ರಷ್ಯಾ ಸಂಶೋಧನಾ ಕೇಂದ್ರದಲ್ಲಿ ಯುವತಿ ನಿಗೂಢ ಸಾವು! ಟೆಸ್ಟ್​​ ಟ್ಯೂಬ್​ ಒಡೆದು ಮಾರಕ ವೈರಸ್​ ಸೋರಿಕೆ; 200 ಜನ ಕ್ವಾರಂಟೈನ್​! Virus Leak in Russia

ರಷ್ಯಾದ ಸಂಶೋಧನಾ ಕೇಂದ್ರದಲ್ಲಿ ಟೆಸ್ಟ್ ಟ್ಯೂಬ್ ಒಡೆದು ನಿಗೂಢ ನ್ಯುಮೋನಿಯಾದಿಂದ ಯುವತಿ ಮೃತಪಟ್ಟಿದ್ದು, ಆಕೆಯ ಸಂಪರ್ಕದಲ್ಲಿದ್ದ 200 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
Symbolic image of a Russian laboratory in Siberia and a medical emergency.
ರಷ್ಯಾದ ಸೈಬೀರಿಯಾ ಪ್ರಯೋಗಾಲಯ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಯ ಸಾಂಕೇತಿಕ ಚಿತ್ರ
Published on: 

ಮಾಸ್ಕೋ: ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿರುವ 'ಆಂಟಿ-ಪ್ಲೇಗ್' ಸಂಶೋಧನಾ ಕೇಂದ್ರದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದು ಈಗ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಯುವತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದ ಸುಮಾರು 200 ಜನರನ್ನು ಈಗ ಕ್ವಾರಂಟೈನ್ ಮಾಡಲಾಗಿದೆ. ಈ ಘಟನೆ ರಷ್ಯಾದ ಇರ್ಕುಟ್ಸ್ಕ್ ಸಮೀಪದ ಶೆಲೆಖೋವ್ ಪಟ್ಟಣದಲ್ಲಿರುವ ಹೈ-ಸೆಕ್ಯುರಿಟಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದಿದ್ದು, ಈ ಬಗ್ಗೆ ಅಧಿಕಾರಿಗಳು ತೀವ್ರ ತನಿಖೆ ಆರಂಭಿಸಿದ್ದಾರೆ.

ಟೆಸ್ಟ್​ ಟ್ಯೂಬ್​ ಒಡೆದಿದ್ದೇ ಅನಾಹುತಕ್ಕೆ ಕಾರಣವಾಯಿತೇ?

ಲಭ್ಯವಿರುವ ಮಾಹಿತಿ ಪ್ರಕಾರ, ಮೃತಪಟ್ಟ ಯುವತಿ ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಜೀವಂತ ಜೈವಿಕ ವಸ್ತುಗಳಿದ್ದ ಟೆಸ್ಟ್​ ಟ್ಯೂಬ್​ ಒಡೆದುಕೊಂಡಿದ್ದರು. ಇದರ ಬೆನ್ನಲ್ಲೇ ಅವರಿಗೆ ವಿಚಿತ್ರ ಮತ್ತು ತೀವ್ರ ಸ್ವರೂಪದ ನ್ಯುಮೋನಿಯಾ ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಆರೋಗ್ಯ ಸ್ಥಿತಿ ವೇಗವಾಗಿ ಹದಗೆಟ್ಟಿತ್ತು. ಕೊನೆಗೆ ವೆಂಟಿಲೇಟರ್‌ನಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈಕೆ ಮಾರಕ 'ನ್ಯುಮೋನಿಕ್ ಪ್ಲೇಗ್' ಸೋಂಕಿಗೆ ಬಲಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ರಷ್ಯಾದ ಆರೋಗ್ಯ ಇಲಾಖೆ ಹಾಗೂ ಅಧಿಕಾರಿಗಳು ಇದುವರೆಗೆ ಸೋಂಕು ಯಾವುದು ಎಂಬುದನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ. ಕೇವಲ "ಅಜ್ಞಾತ ಮೂಲದ ನ್ಯುಮೋನಿಯಾ" ಎಂದು ಮಾತ್ರ ಹೇಳುತ್ತಿದ್ದಾರೆ.

200 ಜನ ವಾರ್ಡ್‌ನಲ್ಲಿ ಪ್ರತ್ಯೇಕವಾಸ!

ಯುವತಿಯ ಸಾವಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ವೈದ್ಯಕೀಯ ಸಿಬ್ಬಂದಿ, ಆಕೆಯೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿದ್ದ ಬರೋಬ್ಬರಿ 197 ಜನರನ್ನು ಹುಡುಕಿ ಪತ್ತೆ ಹಚ್ಚಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನೆಲ್ಲಾ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ನೂರಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

Also Read
ಯುದ್ಧ ಇನ್ನೂ ಮುಗಿದಿಲ್ಲ, ಇಸ್ಲಾಂ ವಿರೋಧಿ ಶಕ್ತಿಗಳೇ ನಮ್ಮ ಟಾರ್ಗೆಟ್​: ಫ್ಲೈದುಬೈ ಸಹ- ಪೈಲಟ್​ 'ಅಲ್​-ಹಮ್ಮಾಮಿ' ಬೆಂಬಲಿಸಿ "ಅಲ್​-ಖೈದಾ" ಪೋಸ್ಟ್​! Al-Qaeda Support
Symbolic image of a Russian laboratory in Siberia and a medical emergency.

ಶೆಲೆಖೋವ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿಗಿ ಕಾವಲು ಹಾಕಲಾಗಿದ್ದು, ಮುಂಜಾಗರೂಕತೆಯಾಗಿ ಸಮೀಪದ ಹೆರಿಗೆ ಆಸ್ಪತ್ರೆಯ ಮೇಲೂ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಸಾರ್ವಜನಿಕ ಆರೋಗ್ಯ ಮೇಲ್ವಿಚಾರಣಾ ಸಂಸ್ಥೆಯಾದ 'ರೋಸ್ಪೊಟ್ರೆಬ್ನಾಡ್ಜೋರ್' ಈ ಬಗ್ಗೆ ಪ್ರತಿಕ್ರಿಯಿಸಿ, ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ ಎಂದು ಹೇಳಿದೆ. ಸದ್ಯಕ್ಕೆ ಸಂಪರ್ಕಿತರ ಎಲ್ಲರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಯಾರಿಗೂ ಸೋಂಕು ತಗುಲಿರುವ ಬಗ್ಗೆ ವರದಿ ಬಂದಿಲ್ಲ. ಎಲ್ಲರ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ಸಮಾಧಾನಕರ ಸಂಗತಿ ಹಂಚಿಕೊಂಡಿದ್ದಾರೆ.

ಗಾಬರಿಯಾಗಬೇಡಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ: ಗವರ್ನರ್ ಮನವಿ

ಜನರಲ್ಲಿ ಆತಂಕ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಇರ್ಕುಟ್ಸ್ಕ್ ಪ್ರದೇಶದ ಗವರ್ನರ್ ಇಗೊರ್ ಕೊಬ್ಜೆವ್, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ತುರ್ತು ಸಾಂಕ್ರಾಮಿಕ ನಿಗ್ರಹ ಆಯೋಗದ ಸಭೆ ನಡೆಸಲಾಗಿದ್ದು, ಸೋಂಕು ಹಬ್ಬದಂತೆ ತಡೆಯಲು ಬೇಕಾದ ಎಲ್ಲಾ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net