370 ರೂ. ಬಿರಿಯಾನಿ ವಿವಾದ: ಹಾಸ್ಯದ ಹೆಸರಿನಲ್ಲಿ ಮಹಿಳೆಯರ ತೇಜೋವಧೆ ಸಹಿಸಲ್ಲ; ಸಿಎಂ ಫಡ್ನವೀಸ್ ಖಡಕ್ ಎಚ್ಚರಿಕೆ! Devendra Fadnavis on 370Rs Biryani

370 ರೂ. ಬಿರಿಯಾನಿ ವಿವಾದಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಕ್ರೋಶ
370 ರೂ. ಬಿರಿಯಾನಿ ವಿವಾದಕ್ಕೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಕ್ರೋಶ
Published on

ಪ್ರಮುಖ ಮುಖ್ಯಾಂಶಗಳು

  • ಸ್ಟ್ಯಾಂಡ್-ಅಪ್ ಕಾಮೆಡಿ ಶೋನಲ್ಲಿ ಕೇಳಿಬಂದ '370 ರೂ. ಬಿರಿಯಾನಿ' ವಿವಾದ
  • ಹಾಸ್ಯದ ಹೆಸರಿನಲ್ಲಿ ಮಹಿಳೆಯರ ತೇಜೋವಧೆ ಸಹಿಸಲ್ಲ
  • ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಆಕ್ರೋಶ
ಮುಂಬೈ: ಸ್ಟ್ಯಾಂಡ್​​-ಅಪ್​ ಕಾಮೆಡಿಯನ್​ ಪ್ರಣೀತ್​ ಮೋರೆ ಅವರ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವುದು ದೇಶಾದ್ಯಂತ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ. 370 ರೂ. ಬಿರಿಯಾನಿ ಹೆಸರಿನಿಂದ ಈ ವಿವಾದ ಭುಗಿಲೆದ್ದಿದ್ದು, ಈಗ ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ (Devendra Fadnavis on 370Rs Biryani) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರದ ತಪ್ಪು ಬಳಕೆ ಸಲ್ಲದು!

ಈ ವಿವಾದದ ಕುರಿತು ಶುಕ್ರವಾರ (ಜೂ.12) ಮಾತನಾಡಿರುವ ಸಿಎಂ ದೇವೇಂದ್ರ ಫಡ್ನವೀಸ್, ಭಾರತದ ಸಂವಿಧಾನ ಪ್ರತಿ ನಾಗರಿಕನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಇದನ್ನು ಇನ್ನೊಬ್ಬರ ತೆಜೋವಧೆ ಮಾಡಲು ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ನನ್ನನ್ನು ಸೇರಿ ಈಗಿನ ಜನರಿಗೆ ಸ್ಟ್ಯಾಂಡ್​​-ಅಪ್​ ಕಾಮೆಡಿ ಮನರಂಜನೆಯ ಆಯ್ಕೆಯಾಗಿದೆ. ಆದರೆ ಹಾಸ್ಯದ ಹೆಸರಿನಲ್ಲಿ, ಸಮಾಜಿಕ ಮಿತಿಗಳನ್ನು ಹಾಗೂ ವೈಯಕ್ತಿಕ ದಾಳಿಗಳನ್ನು ಮನರಂಜನೆ ಎಂದು ಕರೆಯಲು ಸಾಧ್ಯವಾಗದು. ಹೀಗಾಗಿ ಸ್ಟ್ಯಾಂಡ್​​-ಅಪ್​ ಕಾಮೆಡಿ ತನ್ನ ಚೌಕಟ್ಟನ್ನು ಮೀರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏನಿದು 370 ರೂ. ಬಿರಿಯಾನಿ?

