ವಿಜ್ಞಾನದಿಂದ ಭದ್ರತೆಯವರೆಗೆ ಮೋದಿ ಮಾಸ್ಟರ್ ಪ್ಲಾನ್...ಇಸ್ರೇಲ್ ನೆಲದಲ್ಲಿ ನಮೋ ಯುಗಾರಂಭ | Modi In Israel

Modi In Israel | ಇಸ್ರೆಲ್​ಗೆ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ
Modi In Israel | ಇಸ್ರೆಲ್​ಗೆ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ
Published on
ದೆಹಲಿ: ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಬಾಂಧವ್ಯವು ಹೊಸ ಮೈಲಿಗಲ್ಲನ್ನು ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಬುಧವಾರ ಇಸ್ರೇಲ್‌ಗೆ ತೆರಳಿದ್ದಾರೆ. ಈ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧವನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಹಂತಕ್ಕೆ ಕೊಂಡೊಯ್ಯಲಿದೆ ಎಂದು ನಿರೀಕ್ಷಿಸಲಾಗಿದೆ.
ಇಸ್ರೆಲ್​ಗೂ ತೆರಳುವ ಮುನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಪ್ರಧಾನಿ ಮೋದಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಕೃಷಿ, ನೀರು ನಿರ್ವಹಣೆ, ತಂತ್ರಜ್ಞಾನ, ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಹಾಗೂ ಜನರಿಂದ ಜನರಿಗೆ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ನೆತನ್ಯಾಹು ಅವರೊಂದಿಗಿನ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ.
ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.

ನೆಸ್ಸೆಟ್‌ನಲ್ಲಿ ಐತಿಹಾಸಿಕ ಭಾಷಣ

ಪ್ರಧಾನಿ ಮೋದಿ ಇಸ್ರೇಲ್‌ನ ಸಂಸತ್ತು ನೆಸ್ಸೆಟ್​​ನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದ್ದು, ಈ ಗೌರವ ಪಡೆದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ವಿಶೇಷವಾಗಿಸಲು ಸ್ಥಳೀಯ ಸರ್ಕಾರ ಅತ್ಯಂತ ಅಪರೂಪದ ಮತ್ತು ಗೌರವಯುತ ಕ್ರಮವನ್ನು ಕೈಗೊಂಡಿದ್ದು, ನೆಸ್ಸೆಟ್ ಅನ್ನು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಪ್ರಾದೇಶಿಕ ಸ್ಥಿರತೆ ಮತ್ತು ಷಡ್ಭುಜಾಕೃತಿ ಮೈತ್ರಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈಗಾಗಲೇ ಘೋಷಿಸಿರುವಂತೆ, ಭಾರತವು ಈ ಭಾಗದ ಸ್ಥಿರತೆಗೆ ಅತ್ಯಗತ್ಯವಾದ ಪಾಲುದಾರನಾಗಿದೆ. ಪ್ರಸ್ತಾಪಿತ ಮೈತ್ರಿಕೂಟಗಳ ಷಡ್ಭುಜಾಕೃತಿ ಅಡಿಯಲ್ಲಿ ಭಾರತ, ಇಸ್ರೇಲ್, ಯುರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ಆರ್ಥಿಕ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವುದು ಈ ಭೇಟಿಯ ದೂರದೃಷ್ಟಿಯಾಗಿದೆ.

ಪ್ರಧಾನಿ ಮೋದಿ ನಿಜವಾದ ಸ್ನೇಹಿತ ಎಂದ ವಿಪಕ್ಷ ನಾಯಕ

ಈ ಭೇಟಿಯ ಕುರಿತಾಗಿ ತಮ್ಮ ಎಕ್ಸ್​ ಖಾತೆಯ ಮೂಲಕ ಹಿಂದಿಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಇಸ್ರೇಲ್‌ನ ಮಾಜಿ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್, ಇಡೀ ಇಸ್ರೇಲ್ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಉತ್ಸುಕವಾಗಿದ್ದು, ಅವರು ಇಸ್ರೇಲ್‌ನ ನಿಜವಾದ ಸ್ನೇಹಿತ, ಉಭಯ ದೇಶಗಳ ನಡುವಿನ ಸಂಬಂಧವು ಕೇವಲ ಕಾರ್ಯತಂತ್ರದ ಸಂಬಂಧವಲ್ಲ, ಬದಲಾಗಿ ರಾಷ್ಟ್ರಗಳ ನಡುವಿನ ಆಳವಾದ ಸ್ನೇಹದ ಬಂಧವಾಗಿದೆ ಎಂದು ಬರೆದಿದ್ದಾರೆ.

ಭಾಷಣ..ಔತಣಕೂಟ

ಪ್ರಧಾನಿ ಮೋದಿ ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಯಹೂದಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
ಬುಧವಾರ ಸಂಜೆ, ಪ್ರಧಾನಿ ಮೋದಿ ಇಸ್ರೇಲ್‌ನ ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪ್ರಮುಖ ಇಸ್ರೇಲಿ ಕಾರ್ಯನಿರ್ವಾಹಕರು ಉಪಸ್ಥಿತರಿರುತ್ತಾರೆ. ಆ ರಾತ್ರಿ ಪ್ರಧಾನಿ ನೆತನ್ಯಾಹು ಗೌರವಾರ್ಥವಾಗಿ ಖಾಸಗಿ ಭೋಜನ ಕೂಟವನ್ನು ಆಯೋಜಿಸಲಿದ್ದಾರೆ ಎಂದು ತಿಳಿದುಬಂದಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net