

ನವದೆಹಲಿ: ರಾಷ್ಟ್ರ ರಾಜಧಾನಿ ರಾಮಲೀಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ ವಿಪಕ್ಷಗಳ 'ಇಂಡಿಯಾ' ಕೂಟದ ಬೃಹತ್ ಪ್ರತಿಭಟನಾ ರ‍್ಯಾಲಿಗೆ ( Rahul Gandhi Rally ) ಗೈರುಹಾಜರಾಗಿದ್ದಾರೆ ಎಂಬ ಕಾರಣಕ್ಕೆ ಯುವ ಕಾಂಗ್ರೆಸ್ ಸುಮಾರು 200ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಮೂಲಕ ಕಠಿಣ ಶಿಸ್ತುಕ್ರಮ ಕೈಗೊಂಡಿದೆ. ದೇಶದ ಏಳು ರಾಜ್ಯಗಳಿಂದ ಕನಿಷ್ಠ 185 ಸದಸ್ಯರನ್ನು ಈಗಾಗಲೇ ಹುದ್ದೆಯಿಂದ ತೆಗೆದುಹಾಕಿ, ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ನಾಯಕತ್ವದ ಈ ಆಂತರಿಕ ಪರಿಶೀಲನೆಯಲ್ಲಿ ಅಮಾನತುಗೊಂಡ ಸದಸ್ಯರ ಸಂಖ್ಯೆ ಮುಂಬರುವ ದಿನಗಳಲ್ಲಿ 500ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ವರ್ಷಾನುಗಟ್ಟಲೆ ಪಕ್ಷಕ್ಕಾಗಿ ರಕ್ತ, ಬೆವರು ಹರಿಸಿ ಹಾಗೂ ಹೋರಾಟ ಮಾಡಿ ಜೈಲಿಗೆ ಹೋದ ಯುವ ನಾಯಕರನ್ನು ಕೇವಲ ಒಂದು ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ತೆಗೆದುಹಾಕಿರುವುದು ಯುವ ಕಾಂಗ್ರೆಸ್‌ನಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನಾವು ಪಕ್ಷಕ್ಕಾಗಿ ಎಫ್‌ಐಆರ್ ದಾಖಲಿಸಿಕೊಂಡೆವು, ಜೈಲಿಗೆ ಹೋದೆವು. ಕೇವಲ ಒಂದು ಇವೆಂಟ್ ತಪ್ಪಿಸಿಕೊಂಡಿದ್ದಕ್ಕಾಗಿ ನಮ್ಮನ್ನು ಈ ರೀತಿ ವಜಾಗೊಳಿಸುವುದು ಎಷ್ಟು ಸರಿ?" ಎಂದು ಅಮಾನತುಗೊಂಡ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಹಿತ್ ರಾಜೋರಿಯಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ರೋಹಿತ್ ರಾಜೋರಿಯಾ ಅವರು ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಯುವ ಘಟಕದಲ್ಲಿ ಸಕ್ರಿಯವಾಗಿ ದುಡಿದಿದ್ದು, ವಿವಿಧ ಪ್ರತಿಭಟನೆಗಳಲ್ಲಿ ಭಾಗವಹಿಸಿ 15ಕ್ಕೂ ಹೆಚ್ಚು ಎಫ್‌ಐಆರ್ ಎದುರಿಸಿದ್ದಾರೆ ಹಾಗೂ ಮೂರ್ನಾಲ್ಕು ಬಾರಿ ಜೈಲುವಾಸ ಅನುಭವಿಸಿದ್ದಾರೆ. ನವೆಂಬರ್ 1 ರಂದು ನವದೆಹಲಿಯಲ್ಲಿ ನಡೆದ ರಾಹುಲ್ ಗಾಂಧಿ ಅವರ ರ‍್ಯಾಲಿಗೂ ಮುನ್ನವೇ ತಮ್ಮ ಚಿಕ್ಕಪ್ಪ ತೀರಿಕೊಂಡಿದ್ದರಿಂದ 13ನೇ ದಿನದ ಕಾರ್ಯಕ್ರಮ ಇರುವ ಕಾರಣ ತಾವು ಬರಲು ಸಾಧ್ಯವಿಲ್ಲ ಎಂದು ಪಕ್ಷದ ನಾಯಕತ್ವಕ್ಕೆ ಮುಂಚಿತವಾಗಿ ಮಾಹಿತಿ ನೀಡಿದ್ದರು. ಆದರೂ, ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಏಕಾಏಕಿ ವಜಾ ಮಾಡಿರುವುದು ಪಕ್ಷದ ಶಿಸ್ತಿನ ಹೆಸರಿನಲ್ಲಿ ನಡೆಯುತ್ತಿರುವ ಸರ್ವಾಧಿಕಾರಿ ಧೋರಣೆ ಎಂದು ಅವರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಯುವ ಘಟಕವು ಅತ್ಯಂತ ಹೆಚ್ಚು ಅಮಾನತು ಕ್ರಮವನ್ನು ಮಧ್ಯಪ್ರದೇಶದಲ್ಲಿ ಕೈಗೊಂಡಿದ್ದು, ಅಲ್ಲಿನ 60 ನಾಯಕರನ್ನು ಅಮಾನತುಗೊಳಿಸಲಾಗಿದೆ. ಉಳಿದಂತೆ ಗುಜರಾತ್‌ನಲ್ಲಿ 49, ಪಶ್ಚಿಮ ಬಂಗಾಳದಲ್ಲಿ 26, ತೆಲಂಗಾಣದಲ್ಲಿ 14, ಉತ್ತರ ಪ್ರದೇಶದಲ್ಲಿ 13, ಹಿಮಾಚಲ ಪ್ರದೇಶದಲ್ಲಿ 13 ಹಾಗೂ ಹರಿಯಾಣದಲ್ಲಿ 10 ಪದಾಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಾರ್ಯಕ್ರಮಕ್ಕೆ ಬಾರದ ಸದಸ್ಯರ ವಿರುದ್ಧ ಯಾವುದೇ ವಿನಾಯಿತಿ ಇಲ್ಲದೆ ಈ ರೀತಿಯ ಕ್ರಮ ಜರುಗಿಸಿರುವುದು ನಾಯಕರ ನಿಷ್ಠೆಗೆ ನೀಡಿದ ಬೆಲೆಯೇ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ನವೆಂಬರ್ 1ರ ರ‍್ಯಾಲಿಗೂ ಮುನ್ನ ಯೂತ್ ಕಾಂಗ್ರೆಸ್ ತನ್ನ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರತಿಯೊಬ್ಬ ಪದಾಧಿಕಾರಿಗೂ ರ‍್ಯಾಲಿ ಹಾಗೂ ಪಾದಯಾತ್ರೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಫರ್ಮಾನು ಹೊರಡಿಸಿತ್ತು. ಗೈರುಹಾಜರಿಯನ್ನು ಪತ್ತೆಹಚ್ಚಲು ಮಿಂಟೋ ರಸ್ತೆ ಬಳಿ ಬಾರ್‌ಕೋಡ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿತ್ತು ಹಾಗೂ 'ವಿತ್ ಐವೈಸಿ' (With IYC) ಎಂಬ ಆ್ಯಪ್ ಮೂಲಕ ಡಿಜಿಟಲ್ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.
ಸುಮಾರು 15,000 ಯುವ ಕಾರ್ಯಕರ್ತರು ನವದೆಹಲಿಯಲ್ಲಿ ಸೇರಿದ್ದಾರೆ ಎಂದು ಯೂತ್ ಕಾಂಗ್ರೆಸ್ ಹೇಳಿಕೊಂಡಿತ್ತಾದರೂ, ಡಿಜಿಟಲ್ ಆ್ಯಪ್‌ನಲ್ಲಿ ಕೇವಲ 2,831 ಜನರು ಮಾತ್ರ ಹಾಜರಾತಿ ದಾಖಲಿಸಿದ್ದರು. ನೆಟ್‌ವರ್ಕ್ ಸಮಸ್ಯೆ ಮತ್ತು ತಾಂತ್ರಿಕ ಅರಿವಿನ ಕೊರತೆಯಿಂದ ಡಿಜಿಟಲ್ ಹಾಜರಾತಿ ಕಡಿಮೆಯಾಗಿದೆ ಎಂದು ಹೇಳಲಾಗಿದ್ದರೂ, ನೂರಾರು ನಾಯಕರು ಮುನ್ಸೂಚನೆ ನೀಡದೆ ಸಂಪೂರ್ಣವಾಗಿ ಗೈರಾಗಿದ್ದರು ಎಂಬುದು ಆಂತರಿಕ ತನಿಖೆಯಿಂದ ತಿಳಿದುಬಂದಿದೆ.
ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್, "ನಮ್ಮ ರ‍್ಯಾಲಿ ಬೃಹತ್ ಮಟ್ಟದಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಸ್ಪಷ್ಟ ಸೂಚನೆಗಳ ಹೊರತಾಗಿಯೂ ಕೆಲವು ಪದಾಧಿಕಾರಿಗಳು ಶಿಸ್ತು ಪಾಲಿಸಲಿಲ್ಲ. ಸಂಘಟನೆಯಲ್ಲಿ ಹೊಣೆಗಾರಿಕೆ ಮತ್ತು ಶಿಸ್ತು ತರಲು ಈ ಕ್ರಮ ಅನಿವಾರ್ಯವಾಗಿತ್ತು" ಎಂದು ಹೇಳಿದ್ದಾರೆ. ನಿಷ್ಕ್ರಿಯರಾಗಿರುವವರನ್ನು ತೆಗೆದುಹಾಕಿ, ಪಕ್ಷಕ್ಕಾಗಿ ದುಡಿಯುವ ಸಕ್ರಿಯ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಮತ್ತೊಂದೆಡೆ, ಯೂತ್ ಕಾಂಗ್ರೆಸ್‌ನ ಈ ಕಠಿಣ ನಡವಳಿಕೆ ಹಾಗೂ ರಾಹುಲ್ ಗಾಂಧಿ ರ‍್ಯಾಲಿಯ ಜನಸಂದಣಿಯ ಕುರಿತು ಆಡಳಿತಾರೂಢ ಬಿಜೆಪಿ ತೀವ್ರ ವ್ಯಂಗ್ಯವಾಡಿದೆ. "ರಾಮಲೀಲಾ ಮೈದಾನದಲ್ಲಿ ಶೇ. 40 ರಷ್ಟು ಜಾಗ ಖಾಲಿಯಿತ್ತು. 10 ಲಕ್ಷ ಜನರು ಬರುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದರು. ಆದರೆ ಅಲ್ಲಿ ಹಾಕಲಾಗಿದ್ದ 28,000 ಖುರ್ಚಿಗಳಲ್ಲಿ 5,000 ಕ್ಕೂ ಹೆಚ್ಚು ಖುರ್ಚಿಗಳು ಖಾಲಿಯಾಗಿದ್ದವು," ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ ಲೇವಡಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಮತ್ತು ಫಾರೂಕ್ ಅಬ್ದುಲ್ಲಾ ಸೇರಿದಂತೆ 'ಇಂಡಿಯಾ' ಕೂಟದ ಪ್ರಮುಖ ನಾಯಕರು ಭಾಗವಹಿಸಿದ್ದ ಈ ಬೃಹತ್ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ವಿದ್ಯುನ್ಮಾನ ಮತಯಂತ್ರಗಳು (EVM) ಮತ್ತು ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಈ ರ‍್ಯಾಲಿಯ ಬೆನ್ನಲ್ಲೇ ಸ್ವಪಕ್ಷದ ನಾಯಕರ ಮೇಲೆಯೇ ಕಠಿಣ ಕ್ರಮ ಜರುಗಿಸಿರುವುದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ದೊಡ್ಡ ಮಟ್ಟದ ಬಂಡಾಯದ ಬೇಗುದಿಯನ್ನು ಸೃಷ್ಟಿಸಿದೆ, (ಏಜೆನ್ಸೀಸ್).