ಅಮಿತ್ ಶಾ ಫೋನ್ ಮಾಡಿದ್ರೆ ದಿಲ್ಲಿಗೆ ಓಡ್ತಿರಾ? ಸ್ವಲ್ಪ ನಾಚಿಕೆ, ಬೆನ್ನೆಲುಬು ಇರಲಿ; ಯೂಸುಫ್ ಪಠಾಣ್‌ ಮೇಲೆ ಹರಿಹಾಯ್ದ ಮಹುವಾ ಮೊಯಿತ್ರಾ! Mahua Moitra on Yusuf Pathan

ಸ್ವಪಕ್ಷದ ಸಂಸದ ಯೂಸುಫ್ ಪಠಾಣ್ ವಿರುದ್ಧವೇ ಬಹಿರಂಗವಾಗಿ ಬೆಂಕಿ ಉಗುಳಿದ ಮಹುವಾ ಮೊಯಿತ್ರಾ
ಸ್ವಪಕ್ಷದ ಸಂಸದ ಯೂಸುಫ್ ಪಠಾಣ್ ವಿರುದ್ಧವೇ ಬಹಿರಂಗವಾಗಿ ಬೆಂಕಿ ಉಗುಳಿದ ಮಹುವಾ ಮೊಯಿತ್ರಾ
Published on

ಪ್ರಮುಖ ಮುಖ್ಯಾಂಶಗಳು

  • ಗೃಹ ಸಚಿವ ಅಮಿತ್ ಶಾ ಕರೆ ಮಾಡಿದ ತಕ್ಷಣ ದಿಲ್ಲಿಗೆ ಓಡ್ತಿದ್ದೀರಾ?
  • 20 ಟಿಎಂಸಿ ಸಂಸದರ ಬಂಡಾಯದ ವದಂತಿ
  • ಸ್ವಪಕ್ಷದ ಸಂಸದ ಯೂಸುಫ್ ಪಠಾಣ್ ವಿರುದ್ಧವೇ ಬಹಿರಂಗವಾಗಿ ಬೆಂಕಿ ಉಗುಳಿದ ಮಹುವಾ ಮೊಯಿತ್ರಾ
  • ಸೋಷಿಯಲ್​ ಮೀಡಿಯಾನಲ್ಲಿ ಟ್ವಿಟ್​ ವೈರಲ್​
ಕಲ್ಕತ್ತಾ: ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಈಗ ಹೊಸಾ ಡ್ರಾಮಾ ಶುರುವಾಗಿದೆ. ವಿಧಾನಸಭಾ ಚುನಾವಣೆ ನಂತರ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ಮುಸುಕಿನ ಗುದ್ದಾಟ ಜೋರಾಗಿದೆ ಎಂದು ಮತ್ತೊಮ್ಮೆ ಸಾಭಿತಾಗಿದೆ.
ಟಿಎಂಸಿಯ ಫೈರ್ ಬ್ರಾಂಡ್ ನಾಯಕಿ ಮಹುವಾ ಮೊಯಿತ್ರಾ (Mahua Moitra on Yusuf Pathan) ತಮ್ಮದೇ ಪಕ್ಷದ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಸ್ವಲ್ಪ ಧೈರ್ಯವಾಗಿರಿ, ಬೆನ್ನೆಲುಬು ಇರಲಿ ಎಂದು ಪಠಾಣ್‌ಗೆ ನೇರವಾಗಿಯೇ ಟಾಂಗ್ ಕೊಟ್ಟಿದ್ದಾರೆ.

ಅಮಿತ್ ಶಾ ಕರೆ ಭೇಟಿಗೆ ದಿಲ್ಲಿಗೆ ಓಡಿದ್ರಾ ಪಠಾಣ್?

ಇತ್ತೀಚೆಗೆ ಸುಮಾರು 20 ಕ್ಕೂ ಹೆಚ್ಚು ಟಿಎಂಸಿ ಸಂಸದರು ದೀದಿ (ಮಮತಾ ಬ್ಯಾನರ್ಜಿ) ಗೆ ಕೈಕೊಟ್ಟು ಎನ್‌ಡಿಎ (NDA) ಒಕ್ಕೂಟಕ್ಕೆ ಬೆಂಬಲ ನೀಡಲಿದ್ದಾರೆ ಎಂಬ ವರದಿಗಳು ದೆಹಲಿ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ಯೂಸುಫ್ ಪಠಾಣ್ ದೆಹಲಿಯತ್ತ ಮುಖ ಮಾಡಿರುವುದು ಟಿಎಂಸಿ ಪಾಳಯದಲ್ಲಿ ತಲ್ಲಣ ಮೂಡಿಸಿದೆ.
ಇದನ್ನೇ ಇಟ್ಟುಕೊಂಡು ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಹಾಕಿರುವ ಮಹುವಾ ಮೊಯಿತ್ರಾ, ಏನು ಯೂಸುಫ್ ಪಠಾಣ್, ಗೃಹ ಸಚಿವ ಅಮಿತ್ ಶಾ ಕರೆ ಮಾಡಿದ ತಕ್ಷಣ ದಿಲ್ಲಿಗೆ ಓಡುತ್ತಿದ್ದೀರಾ? ಸ್ವಲ್ಪ ಧೈರ್ಯವಾಗಿರಿ. ನೀವು ಭಾರತ ದೇಶಕ್ಕಾಗಿ ಆಡಿದವರು. ನಮ್ಮ ಜಿಲ್ಲೆಯ ಜನ ನಿಮಗೆ ಭಾರಿ ಅಂತರದ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕನಿಷ್ಠ ಪಕ್ಷ ಸ್ವಲ್ಪ ನಾಚಿಕೆ ಮತ್ತು ಬೆನ್ನೆಲುಬು ಇಟ್ಟುಕೊಳ್ಳಿ ಎಂದು ಅತ್ಯಂತ ಕಟು ಶಬ್ದಗಳಿಂದ ತರಾಟೆಗೆ ತಗೆದುಕೊಂಡಿದ್ದಾರೆ.

