ನಿನೊಬ್ಬ ವಿದೇಶಿ ಪ್ರಜೆ: ನಿನಗೆ ಪ್ರತಿಭಟನೆ ಮಾಡಲು ಹಕ್ಕೇ ಇಲ್ಲ! ಇಮ್ರಾನ್ ಖಾನ್‌ ಬೆಂಡೆತ್ತಿದ ಬಾಂಬೆ ಹೈಕೋರ್ಟ್; ಕ್ಷಮೆ ಕೇಳಿದ ಬಾಲಿವುಡ್​ ನಟ|Imran Khan

ಅಮೆರಿಕನ್ ಪ್ರಜೆಯಾಗಿ ಭಾರತದಲ್ಲಿ ಪ್ರತಿಭಟಿಸುವ ಹಕ್ಕಿಲ್ಲ ಎಂದ ಬಾಂಬೆ ಹೈಕೋರ್ಟ್; ಮುಚ್ಚಳಿಕೆ ಬರೆದುಕೊಟ್ಟು ಬೇಷರತ್ ಕ್ಷಮೆ ಕೋರಿದ ನಟ ಇಮ್ರಾನ್ ಖಾನ್.
ಅಮೆರಿಕನ್ ಪ್ರಜೆಯಾಗಿ ಭಾರತದಲ್ಲಿ ಪ್ರತಿಭಟಿಸುವ ಹಕ್ಕಿಲ್ಲ ಎಂದ ಬಾಂಬೆ ಹೈಕೋರ್ಟ್; ಮುಚ್ಚಳಿಕೆ ಬರೆದುಕೊಟ್ಟು ಬೇಷರತ್ ಕ್ಷಮೆ ಕೋರಿದ ನಟ ಇಮ್ರಾನ್ ಖಾನ್.Bombay High Court states that as an American citizen, he has no right to protest in India; actor Imran Khan submits a written undertaking and tenders an unconditional apology.
Published on: 

ಮುಂಬೈ: ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆಯಲ್ಲಿ ಧುಮುಕಿ ಈಗ ಬಾಲಿವುಡ್ ನಟ ಇಮ್ರಾನ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರೋಧಿಸಿ ನಡೆದ ಧರಣಿಯಲ್ಲಿ ಭಾಗಿಯಾಗಿದ್ದ ನಟ, ಈಗ ಬಾಂಬೆ ಹೈಕೋರ್ಟ್ ಮುಂದೆ ತಲೆತಗ್ಗಿಸಿ ಬೇಷರತ್ ಕ್ಷಮೆ ಕೇಳಿದ್ದಾರೆ.

ಅಷ್ಟೇ ಅಲ್ಲ, "ಇನ್ಮುಂದೆ ಇಂಥ ಪ್ರತಿಭಟನೆಗಳ ಸಹವಾಸಕ್ಕೇ ಹೋಗಲ್ಲ" ಎಂದು ಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. "ನೀವು ಅಮೆರಿಕದ ಪ್ರಜೆ, ಕೇವಲ OCI ಕಾರ್ಡ್ ಇಟ್ಟುಕೊಂಡು ಭಾರತೀಯ ಪ್ರಜೆಯಂತೆ ಮೆರೆಯೋಕೆ ಸಾಧ್ಯವಿಲ್ಲ" ಎಂದು ನ್ಯಾಯಪೀಠ ಚಳಿ ಬಿಡಿಸಿದೆ.

"ನಿಮ್ಮ ದೇಶದಲ್ಲಿ ಹೀಗೆ ಮಾಡಿದ್ರೆ ಬಿಡ್ತಿದ್ರಾ?"

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಂ.ಸಿ. ತ್ರಿಪಾಠಿ ಹಾಗೂ ನ್ಯಾಯಮೂರ್ತಿ ಅದ್ವೈತ್ ಸೇಥ್ನಾ ಅವರಿದ್ದ ನ್ಯಾಯಪೀಠ ನಟನಿಗೆ ಖಡಕ್​ ಪ್ರಶ್ನೆಗಳನ್ನು ಕೇಳಿದೆ. "ನೀವು ಹುಟ್ಟಿದ್ದು ಅಮೆರಿಕದಲ್ಲಿ, ಪೌರತ್ವ ಇರೋದು ಅಲ್ಲಿಯದ್ದು. ನೀವು ಭಾರತದ ಸಾಗರೋತ್ತರ ಪ್ರಜೆ ಅಷ್ಟೇ. ಭಾರತೀಯರ ತರ ಪ್ರತಿಭಟನೆ ಮಾಡಲು ನಿಮಗೆ ಹಕ್ಕಿಲ್ಲ.

