

ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ 2.5 ಲಕ್ಷ ಮೌಲ್ಯದ ಆಭರಣ, ನಗದು ಕಳ್ಳತನ.
ನಾಲ್ಕು ಬಾರಿ ಎಮರ್ಜೆನ್ಸಿ ಚೈನ್ ಎಳೆದರೂ ರೈಲ್ವೆ ಪೊಲೀಸರಿಂದ ಸಹಾಯ ಸಿಕ್ಕಿಲ್ಲ ಎಂದು ಮಹಿಳೆ ಆರೋಪ.
ಸಣ್ಣ ಮಗುವಿನೊಂದಿಗೆ ರಾತ್ರಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದ ಮಹಿಳೆ.
AC coach Gold, Cash Teft: ಆನಂದ್ ವಿಹಾರ್-ನ್ಯೂ ಜಲ್ಪೈಗುರಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ 2.5 ಲಕ್ಷ ಮೌಲ್ಯದ ಆಭರಣ ಮತ್ತು 25 ಸಾವಿರ ರೂ. ನಗದು ಕಳ್ಳತನವಾಗಿದೆ. ಈ ಬಗ್ಗೆ ಆಕೆ ಫೇಸ್ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುವಾಗ ಸಿಗುವ ಸೌಕರ್ಯ, ಗೌಪ್ಯತೆ ಮತ್ತು ಹೆಚ್ಚಿನ ಭದ್ರತೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ, 15726 ಸಂಖ್ಯೆಯ ರೈಲಿನಲ್ಲಿ ನಡೆದಿದೆ ಎಂದು ಮಾಡಿರುವ ಆರೋಪವು ಸದ್ಯ ಪ್ರೀಮಿಯಂ ರೈಲು ಬೋಗಿಗಳಲ್ಲಿಯೂ ಪ್ರಯಾಣಿಕರ ಸುರಕ್ಷತೆ ಎಷ್ಟಿದೆ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.
15726 ಸಂಖ್ಯೆಯ ಆನಂದ್ ವಿಹಾರ್-ನ್ಯೂ ಜಲ್ಪೈಗುರಿ ಎಕ್ಸ್ಪ್ರೆಸ್ನಲ್ಲಿ ತನ್ನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ..ಬ್ಯಾಗ್ನಲ್ಲಿದ್ದ 2.5 ಲಕ್ಷ ಮೌಲ್ಯದ ಆಭರಣ ಮತ್ತು 25 ಸಾವಿರ ರೂ. ನಗದು ಕದ್ದಿದ್ದಾರೆ. ಇದು ಹೇಗಾಯ್ತು ಅಂತಾನೆ ತಿಳಿಯುತ್ತಿಲ್ಲ. ಜೊತೆಯಲ್ಲಿ ನನ್ನ ಮಗು ಇತ್ತು. ಅದೃಷ್ಟವಶಾತ್ ಮಗುವಿಗೆ ಏನೂ ಸಮಸ್ಯೆಯಾಗಿಲ್ಲ ಎಂದಿದ್ದಾರೆ.
ನನ್ನ ಅಮೂಲ್ಯ ವಸ್ತುಗಳು ಕಳುವಾದ ಬಗ್ಗೆ ನನಗೆ ತಿಳಿಯುತ್ತಲೇ ನಾನು ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ ಅವರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ನಾಲ್ಕು ಬಾರಿ ಸಹಾಯಕ್ಕಾಗಿ ರೈಲಿನ ತುರ್ತು ಚೈನ್ ಎಳೆದರು ಸಹ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆ ಹಂಚಿಕೊಂಡ ವಿಡಿಯೋಗೆ 3,000 ಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿದ್ದು, ಕೆಲವರು ಇಷ್ಟು ದುಬಾರಿ ವಸ್ತುಗಳನ್ನು ರೈಲಿನಲ್ಲಿ ಕ್ಯಾರಿ ಮಾಡುವ ಅವಶ್ಯಕತೆ ಏನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ. ಮಹಿಳೆಯ ಪರಿಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇತರೆ ಬೋಗಿಗಳಿಗಿಂತ ಹೆಚ್ಚಿನ ಗೌಪ್ಯತೆ ನೀಡುವ ಫಸ್ಟ್ ಎಸಿ ಕ್ಯಾಬಿನ್ನಲ್ಲಿ ಕಳ್ಳತನ ಹೇಗೆ ನಡೆಯಲು ಸಾಧ್ಯ ಎಂದು ಕೆಲವು ಬಳಕೆದಾರರು ಪ್ರಶ್ನಿಸಿದ್ದಾರೆ.
ರೈಲು ಪ್ರಯಾಣದ ವೇಳೆ ಕಳ್ಳತನವಾದರೆ ಏನು ಮಾಡಬೇಕು ಎಂಬುದನ್ನು ಪ್ರತಿಯೊಬ್ಬ ಪ್ರಯಾಣಿಕರು ತಿಳಿದುಕೊಳ್ಳುವುದು ಅತ್ಯಗತ್ಯ.
ಭಾರತೀಯ ರೈಲ್ವೆಯು 139 ಎಂಬ ಭದ್ರತಾ ಸಹಾಯವಾಣಿಯನ್ನು ಒದಗಿಸಿದ್ದು, ಪ್ರಯಾಣಿಕರು ರೈಲ್ವೆ ಸೇವೆಗಳು ಮತ್ತು ಭದ್ರತೆಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಇದನ್ನು ಬಳಸಬಹುದು.
ಪ್ರಯಾಣಿಕರು ಲಭ್ಯವಿರುವಾಗ ರೈಲ್ವೆ ರಕ್ಷಣಾ ಪಡೆಅಥವಾ ಸರ್ಕಾರಿ ರೈಲ್ವೆ ಪೊಲೀಸರನ್ನು ಕೂಡ ಸಂಪರ್ಕಿಸಬಹುದು.
ಕಳೆದುಹೋದ ವಸ್ತುಗಳ ಬಗ್ಗೆ ತಕ್ಷಣವೇ ದೂರು ನೀಡುವುದು, ಬೋಗಿ ಮತ್ತು ಆಸನದ ವಿವರಗಳನ್ನು ಹಂಚಿಕೊಳ್ಳುವುದು ಹಾಗೂ ಸಂಬಂಧಿತ ಸಾಕ್ಷ್ಯಗಳನ್ನು ಭದ್ರವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯ.
ಪ್ರೀಮಿಯಂ ಸೌಕರ್ಯಗಳು ಹೆಚ್ಚಿನ ಗೌಪ್ಯತೆ ಮತ್ತು ಸೌಕರ್ಯವನ್ನು ಒದಗಿಸಬಹುದು, ಆದರೆ ಅದರಿಂದ ಪ್ರಯಾಣಿಕರು ಯಾವುದೇ ಸಹಾಯವಿಲ್ಲದೆ ಭದ್ರತೆಯ ಕಾಳಜಿಯನ್ನು ತಾವೇ ನಿರ್ವಹಿಸಬೇಕು ಎಂದರ್ಥವಲ್ಲ,(ಏಜೆನ್ಸೀಸ್).