ದೀದಿ ಕೋಟೆ ಪತನ?

ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಟಿಎಂಸಿಯ ಕನಿಷ್ಠ 20 ಬಂಡಾಯ ಸಂಸದರು ಎನ್‌ಡಿಎಗೆ ಬೆಂಬಲ ನೀಡುವ ಬಗ್ಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿಗಳು ದೆಹಲಿ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿವೆ. ಈ ಬಂಡಾಯ ಸಂಸದರ ಗುಂಪು ದೆಹಲಿಯಲ್ಲಿ ರಹಸ್ಯ ಸಭೆ ನಡೆಸುತ್ತಿದೆ ಎನ್ನಲಾಗುತ್ತಿದ್ದು, ಯೂಸುಫ್ ಪಠಾಣ್ ಕೂಡ ಇವರ ಸಾಲಿನಲ್ಲಿದ್ದಾರಾ? ಎಂಬ ಅನುಮಾನ ದಟ್ಟವಾಗಿದೆ. ಇದೇ ಕಾರಣಕ್ಕೆ ಮಹುವಾ ಮೊಯಿತ್ರಾ ಸಾರ್ವಜನಿಕವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇಂಟರ್ನೆಟ್‌ನಲ್ಲಿ ಮಹುವಾ ಪೋಸ್ಟ್ ವೈರಲ್!

ಮಹುವಾ ಮೊಯಿತ್ರಾ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ದೀದಿ ಅಭಿಮಾನಿಗಳು ಮಹುವಾ ಅವರ ಧೈರ್ಯವನ್ನು ಮೆಚ್ಚಿ ಲೈಕ್ಸ್ ಒತ್ತುತ್ತಿದ್ದರೆ, ಇನ್ನು ಕೆಲವು ನೆಟ್ಟಿಗರು ಯೂಸುಫ್ ಪಠಾಣ್ ದೆಹಲಿಗೆ ಹೋಗುತ್ತಿರುವುದಕ್ಕೆ ನಿಮ್ಮ ಬಳಿ ಏನು ಸಾಕ್ಷಿ ಇದೆ? ಸುಮ್ಮನೆ ಆರೋಪ ಮಾಡಬೇಡಿ ಎಂದು ಕಮೆಂಟ್ ಬಾಕ್ಸ್‌ನಲ್ಲಿ ಕಿಡಿ ಕಾರುತ್ತಿದ್ದಾರೆ.
ಮೌನ ಮುರಿದ ಪಠಾಣ್; ಗಂಗೂಲಿ ಹೇಳಿದ್ದೇನು?
ಈ ಎಲ್ಲಾ ವಿವಾದ ಹಾಗೂ ಊಹಾಪೋಹಗಳ ಬೆನ್ನಲ್ಲೇ ಯೂಸುಫ್ ಪಠಾಣ್ ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಮಮತಾ ಬ್ಯಾನರ್ಜಿ ಬಹರಾಮ್‌ಪುರ ಕ್ಷೇತ್ರದಿಂದ ನನ್ನನ್ನು ರಾಜೀನಾಮೆ ನೀಡುವಂತೆ ಕೇಳಿದ್ದಾರೆ ಎಂಬುದೆಲ್ಲಾ ಶುದ್ಧ ಸುಳ್ಳು. ಪಕ್ಷದ ಯಾವುದೇ ನಾಯಕರು ನನ್ನನ್ನು ರಾಜೀನಾಮೆ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮತ್ತೊಂದೆಡೆ, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರು ಮಮತಾ ಬ್ಯಾನರ್ಜಿ ಪರವಾಗಿ ಯೂಸುಫ್ ಪಠಾಣ್ ಅವರನ್ನು ಸಂಪರ್ಕಿಸಿದ್ದರು ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ ಇದನ್ನು ನಿರಾಕರಿಸಿರುವ ಗಂಗೂಲಿ, ಇದೆಲ್ಲಾ ಸುಳ್ಳು ಸುದ್ದಿ. ಮಾಧ್ಯಮಗಳು ಇಂತಹ ಪರಿಶೀಲಿಸದ ಮಾಹಿತಿಯನ್ನು ಹರಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net