ಬೀದಿಯಲ್ಲಲ್ಲ, ಸಂಸತ್ತಿನಲ್ಲೇ ಚರ್ಚಿಸೋಣ ಧೈರ್ಯ ಇದ್ರೆ ಬನ್ನಿ! ರಾಹುಲ್ ಗಾಂಧಿಗೆ ಅಮಿತ್ ಷಾ ನೇರ ಸವಾಲು! | Amit Shah

 ರಾಹುಲ್ ಗಾಂಧಿಗೆ ಅಮಿತ್ ಷಾ ನೇರ ಸವಾಲು!
ರಾಹುಲ್ ಗಾಂಧಿಗೆ ಅಮಿತ್ ಷಾ ನೇರ ಸವಾಲು!
Published on: 

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಮ್ಮ ಜೊತೆ ಬಹಿರಂಗ ಚರ್ಚೆ ನಡೆಸುವಂತೆ ಆಹ್ವಾನ ನೀಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಖಡಕ್ ತಿರುಗೇಟು ನೀಡಿದ್ದಾರೆ.

ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾ, ರಾಹುಲ್ ಗಾಂಧಿಗೆ ನೇರ ಸವಾಲು ಎಸೆದಿದ್ದಾರೆ. ನಿಮಗೆ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸುವ ನಿಜವಾದ ಆಸಕ್ತಿ ಇದ್ದರೆ, ಬೀದಿಗಳಲ್ಲಿ ಜನರನ್ನು ಸೇರಿಸಿ ಅರಾಜಕತೆ ಸೃಷ್ಟಿಸುವ ಬದಲು ಸಂಸತ್ತಿಗೆ ಬನ್ನಿ. ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆಯಿರಿ; ಎಸ್​ಐಆರ್​ ವಿಷಯವಾಗಿ ಚರ್ಚಿಸಲು ನಾವು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸಿದ್ಧರಿದ್ದೇವೆ. ಧೈರ್ಯವಿದ್ದರೆ ಸಂಸತ್ತಿನಲ್ಲಿಯೇ ಚರ್ಚೆ ನಡೆಸಿ ಎಂದು ಸವಾಲು ಹಾಕಿದ್ದಾರೆ.

ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ಪಕ್ಷದ ನಡೆಗೆ ಷಾ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಮೂರು ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ತನ್ನ ಸೋಲಿಗೆ ಬೇರೆಯವರನ್ನು ಹೊಣೆ ಮಾಡುತ್ತಿದೆ ಎಂದು ಟೀಕಿಸಿದರು.

Also Read
2014ರ ನಂತರ ಭಾರತದ ಚಿತ್ರಣವೇ ಬದಲು: ಮೆಟ್ರೋ ಜಾಲದ ಶರವೇಗದ ವಿಸ್ತರಣೆಗೆ ಪ್ರಧಾನಿ ಮೋದಿ ಸಂತಸ! PM Modi
 ರಾಹುಲ್ ಗಾಂಧಿಗೆ ಅಮಿತ್ ಷಾ ನೇರ ಸವಾಲು!

2014ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಐಆರ್ ಇತ್ತಾ..? ಆಗಲೂ ನೀವು ಸಂಪೂರ್ಣವಾಗಿ ಧೂಳಿಪಟವಾಗಿದ್ದಿರಿ. 2019ರಲ್ಲಿ ಎಸ್‌ಐಆರ್ ಇರಲಿಲ್ಲ, ಆಗಲೂ ನೀವು ಸೋತಿದ್ದಿರಿ. 2024ರ ಚುನಾವಣೆಯಲ್ಲೂ ಯಾವುದೇ ಎಸ್‌ಐಆರ್ ಇರಲಿಲ್ಲ, ಆದರೂ ನೀವು ಸೋಲುಂಡಿದ್ದೀರಿ. ಹರಿಯಾಣ ಅಥವಾ ಮಹಾರಾಷ್ಟ್ರ ರಾಜ್ಯಗಳ ಚುನಾವಣೆಯಲ್ಲೂ ಎಸ್‌ಐಆರ್ ಇರಲಿಲ್ಲ, ಆದರೂ ನೀವು ಪ್ರತಿಯೊಂದರಲ್ಲೂ ಸೋತಿದ್ದೀರಿ ಎಂದು ಷಾ ಲೇವಡಿ ಮಾಡಿದರು.

