

ಲಂಡನ್ನಲ್ಲಿ ಎಂಬಿಎ ಅಭ್ಯಾಸಕ್ಕೆಂದು ತೆರಳಿದ್ದ ಮಗಳು ಪುಣೆಯಲ್ಲಿ ಶವವಾಗಿ ಪತ್ತೆ.
ಆಹಾರ ವಿತರಣಾ ವಹಿವಾಟಿನಿಂದ ಪುಣೆಯಲ್ಲಿ ವಾಸವಾಗಿರು ಫ್ಲಾಟ್ ಪತ್ತೆ ಹಚ್ಚಿದ ಪೊಲೀಸರು.
ಪೋಷಕರಿಗೂ ತಿಳಿಸಿದ ಮುಗ್ಧ ದೇಶ್ಮುಖ್ ನಿಗೂಢವಾಗಿ ಬದುಕುತ್ತಿದ್ದದ್ದು ಯಾಕೆ ಎನ್ನುವುದರ ಸುತ್ತ ಪೊಲೀಸರ ತನಿಖೆ ಶುರು.
ಪುಣೆ: 2025ರಲ್ಲಿ ಲಂಡನ್ನಲ್ಲಿ ಎಂಬಿಎ ಓದಲು ತೆರಳಿದ್ದ 34 ವರ್ಷದ ಮಗಳು ಪುಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆ ನಿಗೂಢವಾಗಿ ಭಾರತದಲ್ಲಿ ಬದುಕುತ್ತಿದ್ದದ್ದು ಯಾಕೆ. ಎಂಬಿಎ ಓದನ್ನು ಅರ್ಧಕ್ಕೆ ಬಿಟ್ಟು ಬಂದಿದ್ಯಾಕೆ. ಆಕೆಯ ಸಾವಿಗೆ ಕಾರಣವೇನು ಎನ್ನುವುದು ಇನ್ನೂ ನಿಗೂಢವಾಗಿದೆ.
ಹೌದು, ಮುಗ್ಧಾ ದೇಶ್ಮುಖ್ ಎನ್ನುವ ಯುವತಿ ಲಂಡನ್ನಲ್ಲಿ ಎಂಬಿಎ ಓದಲು 2025 ಜುಲೈನಲ್ಲಿ ತೆರಳಿದ್ದರು. ಆದರೆ, 2026 ಅಕ್ಟೋಬರ್ನಲ್ಲಿ ಮಹಾರಾಷ್ಟ್ರದ ಪುಣೆಯ ತಮ್ಮ ಫ್ಲಾಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆನ್ಲೈನ್ ಫುಡ್ ಫ್ಲಾಟ್ಫಾರ್ಮ್ನೊಂದಿಗೆ ನಡೆಸಿದ್ದ ವಹಿವಾಟು, ಆಕೆ ಎಲ್ಲಿದ್ದಾರೆ ಎನ್ನುವುದರ ಸುಳಿವು ನೀಡಲು ಸಹಕರಿಸಿತು.
ಛತ್ರಪತಿ ಸಂಭಾಜಿನಗರದ ನಿವಾಸಿ ಮುಗ್ಧಾ ದೇಶ್ಮುಖ್ ಕಳೆದ ವರ್ಷ 2025 ಜುಲೈನಲ್ಲಿ ಎಂಬಿಎಗಾಗಿ ಲಂಡನ್ಗೆ ತೆರಳಿ, 2026ರಲ್ಲಿ ಪೋಷಕರಿಗೆ ತಿಳಿಯದಂತೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಪುಣೆಯ ಪಿಂಪ್ರಿ ಚಿಂಚ್ವಾಡ್ ವ್ಯಾಪ್ತಿಯ ಗಹುಂಜೆಯಲ್ಲಿ ಲೋಧಾ ಬೆಲ್ಮಂಡೋದಲ್ಲಿ ಫ್ಲಾಟ್ ಬಾಡಿಗೆಗೆ ಪಡೆದುಕೊಂಡು, ಇಲ್ಲಿ ಅರೆಕಾಲಿಕ ಉದ್ಯೋಗ ನಿರ್ವಹಿಸುತ್ತಾ, ನಿಗೂಢವಾಗಿ ವಾಸ ಮಾಡುತ್ತಿದ್ದರು.
