವವನ್ನು ಪ್ರಶ್ನಿಸುವುದು ಈಗ ಹೀಗಿದೆ! ಎಂತಹ ನಾಚಿಕೆಗೇಡಿನ ಸಂಗತಿ. ಇದು ಒಂದು ರೂಢಿಯಾಗಿಬಿಟ್ಟಿದೆ!! ರಾಹುಲ್ ಗಾಂಧಿ ಕ್ಷಮೆಯಾಚಿಸುತ್ತಾರೆಯೇ? ಅವರು ಭಗವಾನ್ ಅಲ್ಲವೇ? ಅವರು ಕೋಟ್ಯಂತರ ಹಿಂದೂಗಳಿಗಿಂತ ಮೇಲಿರುವವರೇ ಎಂದು ಪ್ರಶ್ನಿಸಿದ್ದಾರೆ.

ಸಮರ್ಥಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು

ಗಂಗಾ ನದಿಯ ಪೂಜೆಯನ್ನು ಆಯೋಜಿಸಿದ್ದ ವಾರಣಾಸಿ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ್ ಸಿಂಗ್ ಸಮರ್ಥಿಸಿಕೊಂಡಿದ್ದು, ಇವು ನಮ್ಮ ನಾಯಕನ ಬಗೆಗಿನ ನಮ್ಮ ಭಾವನೆಗಳು. ಭಗವಾನ್ ಪರಶುರಾಮರು ಭೂಮಿಯಿಂದ ದುಷ್ಟಶಕ್ತಿಗಳನ್ನು ತೊಡೆದುಹಾಕಿದ ರೀತಿಯಲ್ಲಿ, ರಾಹುಲ್ ಗಾಂಧಿ ಕೂಡ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅದೇ ರೀತಿ ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ, ಈ ಕಾರ್ಯಕ್ರಮವನ್ನು ಆಯೋಜಿಸಿದವರು ಸ್ವತಃ ಬ್ರಾಹ್ಮಣರು. ಮತ್ತು ಭಗವಾನ್ ಪರಶುರಾಮನ ವಂಶದಿಂದ ಬಂದವರು. ಅವರು ತಮ್ಮ ಭಾವನೆಗಳನ್ನು ಪ್ರದರ್ಶಿಸಿದರು ಅಷ್ಟೇ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net