ಕಾಮೆಡಿಯನ್ ಪ್ರಣೀತ್ ಮೋರ್ ಅವರ ಕಾಮೆಡಿ ಶೋ ನಡೆಯುತ್ತಿದ್ದಾಗ, ಆಡಿಯನ್ಸ್ ಗ್ಯಾಲರಿಯಲ್ಲಿದ್ದ ಹಿಮಾಂಶು ಜಂಗ್ರಾ ಎಂಬ ಯುವಕ ತನ್ನ ಡೇಟಿಂಗ್ ಕಥೆ ಹೇಳಲು ಶುರು ಮಾಡಿದ್ದ. ಡೇಟಿಂಗ್ ಹೋದಾಗ ಚಿಕನ್ ಬಿರಿಯಾನಿಗೆ 370 ರೂಪಾಯಿ ಖರ್ಚು ಮಾಡಿದ್ದಕ್ಕೆ, ಪ್ರತಿಯಾಗಿ ಆಕೆಯಿಂದ ದೈಹಿಕ ಸುಖ ಸಿಗಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದ್ದ.
ಅಷ್ಟೇ ಅಲ್ಲ, ಊಟ ಮುಗಿದ ಮೇಲೆ ಆಕೆ ತನ್ನನ್ನು ಮನೆಗೆ ಬಿಡಲು ಕೇಳಿದಾಗ ಆಶ್ಚರ್ಯಚಕಿತನಾದ ಹಿಮಾಂಶು, 370 ರೂಪಾಯಿ ಖರ್ಚು ಮಾಡಿದ್ದೇನೆ ಅಂದಮೇಲೆ ವಸೂಲಿ ಮಾಡಬೇಕಲ್ವಾ ಎಂದು ಅಹಂಕಾರದಿಂದ ಹೇಳಿದ್ದ. ಇದನ್ನು ಕೇಳಿ ಅಲ್ಲಿದ್ದ ಜನ ನಕ್ಕಿದ್ದರು ಮತ್ತು ಕಾಮೆಡಿಯನ್ ಕೂಡ ತಮಾಷೆಯಾಗಿ ತಗೆದುಕೊಂಡಿದ್ದರು.
ಆದರೆ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಿಮಾಂಶು ಜಂಗ್ರಾ ಮತ್ತು ಕಾಮೆಡಿಯನ್ ಪ್ರಣೀತ್ ಮೋರ್ ವಿರುದ್ಧ ತಿರುಗಿಬಿದ್ದಿದ್ದಾರೆ. 370 ರೂಪಾಯಿಗೆ ಮಹಿಳೆಯರ ಒಪ್ಪಿಗೆಯನ್ನು ಖರೀದಿಸಬಹುದೇ? ಎಂದು ನೆಟ್ಟಿಗರು ಕ್ಲಾಸ್ ತಗೆದುಕೊಂಡಿದ್ದಾರೆ.
ವಿವಾದ ಜೋರಾಗುತ್ತಿದ್ದಂತೆ ಹಿಮಾಂಶು ಕೆಲಸ ಮಾಡುತ್ತಿದ್ದ ಸ್ಟಾವಿಕ್ ಡಿಸೈನ್ ಕಂಪನಿ ಆತನನ್ನು ಕೆಲಸದಿಂದ ವಜಾ ಮಾಡಿ, ಇಂತಹ ಕೀಳು ಮನಸ್ಥಿತಿಯ ಮಾತುಗಳು ನಮ್ಮ ಕಂಪನಿಯ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಎಂಟ್ರಿ ಕೊಟ್ಟ ಮಹಿಳಾ ಆಯೋಗ: ಹರಿಯಾಣ ಡಿಜಿಪಿಗೆ ಆರ್ಡರ್!

ಈ ವಿಷಯವನ್ನು ಈಗ ರಾಷ್ಟ್ರೀಯ ಮಹಿಳಾ ಆಯೋಗ (NCW) ಕೈಗೆತ್ತಿಕೊಂಡಿದೆ. ಲೈಂಗಿಕ ದಬ್ಬಾಳಿಕೆ ಮತ್ತು ಮಹಿಳೆಯ ಒಪ್ಪಿಗೆಯಿಲ್ಲದ ನಡವಳಿಕೆಯನ್ನು ಮನರಂಜನೆಯ ಹೆಸರಿನಲ್ಲಿ ವೈಭವೀಕರಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ, ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಯೋಗ ಆಕ್ರೋಶ ಹೊರಹಾಕಿದೆ.
ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ತಕ್ಷಣ ಎಫ್‌ಐಆರ್ (FIR) ದಾಖಲಿಸುವಂತೆ ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಅಷ್ಟೇ ಅಲ್ಲ, ಮುಂದಿನ 7 ದಿನಗಳ ಒಳಗಾಗಿ ಕೈಗೊಂಡ ಕ್ರಮಗಳ ವರದಿ ಸಲ್ಲಿಸಬೇಕು ಎಂದು ಗಡುವು ನೀಡಿದೆ.
ವಿವಾದಾತ್ಮಕ ಹೇಳಿಕೆ ನೀಡಿದ ಹಿಮಾಂಶು ಜಂಗ್ರಾ ಮತ್ತು ಕಾರ್ಯಕ್ರಮ ಆಯೋಜಿಸಿದ್ದ ಕಾಮೆಡಿಯನ್ ಪ್ರಣೀತ್ ಮೋರ್ ಇಬ್ಬರ ಮೇಲೂ ಸಮನ್ಸ್ ಜಾರಿ ಮಾಡಿದ್ದು, ಜೂನ್ 22 ರಂದು ಸಂಜೆ 4:00 ಗಂಟೆಗೆ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಲು ಇಬ್ಬರಿಗೂ ಖಡಕ್ ನೋಟಿಸ್ ನೀಡಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net