ಒಂದು ವೇಳೆ ನಿಮ್ಮ ದೇಶವಾದ ಅಮೆರಿಕದಲ್ಲಿ ಭಾರತೀಯನೊಬ್ಬ ಈ ರೀತಿ ಬೀದಿಗೆ ಇಳಿದು ಧರಣಿ ನಡೆಸಿದ್ದರೆ, ಅಮೆರಿಕ ಸರ್ಕಾರ ಸುಮ್ಮನಿರುತ್ತಿತ್ತಾ? ಮುಂದಿನ ಫ್ಲೈಟ್ ಹತ್ತಿಸಿ ಭಾರತಕ್ಕೆ ವಾಪಸ್ ಕಳಿಸುತ್ತಿರಲಿಲ್ಲವೇ?" ಎಂದು ನ್ಯಾಯಾಲಯ ಖಾರವಾಗಿ ಕೇಳಿದೆ.

ಅಲ್ಲದೆ, "40 ವರ್ಷಕ್ಕೂ ಹೆಚ್ಚು ಕಾಲ ಭಾರತದಲ್ಲೇ ಇದ್ದೀರಿ, ಬಾಲಿವುಡ್‌ನಲ್ಲಿ ನಟರಾಗಿ ಹೆಸರನ್ನು ಸಂಪಾದಿಸಿದ್ದಿರಿ. ಅಷ್ಟಿದ್ದ ಮೇಲೆ ಭಾರತೀಯ ಪೌರತ್ವ ಯಾಕೆ ತೆಗೆದುಕೊಂಡಿಲ್ಲ? ಇಷ್ಟು ವರ್ಷ ಇಲ್ಲೇ ಇದ್ದು ತಾನು ವಿದೇಶಿ ಪ್ರಜೆ ಅನ್ನೋದನ್ನೇ ಮರೆತುಬಿಟ್ರಾ?" ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.

ಲೀವ್ ಇಂಡಿಯಾ ನೋಟಿಸ್ ಕೊಟ್ಟಿದ್ದ ಸರ್ಕಾರ!

ಪ್ರತಿಭಟನೆಯಲ್ಲಿ ಭಾಗಿಯಾದ ಬೆನ್ನಲ್ಲೇ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಇಮ್ರಾನ್ ಖಾನ್‌ಗೆ ‘ಭಾರತ ಬಿಟ್ಟು ತೊಲಗಿ’ (Leave India Notice) ಎಂದು ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ನಟ ಹೈಕೋರ್ಟ್ ಮೆಟ್ಟಿಲೇರಿದ್ದರು.

ಖಾನ್ ಪರ ವಾದ ಮಂಡಿಸಿದ ವಕೀಲರು, "ಇಮ್ರಾನ್ ಹುಟ್ಟಿದ್ದು ಅಮೆರಿಕದಲ್ಲಾದರೂ, ಅವರ ಇಡೀ ಜೀವನ ಕಳೆದಿದ್ದು ಭಾರತದಲ್ಲೇ. ಇಲ್ಲೇ ಮದುವೆಯಾಗಿದ್ದಾರೆ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಯಾವುದೇ ಸಂಘಟನೆಗಳ ಜೊತೆ ಲಿಂಕ್ ಇಲ್ಲ. ಅವರು ಆಗಿನ್ನೂ ಹೊಸಬರಾಗಿದ್ದರಿಂದ ಕಾನೂನಿನ ಪರಿಣಾಮ ಅರ್ಥವಾಗಿರಲಿಲ್ಲ. ಇನ್ಮುಂದೆ ಇಂತಹ ಯಾವುದೇ ಧರಣಿಗಳಲ್ಲಿ ಭಾಗವಹಿಸಲ್ಲ" ಎಂದು ಕೇಳಿಕೊಂಡಿದ್ದಾರೆ.

ಸುಮ್ಮನೆ ಬಿಡಲ್ಲ ಎಂದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ನಟನ ಕ್ಷಮೆಯನ್ನು ಬಲವಾಗಿ ವಿರೋಧಿಸಿದ್ದಾರೆ. "ಇಮ್ರಾನ್ ಖಾನ್ ಒಬ್ಬ ಸೆಲೆಬ್ರಿಟಿ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಅವರು ಏನು ಮಾತನಾಡಿದರೂ ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತೆ.