ಮುಗ್ಧಾ ದೇಶ್ಮುಖ್ ಎಂಬಿಎಗಾಗಿ ಲಂಡನ್ನಲ್ಲೇ ಇದ್ದಾರೆ ಎಂದು ಪೋಷಕರು ನಂಬಿದ್ದರು. ನಿತ್ಯ ಆಕೆಯೊಂದಿಗೆ ಸಂಪರ್ಕದಲ್ಲಿ ಸಹ ಇದ್ದರು. ಆದರೆ, ಆಕೆ ಭಾರತಕ್ಕೆ ಬಂದಿದ್ದಾಳೆ ಎನ್ನುವ ಸುಳಿವೇ ಇರಲಿಲ್ಲ. ಅ.24ರಂದು ಆಕೆಗೆ ಎಷ್ಟೇ ಕರೆ ಮಾಡಿದರೂ ಕಾಲ್ ಕನೆಕ್ಟ್ ಆಗಲಿಲ್ಲ. ಕೊನೆಗೆ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಅವರ ತಂದೆ ಅವಿನಾಶ್ ದೇಶ್ಮುಖ್ ಲಂಡನ್ನಲ್ಲಿರುವ ಆಕೆಯ ಸ್ನೇಹಿತರಿಗೆ ಕರೆ ಮಾಡಿದಾಗ, ಮುಗ್ಧ ಅವರು ಆಗಸ್ಟ್ನಲ್ಲಿಯೇ ಲಂಡನ್ ತೊರೆದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಶಾಕ್ಗೊಳಗಾದ ಅವರ ತಂದೆ ಪೊಲೀಸರಿಗೆ ದೂರು ಕೊಟ್ಟರು.
ಮುಗ್ಧ ಬ್ಯಾಂಕ್ ಖಾತೆ ವಹಿವಾಟನ್ನು ಪರಿಶೀಲಿಸಿದ ಅವಿನಾಶ್ ದೇಶ್ಮುಖ್, ಅಕ್ಟೋಬರ್ 8ರಿಂದ 25ರವರೆಗೆ ಆಹಾರ ವಿತರಣೆ ಮತ್ತು ಆನ್ಲೈನ್ ಮೂಲಕ ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಈ ಪೈಕಿ ಛತ್ರಪತಿ ಸಂಭಾಜಿನಗರದ ಓಸ್ಮಾನ್‌ಪುರ ಪ್ರದೇಶಕ್ಕೆ ಸಂಬಂಧಿಸಿದ ವಹಿವಾಟು ಕೂಡ ಇತ್ತು. ಇದರಿಂದ ಮುಗ್ಧಾ ಭಾರತಕ್ಕೆ ಮರಳಿರುವ ಶಂಕೆ ವ್ಯಕ್ತವಾಗಿದೆ.
ಛತ್ರಪತಿ ಸಂಭಾಜಿನಗರದ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಪಿಂಪ್ರಿ ಚಿಂಚ್ವಾಡ್ನ ಶಿರ್ಗಾಂವ್ ಪೊಲೀಸರು ಗುಹಂಜೆ ಲೋಧಾ ಬೆಲ್ಮಂಡೋ ಫ್ಲಾಟ್ಗೆ ತೆಳಿದ್ದರು. ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ, ಕೀಲಿ ಮಾಡುವವರ ಸಹಾಯದಿಂದ ಒಳಕ್ಕೆ ಪ್ರವೇಶಿಸಲಾಯಿತು.
ಮುಗ್ಧ ದೇಶ್ಮುಖ್ರ ಮೃತದೇಹ ಒಳಗೆ ಪತ್ತೆಯಾಗಿತ್ತು. ಆದರೆ, ಆಕೆಯ ದೇಹದ ಮೇಲೆ ಯಾವುದೇ ಗಾಯ ಕಂಡುಬಂದಿಲ್ಲ. ಸಾವಿಗೆ ನಿಖರ ಮಾಹಿತಿಯೂ ಸಿಕ್ಕಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರೂ ವರದಿಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯ ನಿಖರ ಮಾಹಿತಿಗಾಗಿ ವಿವಿಧ ಅಂಗಾಗಳ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿಗಳು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಮುಗ್ಧಾ ಭಾರತಕ್ಕೆ ಬಂದಿದ್ದು, ಆಗಸ್ಟ್ನಲ್ಲಿ. ಆದರೆ, ಏಪ್ರಿಲ್ನಲ್ಲಿಯೇ ಫ್ಲಾಟ್ ಖರೀದಿ ಮಾಡಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಅವರು ಪೋಷಕರಿಗೆ ಹೇಳದೆ ಲಂಡನ್ನಿಂದ ಭಾರತಕ್ಕೆ ಬಂದಿದ್ದು ಯಾಕೆ. ಪುಣೆಯಲ್ಲಿ ಏಕಾಂಗಿ ವಾಸವಾಗಿದ್ದು ಏಕೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ, (ಏಜೆನ್ಸೀಸ್).