ಅರಾಜಕತೆಯ ಆರೋಪ

ಸಂಸತ್ತಿನ ಕಾರ್ಯಕಲಾಪಗಳಿಗೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಶೈಲಿಯನ್ನು ಗೃಹ ಸಚಿವರು ಖಂಡಿಸಿದ್ದು, ನೀವು ಸಂಸತ್ತು ಸುಗಮವಾಗಿ ನಡೆಯಲು ಬಿಡುವುದಿಲ್ಲ. ಬದಲಿಗೆ ಬೀದಿಗಳಲ್ಲಿ ಜನರನ್ನು ಸೇರಿಸಿ ಅರಾಜಕತೆ ಮತ್ತು ಗೊಂದಲವನ್ನು ಸೃಷ್ಟಿಸುತ್ತಿದ್ದೀರಿ. ಸಂಸತ್ತಿನಲ್ಲಿ ಕೇವಲ ಗದ್ದಲ ಎಬ್ಬಿಸುವುದು ಮತ್ತು ಕಲಾಪಗಳನ್ನು ಬಹಿಷ್ಕರಿಸುವುದೇ ನಿಮ್ಮ ಕೆಲಸವಾಗಿದೆ. ಬೀದಿಗಳಲ್ಲಿ ಜನರನ್ನು ಸೇರಿಸಿ ಗದ್ದಲ ಮಾಡುವುದನ್ನೇ ಮುಂದುವರಿಸಿದರೆ, ಬಿಜೆಪಿ ಕಾರ್ಯಕರ್ತರು ನಿಮಗ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ದೇಶದ ಜನತೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ತಿರಸ್ಕರಿಸಿದ್ದಾರೆ ಎಂದಿರುವ ಷಾ, ದೇಶದ ಜನರು ನಿಮ್ಮೊಂದಿಗಾಗಲಿ ಅಥವಾ ನಿಮ್ಮ ವಿರೋಧ ಪಕ್ಷಗಳ ಮೈತ್ರಿಕೂಟದೊಂದಿಗಾಗಲಿ ಇಲ್ಲ. ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಗಾಗಿ ನೀವು ಇಡೀ ದೇಶದಿಂದ 10 ಲಕ್ಷ ಜನರನ್ನು ಆಹ್ವಾನಿಸಿದ್ದೀರಿ. ಆದರೆ, 70,000 ಜನರ ಸಾಮರ್ಥ್ಯವಿರುವ ಮೈದಾನವೂ ಕೂಡ ಅರ್ಧದಷ್ಟು ಖಾಲಿಯಿತ್ತು ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಗಳ ಕುರಿತಾಗಿಯೂ ಅಮಿತ್ ಷಾ ಪ್ರಶ್ನೆ ಎತ್ತಿದರು. ನೀವು ಪ್ರಸ್ತುತ ದೇಶದ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿದ್ದೀರಿ. ಆದ್ದರಿಂದ ನಿಮ್ಮ ವಿದೇಶಿ ಪ್ರವಾಸಗಳ ವಿವರಗಳನ್ನು ತಿಳಿದುಕೊಳ್ಳುವ ಹಕ್ಕು ಜನರಿಗಿದೆ ಎನ್ನುತ್ತಾ, ವಿದೇಶಿ ಪ್ರವಾಸಗಳ ಸಮಗ್ರ ವಿವರಗಳನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರು(ಏಜೆನ್ಸೀಸ್).