ಇದು ಒಂದೇ ಬಾರಿಯ ಘಟನೆಯಲ್ಲ, ಈ ಹಿಂದೆಯೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಕೇವಲ ಕ್ಷಮೆ ಕೇಳಿದ ಮಾತ್ರಕ್ಕೆ ಇಂಥವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ವಿದೇಶಿ ಪ್ರಜೆಗಳನ್ನು ದೇಶದಿಂದ ಗಡಿಪಾರು ಮಾಡುವ ಸಂಪೂರ್ಣ ಅಧಿಕಾರ ಸರ್ಕಾರಕ್ಕಿದೆ" ಎಂದು ವಾದ ಮಂಡಿಸಿದ್ದಾರೆ.

Also Read
ನಟ ಧನ್ವೀರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮೀ: ಆಡಿಯೋ ವೈರಲ್ ಬೆನ್ನಲ್ಲೇ ಮಾನಹಾನಿ ಕೇಸ್ ದಾಖಲಿಸಿದ ದರ್ಶನ್ ಪತ್ನಿ! Vijayalakshmi Darshan
ಅಮೆರಿಕನ್ ಪ್ರಜೆಯಾಗಿ ಭಾರತದಲ್ಲಿ ಪ್ರತಿಭಟಿಸುವ ಹಕ್ಕಿಲ್ಲ ಎಂದ ಬಾಂಬೆ ಹೈಕೋರ್ಟ್; ಮುಚ್ಚಳಿಕೆ ಬರೆದುಕೊಟ್ಟು ಬೇಷರತ್ ಕ್ಷಮೆ ಕೋರಿದ ನಟ ಇಮ್ರಾನ್ ಖಾನ್.

"ಇಲ್ಲಿ ಉಳಿದುಕೊಂಡು ಭಾರತವನ್ನೇ ಟೀಕಿಸಬೇಡಿ"

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಭಾರತ 'ವಸುಧೈವ ಕುಟುಂಬಕಮ್ ಎಂಬ ಉದಾರ ತತ್ವವನ್ನು ನಂಬಿದ ದೇಶ. ಆ ಗೌರವ ಉಳಿಸಿಕೊಳ್ಳಿ. ಸೆಲೆಬ್ರಿಟಿಯಾಗಿ ಭಾರತದಿಂದಲೇ ಎಲ್ಲ ಗೌರವ ಪಡೆದುಕೊಂಡಿದ್ದೀರಿ. ಸರ್ಕಾರದ ಕೃಪೆಯಿಂದ ಭಾರತದಲ್ಲಿ ಇದ್ದುಕೊಂಡು, ಇಲ್ಲಿನ ಆಡಳಿತ ವ್ಯವಸ್ಥೆಯನ್ನೇ ಟೀಕಿಸಲು OCI ಕಾರ್ಡ್‌ದಾರರಿಗೆ ಯಾವುದೇ ಹಕ್ಕಿಲ್ಲ. ಕೇವಲ ಕ್ಷಮೆ ಕೇಳಿದ್ದೀರಿ ಎಂದ ಮಾತ್ರಕ್ಕೆ ನೀವು ತಪ್ಪು ಮಾಡಿಲ್ಲ ಎಂದಾಗುವುದಿಲ್ಲ" ಎಂದು ಎಚ್ಚರಿಕೆ ನೀಡಿದೆ.

ಸದ್ಯಕ್ಕೆ ನಟನ ವಿರುದ್ಧದ 'ಲೀವ್ ಇಂಡಿಯಾ ನೋಟಿಸ್' ಜಾರಿಗೆ ಹೈಕೋರ್ಟ್ ತಡೆ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂಡಿದೆ. ಒಟ್ಟಿನಲ್ಲಿ, ಸುಮ್ಮನೆ ಬೀದಿಗೆ ಇಳಿದು ಪ್ರತಿಭಟನೆ ಮಾಡಿ, ದೇಶ ಬಿಡುವ ಮಟ್ಟಕ್ಕೆ ತಲೆನೋವು ಮೈಮೇಲೆ ಎಳೆದುಕೊಂಡ ಬಾಲಿವುಡ್ ನಟನ ನಡೆ ಈಗ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).